ಪಹಣಿ: ತಾಲೂಕು ಕಚೇರಿಗೆ ನಿತ್ಯವೂ ರೈತರ ದಂಡಯಾತ್ರೆ
ಮಾಲೂರು: ಪಟ್ಟಣದಲ್ಲಿ ಬೆಳಗ್ಗಿನ ಜಾವ ಚಳಿ-ಗಾಳಿ ಎನ್ನದೇ ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆದರೆ ಇವರೆಲ್ಲ ತಮ್ಮ ಜಮೀನುಗಳ ಪಹಣಿ ಪಡೆಯಲು ಪರದಾಡುತ್ತಿರುವ ರೈತರು ಎಂಬುದು ತಿಳಿದಾಗ ಎಂತಹವರಿಗಾದರೂ ಅಯ್ಯೋ ಪಾಪ ಎನ್ನಿಸದಿರದು.
ಪಟ್ಟಣದ ಮಿನಿವಿಧಾನ ಸೌಧದಲ್ಲಿ ಪಹಣಿ ಪಡೆಯಲು ರೈತರು ಬೆಳಗ್ಗಿನ ಜಾವವೇ ಕುಳಿತು 10.30ಗೆ ಕೌಂಟರ್ ಪ್ರಾರಂಭವಾಗುವುದನ್ನೇ ಕಾಯುವ ಪರಿಸ್ಥಿತಿ ಇದೆ. ದಿನ ನಿತ್ಯ ಐದು ಸಾವಿರಕ್ಕೂ ಹೆಚ್ಚು ಮಂದಿ ಪಹಣಿ ಪಡೆಯಲು ಬರುತ್ತಿದ್ದಾರೆ. ಆದರೆ ಇರುವ ಒಂದು ಕೌಂಟರ್ ನಿಂದ ಎಲ್ಲರಿಗೂ ಪಹಣಿ ನೀಡಲು ಸಾಧ್ಯವಾಗುತ್ತಿಲ್ಲ.
ನಿತ್ಯ ದಂಡಯಾತ್ರೆ: ತಮ್ಮ ಜಮೀನಿಗೆ ಸಂಬಂಧಿಸಿದ ಹಳೇ ದಾಖಲೆಗಳು ಪಂಚಾಯ್ತಿಗಳಲ್ಲಿ ಲಭ್ಯವಿಲ್ಲದ ಕಾರಣ ರೈತರು ತಹಸೀಲ್ದಾರ್ ಕಚೇರಿಗೆ ನಿತ್ಯ ದಂಡಯಾತ್ರೆ ಮಾಡುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗುತ್ತಿರುವ ಈ ಕಾಲದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಕಚೇರಿ ಮುಂದೆ ನಿಂತು ಕೆಲವೂಮ್ಮೆ ಬರಿ ಕೈಯಲ್ಲಿ ಹಿಂತಿರುಗುತ್ತಿದ್ದಾರೆ.
ಇದಲ್ಲದೇ ಜು. 21 ರಿಂದ ಮಾಸ್ತಿ ನಂತರ ಇಂತ ಹೋಬಳಿಗಳಲ್ಲಿ ಪಿ ನಂಬರ್ ತೆಗೆದು ಹಾಕುವ ಸಲುವಾಗಿ ಜಿಲ್ಲಾಧಿಕಾರಿಗಳು ಚಾಲನೆ ನೀಡುತ್ತಿರುವ ಪೋಡಿ ಅದಾಲತ್ ಗಳಿಗಾಗಿ ಪಹಣಿ ಬೇಡಿಕೆ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಮಾಸ್ತಿ ಹೋಬಳಿಯ ರೈತರೇ ಹೆಚ್ಚಾಗಿ ಪಹಣಿ ಪಡೆಯಲು ಬೆಳಗ್ಗಿನಿಂದಲ್ಲೇ ಸರದಿಯಲ್ಲಿ ನಿಲುತ್ತಿದ್ದಾರೆ.
ಅಸಹಾಯಕತೆ: ತಹಸೀಲ್ದಾರ್ ನಮ್ಮಗೆ ಬೇಕಾದ ದಾಖಲೆಗಳನ್ನು ನಮ್ಮ ಪಂಚಾಯ್ತಿಗಳಲ್ಲೇ ಸಿಗುವಂತಹ ವ್ಯವಸ್ಥೆ ಮಾಡಿದ್ದರೆ ಇಲ್ಲಿ ಒದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವ ಮಾಸ್ತಿ ಗ್ರಾಮದ ರೈತ ನಾರಾಯಣಸ್ವಾಮಿರವರು ಸೋಮವಾರದಂದು ನಡೆಯಲಿರುವ ಪೋಡಿ ಅದಾಲತ್ಗೆ ದಾಖಲೆ ಸಿದ್ದಗೊಳಿಸಲು ಕಷ್ಟವಾಗುತ್ತಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಸರಳ ಜೀವನಕ್ಕೆ ಸರಳ ಭಾಷೆಯಲ್ಲಿ
ಸಾಹಿತ್ಯ ರಚನೆ: ಆರ್. ಈರಪ್ಪ
ಕೆಜಿಎಫ್: ಹರಿದಾಸರ ಸಾಹಿತ್ಯದ ಮೂಲ ಉದ್ದೇಶ ಆತ್ಮ ನಿವೇದನೆಯಾಗಿತ್ತು. ಭಕ್ತಿಯಿಂದ ಭಗವಂತನನ್ನು ಒಲಿಸಿ ಕೊಳ್ಳುವುದು ದೇವರಲ್ಲಿ ಅರಿಕೆ ಮಾಡಿಕೊಳ್ಳುತ್ತಾ ಸರಳ ಜೀವನ ನಡೆಸಲು ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿದರು ಎಂದು ಉಪಾಧ್ಯಾಯ ಆರ್.ಈರಪ್ಪ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕನ್ನಡ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಡಿ.ಶಾರದಾಂಬ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶ್ರೀಪಾದರಾಜರು ವ್ಯಾಸರಾಜರಂಥ ಯತಿಗಳು ವ್ಯಾಸ ಪಂಥದ ಜೊತೆಗೆ ದಾಸ ಪಂಥವನ್ನು ಬೆಳೆಸಿದರು. ಸಂಸ್ಕೃತ ವಾಗ್ಮಯವನ್ನು ಕನ್ನಡದಲ್ಲಿ ತರುವ ಮೂಲಕ ಪ್ರಾಚೀನ ಜ್ಞಾನ ಪರಂಪರೆ ಸಾಮಾನ್ಯ ಜನರಿಗೆ ಕನ್ನಡದಲ್ಲಿ ದೊರೆಯುವಂತಾಯಿತು ಎಂದರು.
ನರಸಿಂಹೇಗೌಡ ನಾರಣಾಪುರ, ವೀರವೆಂಕಟಪ್ಪ ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎನ್.ಆರ್.ಪುರುಷೋತ್ತಮ್, ಬಾ.ಹಾ.ಶೇಖರಪ್ಪ, ಡಾ.ರಾಧಾಪ್ರಕಾಶ್, ಮಂಜುನಾಥ್ ಹೆಗಡೆ, ಪೀತಾಂಬರರಾವ್, ದೇಶಪಾಂಡೆ, ಮಾಲ್ತೇಶ್, ನಿರ್ಮಲಾ, ಲಲಿತಾಂಬ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಡೆಂಘೀ ನಿಯಂತ್ರಣ ಜಾಥಾ
ಶಿಡ್ಲಘಟ್ಟ: ಜನರ ನೆಮ್ಮದಿಗೆ ಭಂಗ ತಂದಿರುವ ಡೆಂಘೀ ಮತ್ತು ಮಲೇರಿಯಾ ನಿಯಂತ್ರಣಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ತಾಲೂಕಿನ ಎಲ್ಲಾ ಆರೋಗ್ಯ ಸಹಾಯಕರಿಗೆ ಡೆಂಘೀ ನಿಯಂತ್ರಣ ಕುರಿತು ನಡೆದ ಜಾಥಾಗೆ ಚಾಲನೆ ನೀಡಿ ಮಾತನಾಡಿ, ನಗರದ ವಾರ್ಡ್ಗಳಲ್ಲಿ ಲಾರ್ವಾ ನಾಶ ಮಾಡಲು ಜೈವಿಕ ವಿಧಾನವಾದ ಗಪ್ಪಿ ಗಾಂಬ್ಯೂಸಿಯಾ ಮೀನು ಉಚಿತವಾಗಿ ಲಾರ್ವಾ ಕಂಡು ಬಂದ ನೀರಿನ ತೊಟ್ಟಿಗಳಿಗೆ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸೊಳ್ಳೆಗಳಿಂದ ಹರಡುವ ಜ್ವರ ಮತ್ತು ರೋಗದ ಲಕ್ಷಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಹಾಯಕ ಆರೋಗ್ಯಾಧಿಕಾರಿ ದಾದಾಪೀರ್,ನಗರಸಭೆ ಪರಿಸರ ಅಭಿಯಂತರ ದಿಲೀಪ್, ಆದೆಮ್ಮ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ನಿವಾಸಕ್ಕೆ
ದಂಡೋರ ಕಾರ್ಯಕರ್ತರ ಮುತ್ತಿಗೆ
ಚಿಂತಾಮಣಿ: ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಕಾರ್ಯಕರ್ತರು ಶಾಸಕರ ನಿವಾಸಕ್ಕೆ ಭಾನುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿ, ಮನವಿ ಪತ್ರ ಸಲ್ಲಿಸಿದರು.
ನಗರದಲ್ಲಿರುವ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ನಿವಾಸಕ್ಕೆ ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು.
ವರದಿ ಜಾರಿಯಾಗಿಲ್ಲ: ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣಪ್ಪ ಮಾತನಾಡಿ, ಸುಮಾರು 15 ವರ್ಷಗಳಿಂದ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ವಿವಿಧ ಸರ್ಕಾರಗಳು ವಿಫಲಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಸಂಪುಟದಲ್ಲಿ ವರದಿಯನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಅವರು ಆಗ್ರಹಿಸಿದರು.
ಶಾಸಕರ ಭರವಸೆ: ಮನವಿಯನ್ನು ಸ್ವೀಕರಿಸಿದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಎಂ.ಆರ್.ನಾರಾಯಣ ಸ್ವಾಮಿ, ಎಂ.ರಂಗಪ್ಪ, ಎಸ್.ಎಂ. ನರಸಿಂಹಮೂರ್ತಿ, ಆಂಜಪ್ಪ, ವೆಂಕಟರಮಣಪ್ಪ,ಶ್ರೀರಾಮಪ್ಪ, ವಿಜಯ್ ಕುಮಾರ್, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಾಲಿನ ಗುಣಮಟ್ಟ ಕಾಪಾಡಲು ಮನವಿ
ಶಿಡ್ಲಘಟ್ಟ: ಹಾಲಿನ ಉತ್ಪಾದನೆ ಜೊತೆಗೆ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಸೇರಿದಂತೆ ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ತಾಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಣಮಟ್ಟದ ಜೊತೆಗೆ ಸಹಕಾರ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕೆಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಬಯಲು ಸೀಮೆಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಕೊರತೆಯಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು, ಹೈನುಗಾರಿಕೆಯನ್ನು ಉಳಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ಎಂದರು. ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲಾಗುತ್ತಿದ್ದು, ಶಿಡ್ಲಘಟ್ಟ ತಾಲೂಕಿನಲ್ಲಿ ಹಾಲಿನಪುಡಿ ತಯಾರಿಸುವ ಘಟಕ ನಿರ್ಮಿಸಲು ಕೋಚಿಮುಲ್ ಮಂಡಳಿ ಮುಂದೆ ಬಂದರೆ ಅದಕ್ಕೆ ಅಗತ್ಯವಿರುವ ಜಾಗ ಒದಗಿಸಿಕೊಡುವುದರೊಂದಿಗೆ ತಾಲೂಕಿನ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು. ಇದೇ ವೇಳೆ ಇತ್ತೀಚಗೆ ಮೃತಪಟ್ಟ ರಾಸುಗಳ ವಿಮೆ ಚೆಕ್ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕೋಚಿಮುಲ್ ನಿರ್ದೇಶಕರಾದ ಕೆ.ವಿ. ನಾಗರಾಜ್, ಊಲವಾಡಿ ಅಶ್ವಥ್ಥನಾರಾಯಣಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ. ನಾಗರಾಜ್, ಶಿವಾರೆಡ್ಡಿ, ಪುರಸಭೆ ಸದಸ್ಯ ಅಪ್ಸರ್ ಪಾಷ, ಎಸ್. ರಾಘವೇಂದ್ರ, ನಂದುಕಿಶನ್ ಇದ್ದರು.
ಕಾಲೇಜು ಸಿಬ್ಬಂದಿ ಜಾರಿಗೆ ತಂದಿದ್ದ ದ್ವಿಪಾಳಿ ಪದ್ಧತಿಗೆ ವಿರೋಧ: ಹಳೇ ವೇಳಾಪಟ್ಟಿ ಮುಂದುವರಿಕೆ
ಕುಣಿಗಲ್: ಇತ್ತೀಚೆಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಸಿಬ್ಬಂದಿ ಜಾರಿಗೆ ತಂದಿದ್ದ ವೇಳಾಪಟ್ಟಿಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಹಳೇ ವೇಳಾಪಟ್ಟಿಯನ್ನೇ ಮುಂದುವರೆಸಲಾಗಿದೆ.
ಶನಿವಾರ ಶಾಸಕ ಡಿ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಮಂಡಳಿ ಸಭೆಯಲ್ಲಿ, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದಾಗಿ ಪಾಳಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕಾಲೇಜಿನ ಸಿಬ್ಬಂದಿ ತಮ್ಮ ಕ್ರಮ ಸಮರ್ಥಿಸಿದರು. ಇದಕ್ಕೆ ಶಾಸಕರು ಸೇರಿದಂತೆ ಮಂಡಳಿಯ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿ ಇತ್ತೀಚೆಗೆ ಗ್ರಾಮಾಂತರ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದರು. ಕೊಠಡಿಗಳ ಕೊರತೆ ಇದ್ದಲ್ಲಿ ಪಟ್ಟಣದಲ್ಲಿನ ಖಾಸಗಿ ಕಾಲೇಜು ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿನ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಿ. ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಉಪನ್ಯಾಸಕರುಗಳಿಗೂ ತೊಂದರೆಯಾಗುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಪರಿಸ್ಥಿತಿ ಅವಲೋಕಿಸಿದರೆ ವಿದ್ಯಾರ್ಥಿನಿಯರಿಗೆ ಪಾಳಿಯ ವ್ಯವಸ್ಥೆ ಸರಿ ಹೊಂದುವುದಿಲ್ಲ. ಆದ್ದರಿಂದ ಹೊಸ ವೇಳಾಪಟ್ಟಿ ಕೈಬಿಟ್ಟು ಹಳೇ ವೇಳಾಪಟ್ಟಿಯನ್ನೇ ಮುಂದುವರೆಸುವಂತೆ ಶಾಸಕರು ಸೂಚಿಸಿದರು. ಪ್ರಾಚಾರ್ಯೆ ಡಾ.ಶಶಿಕಲಾ, ಕಾಲೇಜು ತರಗತಿಗಳು ಪ್ರಾರಂಭವಾಗಿ 20 ದಿನಗಳಾದರು ತರಗತಿಗಳನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅತಿಥಿ ಉಪನ್ಯಾಸಕರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ನಾಪತ್ತೆಯಾಗುತ್ತಿದ್ದಾರೆ. ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪುರಸಭಾ ಅಧ್ಯಕ್ಷ ಕೆ.ಎಲ್.ಹರೀಶ್ ಸೇರಿದಂತೆ ಉಪನ್ಯಾಸಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

