ಕೋಲಾರ

ಹದ್ದು ಮೀರಿದ್ದಕ್ಕೆ ನಡು ರಸ್ತೆಯಲ್ಲೇ ಪೊಲೀಸರು, ವಕೀಲರ ನಡುವೆ ಗುದ್ದಾಟ, ಬಟ್ಟೆ ಕಳಚಿ ಹಲ್ಲೆ ಮಾಡಿದ್ದಾರೆ ಎಂದು ಜಿಲ್ಲಾದ್ಯಂತ ಕಲಾಪ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ವಕೀಲರೊಬ್ಬರನ್ನು ಬಂಧಿಸಿರುವುದು ಪೊಲೀಸ್ ಮತ್ತು ವಕೀಲರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಸುಳ್ಳು ಪ್ರಕರಣ ದಾಖಲಿಸಿ ಕಾನೂನಿಗೆ ವಿರುದ್ಧವಾಗಿ ಪೊಲೀಸರು ವಕೀಲನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಜಿಲ್ಲಾ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬಂಧಿಸಿರುವ ವಕೀಲನನ್ನು ಬಿಡುಗಡೆಗೊಳಿಸಿ ಸುಳ್ಳು ದೂರನ್ನು ಹಿಂಪಡೆಯಬೇಕು. ದುರುದ್ದೇಶದಿಂದ ಹಲ್ಲೆ ನಡೆಸಿರುವ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ನಗರದ ಬಲಮುರಿ ಗಣಪತಿ ವೃತ್ತದಲ್ಲಿ ಭಾನುವಾರ ಸಂಜೆ ಶ್ರೀನಿವಾಸ್ ಎಂಬ ವಕೀಲ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಸಿಗ್ನಲ್ ದಾಟಲು ಯತ್ನಿಸಿದರು ಎನ್ನಲಾಗಿದೆ. ಆಗ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ರಾಜಶೇಖರ್ ತಡೆದು ಬೈಕನ್ನು ಕಿತ್ತುಕೊಳ್ಳಲು ಮುಂದಾಗಿದ್ದು, ಪರಸ್ಪರ ಮಾತಿನ ಚಕಮಕಿ ನಡೆದಿದೆ. ಇದು ಹಲ್ಲೆಯವರೆಗೂ ಹೋಗಿದ್ದು, ಸ್ಥಳದಲ್ಲಿಯೇ ಇದ್ದ ಇತರೆ ಪೊಲೀಸರು ಕರ್ತವ್ಯ ನಿರತ ಸಹೋದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲ ಶ್ರೀನಿವಾಸ್‌ನನ್ನು ಬಂಧಿಸಿ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು ಇದರಿಂದ ವಿವಾದದ ಕಿಡಿ ಹೊತ್ತಿದೆ.
ವಕೀಲರ ವಾದ: ಪೊಲೀಸರು ದುರುದ್ದೇಶದಿಂದ ಹಲ್ಲೆ ಮತ್ತು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು ವಕೀಲ ಶ್ರೀನಿವಾಸ್‌ನನ್ನು ಠಾಣೆಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಹೊಡೆದಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘ ಆರೋಪಿಸಿದೆ. ನ್ಯಾಯಾಲಯ ಕಲಾಪಗಳಿಂದ ದೂರ ಉಳಿದ ವಕೀಲರು ಸೋಮವಾರ ನಗರದ ಗಂಗಮ್ಮನಗುಡಿ, ಬಿ.ಬಿ.ರಸ್ತೆ, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟಿಸಿದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಧರಣಿ ಕುಳಿತು ತಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ವಕೀಲರ ಸಂಘದ ಅಧ್ಯಕ್ಷ ತಮ್ಮೇಗೌಡ ಮಾತನಾಡಿ, ವಕೀಲ ಶ್ರೀನಿವಾಸ್ ತಮ್ಮವರು ಕಾಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೆರಳುತ್ತಿದ್ದರು. ಬಲಮುರಿ ಗಣಪತಿ ವೃತ್ತದ ಸಿಗ್ನಲ್‌ಲೈಟ್ ಬಳಿ ಬೈಕ್ ನಿಲ್ಲಿಸುತ್ತಿದ್ದಾಗ ಪೊಲೀಸ್ ಪೇದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಈ ನಡುವೆ ವಾಹನದ ಹಿಂದೆ ಕರಪತ್ರಗಳು ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಅದನ್ನು ಎತ್ತಿಕೊಳ್ಳಲು ಯತ್ನಿಸಿದಾಗ ಆಕಸ್ಮಿಕವಾಗಿ ಪೇದೆ ಮೇಲೆ ಬಿದ್ದಿದ್ದಾರೆ. ಇದನ್ನು ಹಲ್ಲೆ ಎಂದು ಆರೋಪಿಸಿ ಪೊಲೀಸರು ವಕೀಲ ಶ್ರೀನಿವಾಸ್‌ನನ್ನು ಠಾಣೆಗೆ ಕರೆದೊಯ್ದು ಹೊಡೆದಿದ್ದಾರೆ. ಹಲ್ಲೆ ನಡೆದಿದ್ದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕೇ ಹೊರತು ಹೊಡೆಯುವ ಹಕ್ಕು ಅವರಿಗೆ ಯಾರು ಕೊಟ್ಟರು. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.