ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧತೆ
ಕ.ಪ್ರ.ವಾರ್ತೆ ಕೋಲಾರ ಜೂ.3
ಅಂತರ್ಜಲ ಪಾತಾಳ ಸೇರಿದ್ದರೂ ಕೃಷಿಯಿಂದ ವಿಮುಖರಾಗದ ಜಿಲ್ಲೆಯ ರೈತರು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಭೂಮಿ ಹದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ, ಗೊಬ್ಬರ, ಔಷಧಿಗಳಿಗೆ ಕೊರತೆ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷ1.02ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಉತ್ಪಾದನೆ ನಿರೀಕ್ಷೆ ಮಾಡಲಾಗುತ್ತಿದೆಯಾದರೂ ಮಳೆ ಅಭಾವದಿಂದ ಆಹಾರ ಉತ್ಪಾದನೆಯಲ್ಲಿ ಗುರಿ ಸಾಧನೆ ಆಗಿಲ್ಲ. ಕಳೆದ ವರ್ಷ 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು ನೆಲಗಡಲೆ ಹೊರತುಪಡಿಸಿ ರಾಗಿ, ಭತ್ತ, ತೊಗರಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳ ಉತ್ಪಾದನೆ ಶೇ.75.76ರಷ್ಟು ಆಗಿತ್ತು.
ಈ ಬಾರಿ ಮುಂಗಾರು ನಿಗದಿತ ವೇಳೆಗೆ ಜಿಲ್ಲೆಗೆ ಪ್ರವೇಶಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆಯಾದರೂ ಜುಲೈ, ಆಗಸ್ಟ್ತಿಂಗಳಲ್ಲಿ ವಾಡಿಕೆ ಮಳೆಯ ಪ್ರಮಾಣ ಇಳಿಮುಖವಾದಲ್ಲಿ ಈ ಬಾರಿಯೂ ಆಹಾರ ಉತ್ಪಾದನೆ ಕುಸಿತವಾಗುವ ಸಾಧ್ಯತೆಗಳಿವೆ.
8213 ಟನ್ ಬಿತ್ತನೆ ಬೀಜಕ್ಕೆ ಬೇಡಿಕೆ: ಪ್ರಸ್ತುತ 8213 ಮೆಟ್ರಿಕ್ ಟನ್ ಬಿತ್ತನೆ ಬೀಜಕ್ಕೆ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಿರುವ ಕೃಷಿ ಇಲಾಖೆ 1509.95 ಟನ್ ದಾಸ್ತಾನು ಮಾಡಿ ಈಗಾಗಲೇ 566.2 ಟನ್ ಬಿತ್ತನೆ ಬೀಜವನ್ನು ಸೂಸೈಟಿಗಳ ಮೂಲಕ ರೈತರಿಗೆ ವಿತರಣೆ ಮಾಡಿದೆ.
ವಿವಿಧ ತಳಿಗಳ ಭತ್ತದ ಬಿತ್ತನೆ ಬೀಜ 2508 ಟನ್ಗೆ ಬೇಡಿಕೆ ಸಲ್ಲಿಸಿದ್ದು, ವಿತರಣೆ ಇನ್ನೂ ಆಗಿಲ್ಲ. ರಾಗಿ-2200 ಬೇಡಿಕೆ ಇದ್ದು 278.4 ಟನ್ ಹಳೆ ದಾಸ್ತಾನಿನಿಂದ ಸರಬರಾಜು ಮಾಡಲಾಗಿದೆ. ನೆಲಗಡಲೆ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ರೈತರು ಬಿತ್ತನೆ ಬೀಜ ಸಿಗದೆ ಪರದಾಡುವಂತಾಗಿತ್ತು. ಕೃಷಿ ಇಲಾಖೆ 3 ಸಾವಿರ ಟನ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಒಟ್ಟು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆಯಲಾಗುತ್ತಿದ್ದು ಬಿತ್ತನೆ ಬೀಜವನ್ನು ರೈತರ ಬೇಡಿಕೆಗೆ ತಕ್ಕಂತೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮುಳಬಾಗಿಲು-7600 ಹೆಕ್ಟೇರ್, ಶ್ರೀನಿವಾಸಪುರ-3000, ಮಾಲೂರು-400, ಕೋಲಾರ-500 ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆಯನ್ನು ಬೆಳೆಯಲಾಗುತ್ತಿದ್ದು ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ 6700 ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ ಆಗಿತ್ತು.
ಗೊಬ್ಬರ ಮಾರಾಟಗಾರರೊಂದಿಗೆ ಸಂವಾದ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಾದ ಗೊಬ್ಬರ ಸಮರ್ಪಕವಾಗಿ ಸಿಗಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗೊಬ್ಬರ ಅಂಗಡಿಗಳ ಮಾಲೀಕರು, ಸರಬರಾಜುದಾರರ ಸಭೆಯನ್ನು ಹಂಗಾಮು ಪೂರ್ವದಲ್ಲೇ ಕರೆದು ಸಂವಾದ ನಡೆಸಲು ಉದ್ದೇಶಿಸಲಾಗಿದೆ. ಈ ಬಾರಿ ಯಾವುದೇ ಸಮಸ್ಯೆ ಇಲ್ಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

