ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಾಂತಿಯುತ ಮತದಾನ
ಕನ್ನಡಪ್ರಭ ವಾರ್ತೆ , ಕೋಲಾರ , ಜೂ.20
ತೀವ್ರ ಕುತೂಹಲ ಮೂಡಿಸಿರುವ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು ಶೇ.54.56 ರಷ್ಟು ಮತದಾನವಾಗಿದೆ.
ಬಿಜೆಪಿಯಿಂದ ಮರು ಆಯ್ಕೆ ಬಯಸಿ ಡಾ. ಶಿವಯೋಗಿಸ್ವಾವು, ಜೆಡಿಎಸ್ನಿಂದ ಚೌಡರೆಡ್ಡಿ, ಕಾಂಗ್ರೆಸ್ಸಿನಿಂದ ಮುರಿಗೇಂದ್ರಪ್ಪ ಸೇರಿದಂತೆ 12 ಮಂದಿ ಸ್ಪರ್ಧಿಸಿದ್ದರು.
ಕೋಲಾರ ಜಿಲ್ಲೆಯಲ್ಲಿ ಐದು ತಾಲೂಕಿನ 15 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಮತಗಟ್ಟೆಗಳ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು, ಅಭ್ಯರ್ಥಿಗಳ ಕಡೆಯ ಬೆಂಬಲಿಗರು ಮತದಾರರನ್ನು ಸೆಳೆಯಲು ತೀವ್ರ ಪೈಪೋಟಿ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಪರವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಚಾರ ನಡೆಸಿದರು. ಪ್ರಾರಂಭದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿದ್ದ ಇದ್ದ ಉತ್ಸಾಹ ಮಧ್ಯಾಹ್ನದ ವೇಳೆಗೆ ತಣ್ಣಗಾಗಿತ್ತು, ಕಾಂಗ್ರೆಸ್ ಪರವಾಗಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಇದ್ದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ 10394 ಪುರುಷರು,4934 ಮಹಿಳೆಯರು ಸೇರಿ ಒಟ್ಟು 15328 ಪದವೀಧರರ ಮತದಾರರು ಇದ್ದು ಇಂದು ನಡೆದ ಚುನಾವಣೆಯಲ್ಲಿ 6016 ಮಂದಿ ಪುರುಷರು,2347 ಮಹಿಳೆಯರು ಸೇರಿ ಒಟ್ಟು 8363(ಶೇ.54.56)ಮಂದಿ ಮತ ಚಲಾಯಿಸಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.60.90 ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ಬಿರುಸಿನಿಂದ ನಡೆಯಿತು.
ಶಾಂತಿ ಮತದಾನ
ಬಂಗಾರಪೇಟೆ: ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯು ಪಟ್ಟಣದಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆಯಿಂದಲೇ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಲವಲವಿಕೆಯಿಂದ ಮತದಾರರನ್ನು ಸೆಳೆಯುತ್ತಿದ್ದರು.
ತಾಲೂಕಲ್ಲಿ ಒಟ್ಟು 1619 ಮತದಾರರಿದ್ದು ಎರಡು ಮತಗಟ್ಟೆಗಳನ್ನು ಸ್ಥಾಪಿಸಿದ್ದು ಈ ಪೈಕಿ ಮತಗಟ್ಟೆ ಸಂಖ್ಯೆ 98ರಲ್ಲಿ 450 ಮತಗಳು ಚಲಾವಣೆಯಾಗಿದ್ದು 99ರಲ್ಲಿ 474 ಮತಗಳು ಚಲಾವಣೆಯಾಗಿದೆ ಒಟ್ಟು 924 ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ಕಳೆದ 15ದಿನಗಳಿಂದ ಎಲ್ಲಾ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಬಿರುಸಿನಿಂದ ಮತ ಪ್ರಚಾರ ಕೈಗೊಂಡಿದ್ದರು. ಈ ಹಿಂದೆ ಈ ಚುನಾವಣೆ ಯಾವುದೇ ಸದ್ದಿಲ್ಲದೆ ನಡೆಯುತ್ತಿತ್ತು. ಆದರೆ ಈ ಬಾರಿ ವಿಧಾನಸಭೆ ಚುನಾವಣೆ ರೀತಿಯಲ್ಲೇ ಅಬ್ಬರದ ಪ್ರಚಾರ ಮಾಡಿದರು.
ಶೇ.63 ಮತದಾನ
ಚಿಂತಾಮಣಿ: ಪದವೀದರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ನಡೆದಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನ ನಡೆಯಿತು. ಮತದಾರರನ್ನು ಸೆಳೆಯಲು ಹಲವರು ಆಸೆ ಆಮಿಷ ತೋರಿದರು. ಒಟ್ಟು 3,788 ಮತದಾರರಲ್ಲಿ 2,373 ಮತ ಚಲಾವಣೆ ಆಗಿ ಶೇ.63 ರಷ್ಟು ಮತದಾನವಾಗಿದೆ.
ಮುಳಬಾಗಲಲ್ಲಿ ಮತದಾನ
ಮುಳಬಾಗಲು: ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ಅಗ್ನೇಯ ಪದವೀಧರ ಚುನಾವಣೆಯಲ್ಲಿ ಮತದಾನದಲ್ಲಿ ಒಟ್ಟು 2,129 ಮಂದಿ ಮತದಾರರಲ್ಲಿ ಕೇವಲ 1,219 ಮಂದಿ ಮಾತ್ರ ಮತದಾನ ಮಾಡಿದರು. ಎಲ್ಲಾ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಒಲೈಸಲು ತಂತ್ರಗಾರಿಕೆಗಳಲ್ಲಿ ತೊಡಗಿದ್ದರು.
ಕೋಲಾರ ಜಿಲ್ಲೆ ತಾಲೂಕುವಾರು ಮತದಾನ ವಿವರ
ತಾಲೂಕು ಪುರುಷರು ಮಹಿಳೆಯರು ಒಟ್ಟು ಪುರುಷರು ಮಹಿಳೆಯರು ಒಟ್ಟು
ಶ್ರೀನಿವಾಸಪುರ 2349 1168 3517 1482 517 1999
ಕೋಲಾರ 3237 1636 4873 1760 732 2492
ಮುಳಬಾಗಿಲು 1606 523 2129 948 272 1220
ಮಾಲೂರು 1153 418 1571 673 225 898
ಬಂಗಾರಪೇಟೆ 1099 520 1619 673 251 924
ಕೆಜಿಎಫ್ 950 709 1659 480 350 830
ಒಟ್ಟು 10394 4934 15328 6016 2347 8363
ಕೋಲಾರ ಜಿಲ್ಲೆ
ಶೇ.54.56
ಚಿಕ್ಕಬಳ್ಳಾಪುರ ಜಿಲ್ಲೆ
ಶೇ.60.90
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

