ಕೋಲಾರ

ಡಿಸಿಸಿ ಬ್ಯಾಂಕ್‌ನಿಂದ ರು. 3 ಕೋಟಿ ಸಾಲ

Published On :

ಕನ್ನಡಪ್ರಭವಾರ್ತೆ, ಕೋಲಾರ, ಜೂ.18
ಸಾಲ ಮನ್ನಾ ಆಲೋಚನೆ ಬಿಟ್ಟು ಡಿಸಿಸಿ ಬ್ಯಾಂಕಿನ ಮೂಲಕ ಪಡೆದಿರುವ ಸಾಲ ಮರು ಪಾವತಿಗೆ ಬದ್ಧ ತೆ ತೋರಬೇಕೆಂದು ರೈತರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಅವರು, ಡಿಸಿಸಿ ಬ್ಯಾಂಕ್, ದಕ್ಷಿಣ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ 3 ಕೋಟಿ ರು. ಸಾಲ ವಿತರಣೆ ಹಾಗೂ ಎಂ.ಪಿ.ಸಿ.ಎಸ್.ಗಳ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ ಹಾಗೂ ಬಡ್ಡಿಯನ್ನು ಸರ್ಕಾರವೇ ಸಮರ್ಪಕ ಮರುಪಾವತಿ ನಂತರ ಬ್ಯಾಂಕಿಗೆ ತುಂಬುವುದರಿಂದ ಸಾಲ ಮನ್ನಾದಂತಹ ಘೋಷಣೆಗಳ ನಿರೀಕ್ಷೆ ಮಾಡದೆ ಸಾಲ ಮರುಪಾವತಿ ಮಾಡುವಂತೆ ತಿಳಿಸಿದರು.
ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ ಮಾತ್ರವೇ ಬಡ್‌ಡಿ ರಿಯಾಯಿತಿ ಸಿಗುತ್ತದೆ ಎಂಬ ಸತ್ಯವನ್ನು ರೈತರು ಅರಿಯಬೇಕು. ಹಿಂದೆ ಆಡಳಿತ ಮಂಡಳಿ ಕಾರ್ಯನಿರ್ವಹಣೆಯಲ್ಲಿ ವಿಫಲತೆಯಿಂದಾಗಿ ಬ್ಯಾಂಕ್ ಸಂಕಷ್ಟದತ್ತ ಸಾಗಿತ್ತು, ಇದಕ್ಕೆ ಸಾಲ ಮರುಪಾವತಿಯಲ್ಲಿ ಬದ್ಧತೆ ತೋರದ ರೈತರು, ಸಹಕಾರಿಗಳು, ರಾಜಕಾರಣಿಗಳು,ಅಧಿಕಾರಿಗಳು ಸೇರಿದಂತೆ ಎಲ್ಲರೂ ಹೊಣೆಗಾರರೇ ಎಂದರು.
ಸಹಕಾರಿ ಬ್ಯಾಂಕ್ ಆಗಿರುವುದರಿಂದ ರೈತರು ಬ್ಯಾಂಕ್‌ನ ಕಾರ್ಯವೈಖರಿ ಕುರಿತು ಕಣ್ಣಿಟ್ಟಿರಬೇಕು, ಇಲ್ಲೇ ನಂಬಿಕೆಯಿಟ್ಟು ವಹಿವಾಟು ನಡೆಸಬೇಕು, ತಪ್ಪುಗಳು ಗಮನಕ್ಕೆ ಬಂದರೆ ಗಟ್ಟಿಧ್ವನಿಯಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದಕ್ಷಿಣ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ತಾನು ಉಳಿಸಿಕೊಂಡಿದ್ದ 16 ಲಕ್ಷ ರು. ಸುಸ್ತಿ ಸಾಲ ಪಾವತಿ ಮಾಡಿದ್ದು, ಇದಕ್ಕೆ 3 ಕೋಟಿ ರು.ಗಳ ಸಾಲ ಸೌಲಭ್ಯ ಇಂದು ಒದಗಿಸಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ವಹಿವಾಟು ಪುನರಾರಂಭಿಸಿದರೆ ರೈತರಿಗೆ ಅಗತ್ಯವಾದ ಹಸುಸಾಲವನ್ನು ಒದಗಿಸುವುದಾಗಿ ತಿಳಿಸಿ, ಸಾಲಕ್ಕೆ ಸೀಮಿತ ಬೇಡ, ಎಲ್ಲಾ ವಹಿವಾಟು ಇಲ್ಲೇ ನಡೆಸಿ ಎಂದರು. ಕಸಬಾ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಛತ್ರಕೋಡಿಹಳ್ಳಿ ಮುನೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ಸ್‌ಹಾಯದಿಂದ ಸೊಸೈಟಿ ಅಭಿವೃದ್ಧಿ ಸಾಧ್ಯವಾಗುತ್ತಿದೆ, 3 ಕೋಟಿ ರು. ಸಾಲ ನೀಡಿಕೆಯಿಂದ ಖುಷಿ ತಂದಿದೆ ಎಂದರು.
ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ಜಿಲ್ಲೆಯ ಎಲ್ಲಾ ಎಂಪಿಸಿಎಸ್‌ಗಳ ವಹಿವಾಟನ್ನು ಡಿಸಿಸಿ ಬ್ಯಾಂಕಿನಲ್ಲೇ ನಡೆಸಲು ಮುಂದಿನ ಎಂಪಿಸಿಎಸ್ ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ವಿ. ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮೇಗೌಡ, ಎಂ.ಸಿ. ನೀಲಕಂಠೇಗೌಡ,
ಕೆ.ವಿ. ದಯಾನಂದ್, ಎನ್. ಶಂಕರನಾರಾಯಣಗೌಡ, ಎಂ. ಕೃಷ್ಣೇಗೌಡ, ಹೆಚ್.ನರಸಿಂಹರೆಡ್ಡಿ, ಹನುಮಂತರೆಡ್ಡಿ, ಬ್ಯಾಂಕ್ ಎಂ.ಡಿ ವೆಂಕಟೇಶಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸೋಮಶೇಖರಯ್ಯ ಮತ್ತಿತರರು ಇದ್ದರು. ಸಹಕಾರಿ ಯೂನಿಯನ್ ಸಿಇಒ ಮಹದೇವಯ್ಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.