ಕೋಲಾರ

ಕೋರಮಂಗಲ-ಚಲ್ಲಘಟ್ಟ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಕೋಲಾರಕ್ಕೆ ನೀರು ಹರಿಸಲು ಆಗ್ರಹ

Published On :

ಕೋಲಾರ: ಬೆಂಗಳೂರಿನ ಕೋರಮಂಗಲ-ಚೆಲ್ಲಘಟ್ಟ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಿ ಅಂತರ್ಜಲ ಸಮಸ್ಯೆ ನಿವಾರಣೆ ಮಾಡಬೇಕೆಂದು ಕೇಂದ್ರ ಮಾಜಿ ಸಚಿವ, ಸಂಸದ ಕೆ.ಎಚ್. ಮುನಿಯಪ್ಪ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಸದ ಕೆ.ಎಚ್. ಮುನಿಯಪ್ಪ ನೇತೃತ್ವದ ನಿಯೋಗ ವ್ಯರ್ಥವಾಗಿ ಹರಿದು ಹೋಗುತ್ತಿರುವ ಸಂಸ್ಕರಿಸಿದ ಸುಮಾರು 5 ಟಿಎಂಸಿಗೂ ಅಧಿಕವಾದ ನೀರನ್ನು ಜಿಲ್ಲೆಗೆ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ಕೋರಿದಲ್ಲದೆ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಡಿಪಿಆರ್ ತಯಾರಿಸಲು ಸೂಚಿಸುವಂತೆ ಕೋರಲಾಯಿತು.
ಯೋಜನೆಗೆ 400 ಕೋಟಿ ಬೇಕಾಗುತ್ತದೆ. ಭೂಸ್ವಾಧೀನದ ಅಗತ್ಯವಿಲ್ಲ, ಪರಿಸರ ಹಾಗೂ ಅಂತರರಾಜ್ಯ ತಂಟೆ ಬರುವುದಿಲ್ಲ ಎಂದು ಸಂಸದ ಕೆ.ಹೆಚ್. ಮುನಿಯಪ್ಪ ಸಿಎಂ ಸಿದ್ದರಾಮಯ್ಯನವರಿಗೆ ವಿವರಿಸಿದರು. ಸಂಸ್ಕರಿಸಿದ ನೀರಿನ್ನು ಕೆರೆಗಳಿಗೆ ಹರಿಸಿದಲ್ಲಿ ಕೈಗಾರಿಕೆ, ಕೃಷಿ ಮತ್ತು ಗೃಹ ಬಳಕೆಗೂ ಬಳಸಿಕೊಳ್ಳಲು ಸಹಕಾರಿ ಆಗಲಿದೆ. ಈಗಾಗಲೇ ಜಿಪಂ. ತಾಪಂ ಹಾಗೂ ಗ್ರಾಪಂಗಳಲ್ಲಿ ಈ ಸಂಬಂಧ ಒಮ್ಮತದ ನಿರ್ಣಯವಾಗಿರುವುದರಿಂದ ಯೋಜನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲವೆಂದರು. ಕೋಲಾರ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ನೀರನ್ನು ಪೈಪ್ಲೈನ್ ಮೂಲಕ ಚೆಲ್ಲಘಟ್ಟ ವ್ಯಾಲಿಯಿಂದ 75 ಕಿ.ಮೀ ದೂರದ ನರಸಾಪುರ ಸಮೀಪದ ಎತ್ತರದ ಭಾಗಕ್ಕೆ ಹರಿಸಿ ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ ಜಿಲ್ಲೆಯ ಕೆರೆಗಳಿಗೆ ಹರಿಸಬಹುದಾಗಿದ್ದು, ಇದರ ಯೋಜನಾ ಗಾತ್ರ 1100 ಕೋಟಿ ಆದರೆ. ಪರಿಷ್ಕೃತ ಯೋಜನೆಯಡಿ 400ಕೋಟಿಗೆ ಸಿಮೀತಗೊಳಿಸಲಾಗಿರುವುದರಿಂದ ಸರ್ಕಾರಕ್ಕೆ ಹೊರೆ ಆಗುವುದಿಲ್ಲವೆಂದು ಮನವರಿಕೆ ಮಾಡಿದರು.
ನಿಯೋಗದಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸಿ ಜಿಲ್ಲೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರೆಂದು ನಿಯೋಗದಲ್ಲಿದ್ದ ಮುಖಂಡರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಶೂನ್ಯ ಬಡ್ಡಿಯಲ್ಲಿ ದೀರ್ಘಾವಧಿ ಸಾಲ ವಿತರಿಸಲು 100 ಕೋಟಿ ರು. ಆರ್ಥಿಕ ನೆರವು ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮನವಿ ಸಲ್ಲಿಸಲಾಯಿತು.
ಅಲ್ಪಾವಧಿ ಸಾಲವನ್ನು ನೀಡಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ದೀರ್ಘಾವಧಿ ಸಾಲಕ್ಕೆ ಸರ್ಕಾರ 100 ಕೋಟಿ ಬಿಡುಗಡೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ದನಿಗೂಡಿಸಿದ ಸಂಸದ ಕೆ.ಹೆಚ್. ಮುನಿಯಪ್ಪ, ಹೊಸ ಆಡಳಿತ ಮಂಡಳಿ ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಕೋರ್ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಬಂದಿದೆ. ಸಾಲ ವಸೂಲಾತಿಯಲೂ ಪ್ರಗತಿ ಸಾಧಿಸುತ್ತಿರುವುದರಿಂದ ಸರ್ಕಾರ ಸಹಾಯ ಹೆಚ್ಚಿಸಬೇಕೆಂದರು.
ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ರಾಜ್ಯಸಭಾ ಸದಸ್ಯ ರಾಜೀವ್ಗೌಡ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಅನಿಲ್ ಕುಮಾರ್, ಪಕ್ಷದ ಯುವ ಮುಖಂಡರಾದ ಗೋಪಾಲಗೌಡ, ಸೊಣ್ಣೇಗೌಡ, ಗೋವಿಂದಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.