ಅವ್ಯವಸ್ಥೆಗಳ ಆಗರ ಜಿಲ್ಲಾಸ್ಪತ್ರೆ
ಕೋಲಾರ: ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರ ವಿರುದ್ಧ ಸೋಮವಾರ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಬಡರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಉಚಿತ ಚಿಕಿತ್ಸೆ ಎಂಬ ಪದ ಮಾಯವಾಗಿ ಈ ಆಸ್ಪತ್ರೆಯಲ್ಲಿ ಎಷ್ಟೋ ವರ್ಷಗಳು ಕಳೆದಿವೆ. ಆಸ್ಪತ್ರೆಯಲ್ಲಿ ಲಂಚ ಕೊಡದೇ ರೋಗಿಯನ್ನು ಮುಟ್ಟುವುದಿಲ್ಲ. ಬಡವರು ಬಂದರೆ ಕೆಲ ವೈದ್ಯರು ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಿಸಿ ಹಣ ಸೂಲಿಗೆ ಮಾಡುತ್ತಾರೆ. ಔಷಧಿ ಮತ್ತು ಮಾತ್ರೆಗಳನ್ನು ಉಚಿತವಾಗಿ ನೀಡದೆ ಖಾಸಗಿ ಔಷಧಿ ಅಂಗಡಿಗಳಲ್ಲಿ ಖರೀದಿಸುವಂತೆ ಚೀಟಿ ನೀಡುತ್ತಾರೆಂದು ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಆರೋಪಿಸಿದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಕುಡಿಯುವ ನೀರಿಗೆ ಶೌಚಾಲಯಕ್ಕೆ ಪರದಾಡುವಂತಾಗಿದೆ. ರಕ್ತ ಪರೀಕ್ಷೆ ಸ್ಕ್ಯಾನಿಂಗ್ ಮುಂತಾದ ಪರೀಕ್ಷೆಗಳಿಗೆ ಹಣ ಕೇಳುತ್ತಾರೆಂದು ದೂರಿದರು.
ಆಸ್ಪತ್ರೆಯಲ್ಲಿ ಶೌಚಾಲಯಗಳ ಸಮರ್ಪಕ ನಿರ್ವಹಣೆಯನ್ನು ಮಾಡಬೇಕು, ವಯೋವೃದ್ಧರ ಸರ್ಟಿಫಿಕೇಟ್, ಅಂಗವಿಕಲರ ಪ್ರಮಾಣ ಪತ್ರಕ್ಕಾಗಿ ಹಣ ವಸೂಲಿ ಮಾಡಬಾರದು, ಸುಮಾರು ವರ್ಷಗಳಿಂದ ತಳವೂರಿರುವ ಸಿಬ್ಬಂದಿ ವರ್ಗಾವಣೆ ಮಾಡಬೇಕು, ಸರ್ಕಾರದಿಂದ ನೀಡುವ ಬ್ರೆಡ್, ಮೊಟ್ಟೆ, ಊಟ, ಹಾಲು, ಇವುಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಗುಣಮಟ್ಟವಿಲ್ಲದ ಆಹಾರ ಪೂರೈಕೆ ಮಾಡುತ್ತಿದ್ದು, ಸರ್ಕಾರದ ನಿಯಮದಂತೆ ಆಹಾರ ಪೂರೈಕೆ ಮಾಡಲು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಧರಣಿ ನಿರತರ ಜೊತೆ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ರಮೇಶಬಾಬು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಹದಿನೈದು ದಿವಸಗಳೊಳಗೆ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ ಮುಖಂಡರಾದ ಹೆಬ್ಬಣಿ ಆನಂದರೆಡ್ಡಿ, ಬಂಗವಾದಿ ನಾಗರಾಜ್ ಗೌಡ, ಮೂರಂಡಹಳಳ್ಳಿ ಶಿವಾರೆಡ್ಡಿ, ಹುಲ್ಕೂರು ಹರಿಕುಮಾರ್, ಹೂಹಳ್ಳಿ ನಾಗರಾಜ್, ರಂಜಿತ್ ಕುಮಾರ್, ಫಾರೂಕ್‌ಪಾಷ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

