ಕೋಲಾರ

ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆ

Published On :

ಮಾಲೂರು: ಸ್ಥಳೀಯ ಸಂಗೊಳ್ಳಿ ರಾಯಣ್ಣ ಕನ್ನಡ ಗೆಳೆಯರ ಬಳಗವು ಶನಿವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದ ಜೋಡಿ ರಸ್ತೆಯ ಮಧ್ಯ ಭಾಗದಲ್ಲಿ ಗಿಡವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕಾಗಿ ನಾಡು ಸಿಮೆಂಟ್ ನಾಡನ್ನಾಗಿ ಮಾಡುತ್ತಿರುವ ಇಂತಹ ಸನ್ನಿವೇಶದಲ್ಲಿ ಪರಿಸರ ಉಳಿಸುವುದಕ್ಕಾಗಿ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ದೇಶದ ಆಶಾ ಕಿರಣವಾಗಿರುವ ಯುವ ಸಮುದಾಯದವರು ತಮ್ಮ ಸುತ್ತಮುತ್ತಲು ಹಸಿರು ಪರಿಸರ ನಿರ್ಮಿಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದ ಅವರು, ತಾಲೂಕಿನಲ್ಲಿ ಹೇರಳವಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಬಿದಿರು ಮರಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದ್ದು, ರೈತಾಪಿ ವರ್ಗ ಸಹಕಾರ ನೀಡಬೇಕೆಂದು ಮನವಿ ಮಾಡಿದರು.  ವಿಶ್ರಾಂತ ಉಪನ್ಯಾಸಕ ನಾಗರಾಜಯ್ಯ, ತಾಲೂಕು ಪಂಚಾಯ್ತಿ ಸದಸ್ಯ ಎಸ್.ವಿ.ಲೋಕೇಶ್, ತರಂಗ ಐಟಿಐ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್, ನಿವೃತ್ತ ಪೊಲೀಸ್ ಅಧಿಕಾರಿ ರಾಮಯ್ಯ, ಸಂಘಟನೆ ಅಧ್ಯಕ್ಷ ಅನಿಲ್ ಕುಮಾರ್, ಪ್ರಶಾಂತ್, ಅಮರ್‌ನಾರಾಯಣ್, ಸುನಿಲ್, ಸುರೇಶ್ ಇದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ 150 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.


ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ
ಮಾಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಗ್ರಹಿಸಿ ಇಲ್ಲಿನ ಮಾಲೂಕು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಾಲೂಕು ಕ್ಷೇತ್ರಾ ಶಿಕ್ಷಣಾಧಿಕಾರಿಗಳನ್ನು  ಶನಿವಾರ ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಸುಬ್ರಮಣ್ಯ, ಶಿಕ್ಷಕರ ಬೇಡಿಕೆ ಸಮಂಜಸವಾಗಿದ್ದು, ಹಂತ-ಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಬಹದ್ದೂರ್ ಸಾಬ್, ಉಪಾಧ್ಯಕ್ಷ ವಿಜಯ್‌ಕುಮಾರ್, ಟಿ.ಎ.ರಾಮಪ್ಪ, ಅಶ್ವಥ್‌ನಾರಾಯಣ್ ಶೆಟ್ಟಿ, ರಾಧಾರುಕ್ಮಣಿಯಮ್ಮ, ಚಂದ್ರಮ್ಮ, ಮಂಜುಳಾ ದೇವಿ, ಎಂ.ಜಿ.ನಾಗರಾಜ್, ಚಿಕ್ಕರಾಮಾಂಜನೇಯ, ಭಗವತ್ ಸಿಂಗ್, ಶ್ರೀನಿವಾಸ್,ರಮೇಶ್,ಗೌರಪ್ಪ,ಸಂಜೀವಪ್ಪ,ದೂಡ್‌ಡಿ ನಾರಾಯಣಸ್ವಾಮಿ, ಕೆ.ನಾಗರಾಜು ಇದ್ದರು.
ಕಬಡ್ಡಿ ಕೋಚ್ ಕಾರ್ಯಾಗಾರ
ಚಿಕ್ಕಬಳ್ಳಾಪುರ: ದೇಶೀಯ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿ ನುರಿತ ಕ್ರೀಡಾಪಟುಗಳನ್ನು ತಯಾರು ಮಾಡಲು ಕ್ರೀಡಾ ತರಬೇತುದಾರರು ಹೆಚ್ಚಿನ ಗಮನ ಕೊಡಬೇಕೆಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಎ.ಕೃಷ್ಣಮೂರ್ತಿ ಸಲಹೆ ನೀಡಿದರು.  ನಗರದ ಹೂರ ವಲಯದ ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ಹಾಗೂ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಧಿಕಾರಿಗಳ ಗುಣಮಟ್ಟ ಹೆಚ್ಚಿಸುವುದರಿಂದ ಕ್ರೀಡೆಗಳ ಗುಣಮಟ್ಟ ಹೆಚ್ಚುತ್ತದೆ. ಮಾತ್ರವಲ್ಲ, ಕ್ರೀಡಾಧಿಕಾರಿಗಳು ಕ್ರೀಡಾಧಿಕಾರತ್ವದ ಬೆಳವಣಿಗೆಗೆ ಅವಶ್ಯವಿರುವ ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಪ್ರಾಂಶುಪಾಲ ವೆಂಕಟೇಶ್ ತಿಳಿಸಿದರು. ಕಬಡ್ಡಿ ಸಂಸ್ಥೆ ಸಹ ಉಪಾಧ್ಯಕ್ಷ ಬಾಲಾಜಿ ವೆಂಕಟೇಶ್, ರಾಜ್ಯ ಕಬಡ್ಡಿ ತೀರ್ಪುಗಾರ ಮಂಡಳಿ ಅಧ್ಯಕ್ಷ ಶಾಮಣ್ಣಗೌಡ, ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರರಾದ ಡಾ. ಈಶ್ವರ್ ಅಂಗಡಿ, ಮಹಮದ್ ಇಸ್ಮಾಯಿಲ್, ಮಂಜುನಾಥ್, ರಾಷ್ಟ್ರೀಯ ಕ್ರೀಡಾ ತರಬೇತುದಾರರಾದ ಶ್ರೀಧರ್ ಕುಮಾರ್, ಸುಮನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಕೇಸು ವಾಪಸ್
ತುಮಕೂರು: ವಿಶ್ರಾಂತ ಕುಲಪತಿ ಎಸ್.ಸಿ. ಶರ್ಮಾ ಅವರ ಕಾಲದಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಕಡಿತ ಮಾಡಿದ್ದನ್ನು ವಿರೋಧಿಸಿ ಸರಣಿ ಪ್ರತಿಭಟನೆ ನಡೆಸಿದ ಮೇಲೆ ವಿದ್ಯಾರ್ಥಿಗಳ ಮೇಲೆ ಹಾಕಲಾಗಿದ್ದ ಎಲ್ಲಾ ಕೇಸುಗಳನ್ನು  ತುಮಕೂರು ವಿವಿ ವಾಪಸ್ ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.