ಲಗ್ನದ ಅವಸರಕ್ಕೆ ಬಿದ್ದು ಸೋದರ ಮಾವನ ಕೊಂದು ಪೊಲೀಸರ ಗುಂಡಿಗೆ ಬಲಿಯಾದ!
ಕೋಲಾರ: ಮದುವೆ ವಿಚಾರದಲ್ಲಿ ಉಂಟಾದ ಅಸಮಾಧಾನದಿಂದ ಯುವಕ ತನ್ನ ಸೋದರ ಮಾವನನ್ನು ಮುಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ನಂತರ ಪೊಲೀಸರ ಜೊತೆ ನಡೆದ ಸಂಘರ್ಷದಲ್ಲಿ ಗುಂಡೇಟಿಗೆ ಬಲಿಯಾದ ಸಿನಿಮೀಯ ಘಟನೆ ಸೋಮವಾರ ಕೋಲಾರ ತಾಲೂಕಿನ ಖಾಲಿಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಮುನಿಯಪ್ಪ(60). ಪೊಲೀಸ್ ಗುಂಡಿಗೆ ಬಲಿಯಾದ ಯುವಕ ರಾಮು(28)
ಕೊಲೆಯಾದ ಮುನಿಯಪ್ಪ ಅವರ ಪತ್ನಿಗೂ ವೆಂಕಟಮ್ಮಗೆ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು ಆರೋಪಿ ರಾಮು ಜತೆ ಸಂಧಾನಕ್ಕೆ ಮುಂದಾಗಿದ್ದಾರೆ. ಆದರೆ ಆರೋಪಿ ಇದ್ಯಾವುದಕ್ಕೆ ಜಗ್ಗಿಲ್ಲ. ಮನೆಯೊಳಗೇ ಅವಿತಿದ್ದರಿಂದ ಪೊಲೀಸರು ಕಿಟಕಿಯಿಂದ ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ, ಕೊಲೆಯಾದ ಮುನಿಯ್ಪಪನ ದೇಹವನ್ನು ಮನೆಯ ಕೊಠಡಿಯೊಂದಕ್ಕೆ ಎಳೆದೊಯ್ದು ಅಕ್ಕಿ ಮೂಟೆಗಳ ಮೇಲೆ ಹಾಕಿದ್ದಾನೆ. ಇದೇ ಈ ಸಂದರ್ಭವನ್ನು ಬಳಸಿಕೊಂಡು ಮನೆಯ ಬಾಗಿಲು ಮುರಿದು ಬಳ ಪ್ರವೇಶಿಸಿ ಪೊಲೀಸರು ತೀವ್ರ ಗಾಯಗೊಂಡಿದ್ದ ಮುನಿಯಪ್ಪ ಪತ್ನಿ ವೆಂಕಟಮ್ಮನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೊಠಡಿಯಲ್ಲಿ ಅಡಗಿದ್ದ ಆರೋಪಿಯನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಆಗ ಆತ ಪೇದೆಯೊಬ್ಬರ ಬಂದೂಕು ಕಸಿದು ದಾಳಿ ನಡೆಸುವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಪೊಲೀಸರು ಮತ್ತು ಆರೋಪಿ ಮಧ್ಯೆ ಘರ್ಷಣೆ ನಡೆದಿದೆ. ಕೋಲಾರ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಮಹದೇವಪ್ಪ, ಪೇದೆಗಳಾದ ಡಿ.ಎ.ಆರ್.ನಾರಾಯಣಸ್ವಾಮಿ, ಗ್ರಾಮಾಂತರ ಠಾಣೆಯ ನಾರಾಯಣಸ್ವಾಮಿ ಗಾಯಗೊಂಡಿದ್ದಾರೆ. ಒಟ್ಟಾರೆ ನಡೆದ ಘಟನೆ ಬಗ್ಗೆ ಗ್ರಾಮಾಂತರ ಸಿಪಿಐ ಸುಧಾಕರ್, ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಪ್ರತಿ ದಾಳಿ ನಡೆಸುವ ಬಗ್ಗೆ ಅನುಮತಿ ಪಡೆದಿದ್ದಾರೆ. ನಂತರ ಆರೋಪಿ ರಾಮುಗೆ ಗುಂಡು ಹಾರಿಸಿದ್ದಾರೆ. ಗುಂಡು ಬೀಳುತ್ತಿದ್ದಂತೆ ನೆಲಕ್ಕುರುಳಿದ ರಾಮುನನ್ನು ಕೋಲಾರದ ಜಾಲಪ್ಪ ಆಸ್ಪತ್ರೆ ಸೇರಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸತ್ತಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲೋರಿ, ಡಿವೈಎಸ್ಪಿ ಅಶೋಕ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನಿಖೆ ಮುಂದುವರೆದಿದೆ.
ಬೆಂಗಳೂರಿನಿಂದ ಮಾವನ ಮನೆಗೆ ಬಂದಿದ್ದ ಅಳಿಯ
ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿಯಲ್ಲಿ ಮುನಿಯಪ್ಪ, ಪತ್ನಿ ವೆಂಕಟಮ್ಮ, ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದಾರೆ. ಇವರ ತಂಗಿ ನಾರಾಯಣಮ್ಮಳನ್ನು ಬೆಂಗಳೂರಿನಲ್ಲಿದ್ದ ಪೇದೆಗೆ ಕೊಟ್ಟಿದ್ದಾರೆ. ಇವರಿಗೆ ರಾಮು ಎಂಬ ಮಗನಿದ್ದಾನೆ. ಗಂಡ ಸತ್ತ ಬಳಿಕ ಪೇದೆ ಕೆಲಸ ನಾರಾಯಣಮ್ಮಗೆ ಸಿಕ್ಕಿತ್ತು. ಕೆಲಸವಿಲ್ಲದೆ ಖಾಲಿ ಇದ್ದ ರಾಮುನನ್ನು ಮುನಿಯಪ್ಪ ತನ್ನ ಬಳಿಯೇ ಇಟ್ಟುಕೊಂಡು ಕೊಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಲ್ಲದೆ, ತನ್ನ ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬಳನ್ನು ಮದುವೆ ಮಾಡಿಕೊಡುವುದಾಗಿ ಹೇಳಿದ್ದ. ತಾಳ್ಮೆಯಿಂದ ಇರಬೇಕಾಗಿದ್ದ ರಾಮು ಆಗಾಗ ಮದುವೆ ವಿಚಾರ ಪ್ರಸ್ತಾಪಿಸುತ್ತಿದ್ದ, ಮನೆಯಲ್ಲಿ ಮಗಳಿಗಿಂತ ದೊಡವರು ಇದ್ದಾರೆ. ಇವರ ಮದುವೆ ನಂತರ ನಿನ್ನ ಮದುವೆ ಎಂದು ಮುನಿಯಪ್ಪ ಸಮಾಧಾನ ಹೇಳಿದ್ದರು. ಆದರೆ, ಭಾನುವಾರ ರಾತ್ರಿ ಅತ್ತೆ ಮಾವನ ಜೊತೆ ಮಾತನಾಡಬೇಕಿದೆ. ನೀವೆಲ್ಲರೂ ಹೊರಗೆ ಇರಿ ಎಂದು ಮನೆಯ ಇತರನ್ನು ಹೊರಗೆ ಕಳುಹಿಸಿದ್ದಾನೆ. ರಾತ್ರಿ ಹನ್ನೊಂದು ಗಂಟೆಯಿಂದ ಬೆಳಗಿನ ಮೂರು ಗಂಟೆಯ ತನಕ ಮದುವೆ ವಿಚಾರದಲ್ಲಿ ಜಗಳ ಮಾಡಿ ತನ್ನ ಬಳಿಯಿದ್ದ ಮುಚ್ಚಿನಿಂದ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದಾನೆ. ಕೊನೆಗೆ ಅತ್ತೆ-ಮಾನವನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ಮಾವ ಮುನಿಯಪ್ಪ ಸತ್ತರೆ, ಪತ್ನಿ ವೆಂಕಟಮ್ಮ ಗಾಯಗೊಂಡಿದ್ದಾರೆ. ಮನೆಯ ಬಾಗಿಲು ಹಾಕಿಕೊಂಡು ದುಷ್ಕತ್ಯ ನಡೆಸಿರುವುದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

