ಕೋಲಾರ

ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಕಸ

Published On :

ಚಿಕ್ಕಬಳ್ಳಾಪುರ: ಪ್ರಾರಂಭದಲ್ಲಿ ಸರಿಯಾಗಿ ನಡೆಯುತ್ತಿದ್ದ ವೈಜ್ಞಾನಿಕ ಕಸ ವಿಲೇವಾರಿ ಇತ್ತೀಚಿಗಿನ ದಿನಗಳಲ್ಲಿ ಸಾರ್ವಜನಿಕರ ಅಸಹಕಾರದಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಬಡಾವಣೆಗಳಲ್ಲಿನ ಅನೇಕ ರಸ್ತೆಗಳ ಮಧ್ಯೆಯೇ ತ್ಯಾಜ್ಯ ರಾರಾಜಿಸುತ್ತಿದೆ. ಕಳೆದ ಒಂದು ವರ್ಷದ ಹಿಂದೆ ವೈಜ್ಞಾನಿಕ ಕಸ ವಿಲೇವಾರಿ ಬಗ್ಗೆ ನಗರಸಭೆಯಿಂದ ಜಾಗೃತಿ ಮೂಡಿಸಲಾಗಿತ್ತು. ನಗರದ 31 ವಾರ್ಡುಗಳಲ್ಲಿ ಕಸ ಸಂಗ್ರಹಕ್ಕಾಗಿ 33 ಕಂಟೈನರ್ ಗಳನ್ನು ಬಳಸಲಾಗುತ್ತಿದೆ. ಇವು ಸಾಕಾಗುತ್ತಿಲ್ಲ. ಇದನ್ನೇ ನೆಪವನ್ನಾಗಿಸಿಕೊಂಡು ಅನಿವಾರ್ಯವಾಗಿ ಬಡಾವಣೆಯಲ್ಲಿನ ರಸ್ತೆಗಳ ಮಧ್ಯೆ, ಇಲ್ಲವೇ ಸಮೀಪದ ಖಾಲಿ ನಿವೇಶನಗಳು ಮತ್ತು ಗಿಡಗಂಟೆಗಳಳಲ್ಲಿ ಕಸವನ್ನು ಎಸೆಯುವಂತಾಗುತ್ತಿದೆ. ನಗರದ ಚಾಮರಾಜಪೇಟೆ, ಶಾಂತಿನಗರ, ಸಿ.ಸಿ. ವೃತ್ತ, ಸಾಧುಮಠ ರಸ್ತೆ, ಬಾಪೂಜಿ ನಗರ, ವಾಪಸಂದ್ರ ಸೇರಿದಂತೆ ಹಲವೆಡೆ ತ್ಯಾಜ್ಯ ರಾಶಿ ರಾಶಿಯಾಗಿಯೇ ಬಿದ್ದಿದೆ. ನಗರದಲ್ಲಿ 120 ಜನ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇದರಲ್ಲಿ 69 ಮಂದಿ ಹೊರಗುತ್ತಿಗೆಯಲ್ಲಿ ಮತ್ತು 31 ಮಂದಿ ನಗರಸಭೆ ಸಿಬ್ಬಂದಿ ಇದ್ದು ತ್ಯಾಜ್ಯ ಸಾಗಿಸಲು 5 ಟ್ರ್ಯಾಕ್ಟರ್, 2 ಡಂಪರ್ಸ್, 1 ಕಾಂಪ್ಯಾಕ್ಟರ್ ಬಳಸಲಾಗುತ್ತಿದೆ. ಪ್ರತಿನಿತ್ಯ 32 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು 28 ಟನ್ ತ್ಯಾಜ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. 4 ಟನ್  ತ್ಯಾಜ್ಯ ಪ್ರತಿನಿತ್ಯ ಉಳಿಯುತ್ತಿದೆ.
ತ್ಯಾಜ್ಯದಲ್ಲಿ ಗೊಬ್ಬರ ತಯಾರಿ
ಈಗಾಗಲೇ ಬೆಂಗಳೂರಿನಲ್ಲಿ ಉದ್ಭವವಾಗಿರುವ ಕಸ ವಿಲೇವಾರಿ ಸಮಸ್ಯೆ ಇಲ್ಲಿ ತಲೆ ನೋವನ್ನುಂಟು ಮಾಡಬಾರದೆಂಬ ಉದ್ದೇಶದಿಂದ ತ್ಯಾಜ್ಯದಲ್ಲಿ ಗೊಬ್ಬರ ತಯಾರಿಸಿ ಮಾರಾಟ ಮಾಡಲು ನಗರಸಭೆ ಮುಂದಾಗಿದೆ. ತಾಲೂಕಿನ ಚೆಲುವತಿಮ್ಮನಹಳ್ಳಿ(ಜಡಲತಿಮ್ಮನಹಳ್ಳಿ) ಸಮೀಪದ 15 ಎಕರೆ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ಇದರ ಹೊಂಡಗಳನ್ನು ಅಗೆದಿದ್ದು ಅದರಲ್ಲಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಪ್ರತ್ಯೇಕಗೊಳಿಸಿ ಗೊಬ್ಬರ ತಯಾರಿಸಲಾಗುತ್ತಿದೆ. ಇದಕ್ಕಾಗಿ ಯಂತ್ರೋಪಕರಣಗಳನ್ನು ಅಳವಡಿಸಲು ಮುಂದಾಗಿದ್ದು ತ್ಯಾಜ್ಯದಿಂದ ದುರ್ವಾಸನೆ ಹರಡದಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ವಿಶೇಷ ಯಂತ್ರ ಬಳಕೆ, ಜೊತೆಗೆ ಸುತ್ತಲು ಕಾಂಪೌಂಡ್ ನಿರ್ಮಾಣವಾಗಿದೆ. ಆದರೆ, ಪ್ರಸ್ತುತ ಇಲ್ಲಿ ನೀರಿನ ಕೊರತೆ ಎದುರಾಗಿದೆ. ಇತ್ತೀಚೆಗೆ ಇಲ್ಲಿ ಕೊರೆಸಿದ 2 ಕೊಳವೆ ಬಾವಿಗಳು ವಿಫಲವಾಗಿವೆ. ನೀರಿಲ್ಲದಿದ್ದರೆ ಕೆಲಸ ನಡೆಯುವುದಿಲ್ಲ ಎನ್ನುವುದನ್ನು ಅರಿತು ಮತ್ತೆ ಬೇರೆ ಕಡೆ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದೆ.
ಅಸಮರ್ಪಕ ಚರಂಡಿ
ಮಳೆ ಬಂದಾಗ ರಸ್ತೆ ಮೇಲೆ ಬಿದ್ದ ನೀರು ತ್ಯಾಜ್ಯದೊಂದಿಗೆ ಹರಿದು ನೈರ್ಮಲ್ಯವನ್ನು ಹದಗೆಡಿಸುತ್ತಿದ್ದು ಚರಂಡಿಗಳ ನಿರ್ಮಾಣದಲ್ಲಿ ಗುಣಮಟ್ಟವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಸಮತಟ್ಟಾಗಿರದೇ ಅಲ್ಲಲ್ಲಿ ಏರಿಳಿತಗಳಿರುವ ಹಿನ್ನೆಲೆಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ಚರಂಡಿಗಳಲ್ಲಿ ಹೂಳು ತುಂಬಿ ರಸ್ತೆಗೆ ಕೊಳಚೆ ನೀರು ಹರಯುತ್ತಿದ್ದು ಯಾವುದು ಚರಂಡಿ ನೀರು, ಯಾವುದು ಮಳೆ ನೀರು ಎನ್ನುವುದೇ ತಿಳಿಯುವುದಿಲ್ಲ.


-ಎನ್. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.