ಕೋಲಾರ

ಶ್ರೀನಿವಾಸಪುರದಲ್ಲಿ ಕಸ ವಿಲೇವಾರಿಗೆ ಸಿಬ್ಬಂದಿ ಕೊರತೆ

Published On :

ಕೋಲಾರ: ಮಾವಿನ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಪುರದಲ್ಲಿ ಪ್ರತಿನಿತ್ಯ ಸಂಗ್ರಹಣೆ ಆಗುವ 10 ರಿಂದ 12 ಟನ್ ಕಸ ವಿಲೇವಾರಿ ಮಾಡಲು ತಾಲೂಕಿನ ಹೆಬ್ಬಟ ಗ್ರಾಮದ ಕೆರೆ ಅಂಗಳಕ್ಕೆ ಸೇರಿದ 5 ಎಕರೆ ಜಾಗದಲ್ಲಿ ಘಟಕ ನಿರ್ಮಾಣ ಮಾಡಿದ್ದರೂ ಸಿಬ್ಬಂದಿ ಕೊರತೆಯಿಂದ ಪ್ರತಿನಿತ್ಯ ಕಸದ ಘಟಕದಲ್ಲಿ ಸುರಿಯಲು ಆಗುತ್ತಿಲ್ಲ.
ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಗೆ 23 ವಾರ್ಡುಗಳು ಒಳಪಟ್ಟಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣದ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆಯು ವಾಣಿಜ್ಯ ಕೇಂದ್ರವಾಗಿರುವುದರಿಂದ ಇಲ್ಲಿ ಪ್ರತಿನಿತ್ಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಆದರೆ, ಸ್ಲಮ್‌ಗಳಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಕಸವನ್ನು ಸಂಗ್ರಹಣೆ ಮಾಡಿ ಅದನ್ನು ಸಿಕ್ಕ ಸಿಕ್ಕ ಕಡೆ ಸುರಿಯುವುದರಿಂದ ಶ್ರೀನಿವಾಸಪುರ ಕಸದ ಊರಾಗುತ್ತಿದೆ.
ಕಂಟೈನರ್ ಕೊರತೆ: ಶ್ರೀನಿವಾಸಪುರ ಪಟ್ಟಣಕ್ಕೆ ಕನಿಷ್ಠ 23 ರಿಂದ 25 ಕಸ ಸುರಿಯುವ ಕಂಟೈನರ್ ಬೇಕು. ಪುರಸಭೆ ಈಗ ಕೇವಲ 10 ಕಂಟೈನರ್ ಪ್ರಮುಖ ಬೀದಿಗಳಲ್ಲಿ ಇಟ್ಟಿದ್ದಾರೆ. ಸಾರ್ವಜನಿಕರು ಕಂಟೈನರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ.
ಶ್ರೀನಿವಾಸಪುರ ಪುರಸಭೆಯಲ್ಲಿ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಮಂಜೂರಾತಿ ಆಗಿಲ್ಲ. ಕೇವಲ 6 ಮಂದಿ ಕಾಯಂ ಪೌರ ಕಾರ್ಮಿಕರು, 29 ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಇದ್ದಾರೆ. ಕಸ ಸಂಗ್ರಹಣೆಗಾಗಿ ಕೇವಲ 2 ಟ್ರ್ಯಾಕ್ಟರ್ ನೀಡಲಾಗಿದೆ. ಟಿಪ್ಪರ್‌ಗಳ ವ್ಯವಸ್ಥೆ ಇಲ್ಲದಿರುವುದರಿಂದ ಕಸ ವಿಲೇವಾರಿ ಘಟಕಕ್ಕೆ ತಲುಪಬೇಕಾದ ಕಸ ಮರಳಿ ಊರಿನಲ್ಲಿ ಕಾಣಿಸಿಕೊಳ್ಳುತ್ತಿದೆ.
ಪ್ರಾಣಿ ತ್ಯಾಜ್ಯಗಳು: ಪಟ್ಟಣದ ಕೆಲವು ಜಾಗಗಳಲ್ಲಿ ಮಾಂಸದ ಅಂಗಡಿಯವರು ಕೋಳಿ, ಹಂದಿ ತ್ಯಾಜ್ಯಗಳನ್ನು ಸಮೀಪದ ಕಂಟೈನರ್‌ಗೆ ಎಸೆಯದೆ ರಸ್ತೆ ಬದಿ ಹಾಕುವುದರಿಂದ ಸಮಸ್ಯೆ ಉಲ್ಬಣವಾಗಿದೆ. ಪ್ರಾಣಿ ತ್ಯಾಜ್ಯಗಳ ಬಳಿ ನಾಯಿಗಳು ಹಿಂಡು ಹಿಂಡಾಗಿ ಸೇರುವುದನ್ನು ಕಂಡು ನಾಗರಿಕರು ಭಯ ಭೀತರಾಗಿ ಕಸವನ್ನು ಎಸೆಯದೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಂಡ ಕಂಡ ಜಾಗದಲ್ಲಿ ಎಸೆಯುತ್ತಿರುವುದರಿಂದ ಪುರಸಭೆಯವರಿಗೆ ಕಸದ ಸಮಸ್ಯೆ ಬಿಡಿಸಲಾಗದ ಕಗ್ಗಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.