ಕೋಲಾರ

ಟೇಕಲ್ ರಸ್ತೆ ಅಗಲೀಕರಣ ಅವೈಜ್ಞಾನಿಕ

Published On :

ಕೋಲಾರ: ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕೋಲಾರ-ಟೇಕಲ್ ರಸ್ತೆಯ ಅಗಲೀಕರಣಕ್ಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಚಾಲನೆ ಸಿಕ್ಕಿ ಕಾರಣಾಂತರಗಳಿಂದ ಸ್ಥಿಗತಗೊಂಡಿದ್ದ ಕಾಮಗಾರಿ ಈಗ ಚುರುಕುಗೊಂಡಿದೆಯಾದರೂ ದೂರದೃಷ್ಟಿ ಕೊರತೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಅನುಮಾನ ಕಾಡತೊಡಗಿದೆ.
ಅಭಿವೃದ್ಧಿಯ ದೃಷ್ಟಿಯಿಂದ ಬೃಹದಾಕಾರವಾಗಿ ಬೆಳೆದಿದ್ದ ಮರಗಳನ್ನು ಕತ್ತರಿಸಿದರೂ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ, ಆದರೆ, ರಸ್ತೆಯ ಹತ್ತಾರು ವಿದ್ಯುತ್ ಕಂಬಗಳು ಸಂಚಾರಕ್ಕೆ ಅಡ್ಡಿ ಉಂಟುಮಾಡುವಂತಿದ್ದರೂ ಲೋಕೋಪಯೋಗಿ ಇಲಾಖೆಯವರು ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವುದು ಟೀಕೆಗೆ ಗ್ರಾಸವಾಗಿದೆ.
ಹೊಸದಾಗಿ ನಿರ್ಮಿಸಿರುವ ಚರಂಡಿಗಳ ಸಾಲಿನಿಂದ ಸುಮಾರು 3-4 ಅಡಿ ಅಂತರದಲ್ಲಿ ವಿದ್ಯುತ್ ಕಂಬಗಳು ಇದ್ದು ಜೋಡಿ ರಸ್ತೆಯಾದಾಗ ವಾಹನಗಳು ಕ್ರಮಬದ್ಧವಾಗಿ ಸಂಚರಿಸಲು ಅನಾನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಇದೇ ರಸ್ತೆಯಲ್ಲಿನ ಬಾಪುಜಿ ವಿದ್ಯಾ ಸಂಸ್ಥೆಯ ಎದುರು ಇರುವ ಹಳೇ ಟ್ರಾನ್ಸ್‌ಫಾರ್ಮರ್ ಅನ್ನು ಸ್ಥಳಾಂತರ ಮಾಡಿಲ್ಲ, ಇದಕ್ಕೆ ಹಾಕಿರುವ ತಂತಿ ಬೇಲಿ ರಸ್ತೆಯನ್ನು ಅವರಿಸಿಕೊಂಡಿದ್ದು ಯಾವುದೇ ಮುಂದಾಲೋಚನೆ ಇಲ್ಲದೆ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮನೆ ಮಾಲೀಕರ ಜೊತೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಅವಕಾಶಗಳು ಇದ್ದರೂ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ, ಸುಮಾರು ಒಂದುವರೆ ಜಾಗ ಬಿಟ್ಟು ರಸ್ತೆ ಕಾಮಗಾರಿ ನಡೆಸಲಾಗಿದೆ, ಈ ಸಮಸ್ಯೆ ಈಗ ನಿವಾರಣೆ ಆಗದಿದ್ದರೆ ಮುಂದೆಂದೂ ಇತ್ಯರ್ಥವಾಗಲಾರದು, ಟೇಕಲ್ ರಸ್ತೆಯನ್ನು ಒಂದು ಮಾದರಿ ಜೋಡಿ ರಸ್ತೆಯನ್ನಾಗಿ ಮಾಡಬಹುದು, ರಸ್ತೆಯ ಇಕ್ಕಲಡೆಗಳಲ್ಲಿ ಮರಗಳನ್ನು ಬೆಳೆಸಿ ಪರಿಸರ ಕಾಪಾಡಬಹುದು, ಆದರೆ. ಅಧಿಕಾರಿಗಳು ದೂರದೃಷ್ಟಿ ಇಲ್ಲದೆ ಬೇಕಾಬಿಟ್ಟಿಯಾಗಿ ರಸ್ತೆ ಕಾಮಗಾರಿಗೆ ಕೈಗೊಂಡಿದ್ದಾರೆ, ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದೇ ಹೊರತು ಮಾದರಿ ರಸ್ತೆ ಆಗಲಾರದು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲಾರ-ಟೇಕಲ್ ರಸ್ತೆ ನಗರದಲ್ಲೇ ಒಂದು ಮಾದರಿ ಜೋಡಿ ರಸ್ತೆ ಆಗಬಹುದಾಗಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ವಿದ್ಯುತ್ ಕಂಬಗಳನ್ನು ತೆರವು ಮಾಡಿಸದಿದ್ದರೆ ಸುಗಮ ಸಂಚಾರಕ್ಕೆ ಪ್ರಯೋಜನವಾಗುವುದಿಲ್ಲ. ರಸ್ತೆ ಕಾಮಗಾರಿ ಮುಗಿದ ನಂತರ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿದಲ್ಲಿ ರಸ್ತೆಯ ಗುಣಮಟ್ಟ ಹಾಗೂ ಸರ್ಕಾರಿ ಹಣ ಪೋಲು ಆಗುತ್ತದೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಂಡರೆ ರಸ್ತೆ ಅಗಲೀಕರಣದ ಉದ್ದೇಶ ಸಾರ್ಥವಾಗುತ್ತದೆ.
ಟಿ  ಜಿ.ಶ್ರೀನಿವಾಸ್, ಅಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.