ಕೋಲಾರ

ಮಾಲೂರು ತಾಲೂಕು ಕೆರೆಗಳ ರಕ್ಷಿಸಿ

Published On :

ರಾಜೇಂದ್ರ ವೈದ್ಯ
ಮಾಲೂರು: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಯೋಜನೆಗಳ ಮೇಲೆ ಯೋಜನೆ ರೂಪಿಸುತ್ತಿದೆ. ವಿಪರ್ಯಾಸ ಎಂದರೆ ಈಗಿರುವ ಜಲಮೂಲಗಳ ರಕ್ಷಣೆಗೆ ಮುಂದಾಗಿರುವುದು!
ಇದಕ್ಕೆ ಉದಾಹರಣೆ ಎಂದರೆ ಮಾಲೂರು ತಾಲೂಕಿನ ಕೆರೆಗಳು. ಸರ್ಕಾರಿ ದಾಖಲೆಗಳ ಪ್ರಕಾರ  ಇರುವ 329 ಕೆರಗಳಲ್ಲಿ ಪಟ್ಟಣದ ದೊಡ್ಡ ಕೆರೆ ಸೇರಿ, 25 ದೂಡ್ಡ ಕೆರೆಗಳಿವೆ. ಮೂರು ದಶಕಗಳ ಹಿಂದೆ ತಂಬಿ ತುಳುಕುತ್ತಿದ್ದ ತಾಲೂಕಿನ ಕೆರೆಗಳು ಅಂದು ಇದ್ದ ತಮ್ಮ ಸ್ವರೂಪವನ್ನೇ ಈಗ ಕಳೆದುಕೊಂಡಿವೆ. ಇದಕ್ಕೆ ಮುಖ್ಯ ಕಾರಣ ಭೂಮಿಯ ಬೆಲೆ ಹೆಚ್ಚಾಗಿ ಭೂ ಮಾಫಿಯಾದವರ ಕಣ್ಣು ಬಿದ್ದಿರುವುದು. ಬೆಂಗಳೂರಿಗೆ ಸಮೀಪ ಇರುವ ಮಾಲೂರಿನಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ತಾಲೂಕಿನ ಸುತ್ತಮುತ್ತಲ ಭೂಮಿಯ ಬೆಲೆ ಗಗನಕ್ಕೇರಿದೆ. ನೂತನ ಬಡಾವಣೆಗಳು ರಾಜಕಾಲುವೆ-ಕುಂಟೆಗಳನ್ನು ನುಂಗಿ ನಿರ್ಮಾಣವಾಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿರುವುದರಿಂದ ಪಟ್ಟಣದ ರಾಜ ಕಾಲುವೆಗೆ ಮೇಲೆಯ ಅಕ್ರಮವಾಗಿ ಸೇತುವೆ-ರಸ್ತೆಗಳನ್ನು ನಿರ್ಮಿಸಲು ಹೊರಟ್ಟಿದ್ದಾರೆ.
ತಾಲೂಕಿನಲ್ಲಿ ಸರಾಸರಿ ಮಳೆಯಾಗದೆ ದಶಕಗಳೇ ಕಳೆದಿದೆ. ಈ ವರ್ಷ ಬೇಸಿಗೆ ಕಾಲದಲ್ಲಿ ಬಿದ್ದ ಅಕಾಲಿಕ ಮಳೆ ಪ್ರಮಾಣ 186.6 ಮೀ.ಮೀ. ಅದರಲ್ಲಿ ಕಳೆದ ಮೇ ಹಾಗೂ ಜೂನ್ ಪ್ರಥಮ ವಾರದಲ್ಲಿ ಬಿದ್ದ ಮಳೆಯೇ 150 ಮೀ.ಮೀ. ಆಗಿದೆ. ಇದರಿಂದ ತಾಲೂಕಿನಲ್ಲಿ ಹಲವಡೆ ಸಣ್ಣಕೆರೆ-ಕುಂಟೆಗಳು ತುಂಬಿವೆ. ಆದರೆ ದೊಡ್ಡ ಕೆರೆಗಳಿಗೆ ನೀರೇ ಹರಿದಿಲ್ಲ. ಇದಕ್ಕೆ ಮುಖ್ಯ ಕಾರಣ ಕೆರೆಯ ಹಾಗೂ ಅದಕ್ಕೆ ಬರುವ ರಾಜ ಕಾಲುವೆಗಳು ಮುಚ್ಚಿ ಹೋಗಿರುವುದು. ಇಲ್ಲಿನ ನಗರ ಅಭಿವೃದ್ಧಿ ಪ್ರಾಧಿಕಾರ ರಸ್ತೆಯಿಲ್ಲದಿದ್ದರೂ ರಾಜಾಕಾಲುವೆ ಪಕ್ಕ ಬಡಾವಣೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಪಟ್ಟಣದ ದೊಡ್ಡಕೆರೆಯೂ ಇದರಿಂದ ಹೊರತಾಗಿಲ್ಲ. ಇನ್ನೊಂದೆಡೆ ಕೆರೆಗೆ ನೀರು ಹರಿದು ಬರುವ ಯಶವಂತಪುರ ಕಾಡು, ಚೂಕ್ಕಂಡಹಳ್ಳಿ-ಮಡಿವಾಳ ಗ್ರಾಮಗಳಲ್ಲಿದ್ದ ಕಾಲುವೆಗಳು ಮುಚ್ಚಿಹೋಗಿವೆ. ಇದರಿಂದ ಕೆರೆಗ 5 ಕಿ.ಮೀ.ದೂರದಿಂದ ಬರುತ್ತಿದ್ದ ನೀರು ರಸ್ತೆ ಬದಿ ಇರುವ ಖಾಸಗಿ ವ್ಯಕ್ತಿಗಳ ಜಮೀನು ಸೇರುತ್ತಿದೆ. ಇಟ್ಟಿಗೆ ಕಾರ್ಖಾನೆಗಳು ಕಾಲುವೆಯನ್ನೇ ತಮ್ಮ ಕಾರ್ಖಾನೆಯ ಮಣ್ಣು ಶೇಖರಿಸುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಚಕಾರ ಎತ್ತುತ್ತಿಲ್ಲ.
ಮಳೆಗಾಲ ಪ್ರಾರಂಭವಾಗುತ್ತಿದ್ದು, ರಾಜಾಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿರಬೇಕಾಗಿದೆ. ಕೆರೆಗಳ ಅಭಿವೃದ್ಧಿ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಸಂಘಗಳು ಇದಕ್ಕಾಗಿ ತಮ್ಮ ರೂಪರೇಷೆ ಬದಲಾಯಿಸಿ ನಮ್ಮ ಕೆರೆ-ಕುಂಟೆಗಳನ್ನು ಉಳಿಸಿಕೊಳ್ಳಲು ವಾಚ್ ಡಾಗ್ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಇನ್ಸಿನರೇಟರ್ ಒದಗಿಸಲು ಅನುದಾನದ ಕೊರತೆ

ಕೋಲಾರ: ರಾಜ್ಯ ಸರ್ಕಾರ ಹೆಣ್ಣು ಮಕ್ಕಳು ಇರುವ ಶಾಲೆಗಳಲ್ಲಿ ಇನ್ಸಿನರೇಟರ್ ಅಳವಡಿಸಲು ಕಾರ್ಯಕ್ರಮ ರೂಪಿಸಿದೆ. ಆದರೆ, ಅನುದಾನದ ಕೊರತೆಯಿಂದಾಗಿ ಇದುವರೆಗೂ ಜಾರಿಯಾಗಿಲ್ಲ.
ಹೆಣ್ಣು ಮಕ್ಕಳು ಮುಟ್ಟಾದಲ್ಲಿ(ರಜಸ್ವಲೆ)ಶೌಚಾಲಯಗಳಲ್ಲಿ ಸುರಕ್ಷತೆಗಾಗಿ ಬಳಕೆ ಮಾಡುವ ಪದಾರ್ಥಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡುವುದಕ್ಕೆ ತ್ಯಾಜ್ಯ ಘಟಕದ ರೀತಿಯಲ್ಲಿ ಇನ್ಸಿನರೇಟರ್  ಘಟಕವನ್ನು ಅಳವಡಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ.  ಈ ಯೋಜನೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆಯು ಅನುದಾನ ಮೀಸಲಿಟ್ಟಿಲ್ಲ. ರಾಜ್ಯದ ಬಹುತೇಕ ಶಾಲೆಗಳು ನಿರ್ಮಲ ಭಾರತ ಅಭಿಯಾನದಡಿ 2014-15ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಿಡಿಸಿವೆ. ಬಂಗಾರಪೇಟೆ ತಾಲೂಕಿನ 24, ಕೋಲಾರ-23, ಮಾಲೂರು-18, ಮುಳಬಾಗಲು-21 ಹಾಗೂ ಶ್ರೀನಿವಾಸಪುರ ತಾಲೂಕಿನ 22 ಶಾಲೆಗಳು ಸೇರಿ ಒಟ್ಟು 108 ಶಾಲೆಗಳಲ್ಲಿ ಇನ್ಸಿನರೇಟರ್  ಅಳವಡಿಸಲು ಅಳವಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಪಂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೆ ಹಣ ಮಂಜೂರಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.