ಡಿಸಿಸಿ ಬ್ಯಾಂಕ್ ಉಳಿಸುವುದು ಸಹಕಾರಿಗಳ ಕರ್ತವ್ಯ: ಗುಡಿಯಪ್ಪ ಅಭಿಮತ
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕನ್ನು ಉಳಿಸುವುದು ಸಹಕಾರಿಗಳ ಕರ್ತವ್ಯವಾಗಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಸ್. ಗುಡಿಯಪ್ಪ ತಿಳಿಸಿದರು.
ನಗರದ ಗೋಕುಲ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಅವರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೋಚಿಮುಲ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ಕಳೆದ 13 ವರ್ಷಗಳ ಹಿಂದೆ ನಾನಾ ಕಾರಣಗಳಿಂದ ನಿಷ್ಕ್ರೀಯವಾಗಿತ್ತು. ಸರ್ಕಾರದ ಕೆಲವು ದಿಟ್ಟ ನಿರ್ಧಾರಗಳಿಂದ ಮತ್ತೆ ಚೇತರಿಕೆ ಕಾಣುತ್ತಿದೆ, ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ ಬ್ಯಾಲಹಲ್ಳಿ ಎಂ. ಗೋವಿಂದಗೌಡರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ರೈತರ ಹಿತ ಕಾಪಾಡಬೇಕು, ಸರ್ಕಾರ ಘೋಷಣೆ ಮಾಡಿರುವ ಶೇಕಡ 3ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ನೂತನ ಅಧ್ಯಕ್ಷರು ಗಮನ ನೀಡಬೇಕೆಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕ್ ಉಳಿಸಲು ಜಿಲ್ಲೆಯ ಎಲ್ಲಾ ಸಹಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ, ಡಿಸಿಸಿ ಬ್ಯಾಂಕಿನಲ್ಲಿ ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಸಂಘಗಳು ಖಾತೆ ತೆರೆದು ಬ್ಯಾಂಕಿನ ಅಭಿವೃದ್ಧಿಗೆ ಸ್ಪಂಧಿಸಬೇಕೆಂದು ಕರೆ ನೀಡಿದರು.
ಸಹಕಾರಿ ಕಾಯಿದೆ ಬಗ್ಗೆ ಸಹಕಾರಿಗಳು ಮತ್ತು ಅಧಿಕಾರಿ ವರ್ಗ ಚನ್ನಾಗಿ ಅರಿತು ಕೆಲಸ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರಲು ಹೊಸ ಕಾಯಿದೆ ಪ್ರಯೋಜನಾಕಾರಿಯಾಗಿದೆ, ವೈದ್ಯನಾಥನ್ ವರದಿ ಜಾರಿಗೆ ಬಂದ ಮೇಲೆ ಮುಳುಗುತ್ತಿದ್ದ ಕೃಷಿ ಪತ್ತಿನ ಸಹಕಾರ ಸಂಘಗಳು ಚೇತರಿಕೆ ಕಾಣುತ್ತಿದ್ದು, ಹೆಚ್ಚಿನ ತರಬೇತಿಯೊಂದಿಗೆ ಸಹಕಾರ ಸಂಘಗಳ ಬಲವರ್ಧನೆಗೆ ಕೈಜೋಡಿಸಬೇಕೆಂದು ಸಹಕಾರ ಸಂಘಗಳ ಅಧ್ಯಕ್ಷರು,ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಿಗೆ ಎಸ್. ಗುಡಿಯಪ್ಪ ಮನವಿ ಮಾಡಿದರು. ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಯೂನಿಯನನ್ನಿರ್ದೇಶಕರಾದ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮಾತನಾಡಿ, ಕಳೆದ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಕತ್ತಿಲಿನಲ್ಲಿ ಇತ್ತು. ಒಂದು ಕಾಲದಲ್ಲಿ ಡಿಸಿಸಿ ಬ್ಯಾಂಕಿನ ಗತವೈಭವದಿಂದಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯಕ್ಕೆ ಮಾದರಿ ಆಗಿತ್ತು. ಅನೇಕ ಕಾರಣಗಳಿಂದ ಬ್ಯಾಂಕಿನ ಸ್ಥಿತಿ ಶೋಚನೀಯವಾಗಿದ್ದು ತಾವು ಬ್ಯಾಂಕಿನ ಸೇವಕನಾಗಿ ದುಡಿದು ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಇಚ್ಚಿಸಿರುವುದಾಗಿ ನುಡಿದರು.
ಡಿಸಿಸಿ ಬ್ಯಾಂಕಿನಲ್ಲಿ ಈ ಹಿಂದೆ ಆಗಿರುವ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ ಕೆಲಸ ಮಾಡುತ್ತೇನೆ, ಬ್ಯಾಂಕ್ ಉಳಿಯಬೇಕಾದರೆ ಕೋಚಮುಲ್ ತನ್ನ ಹಣಕಾಸಿನ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ನಿರ್ವಹಣೆ ಮಾಡುವ ಮೂಲಕ ಇನ್ನಿತರೆ ಸಹಕಾರಿ ಸಂಘಗಳಿಗೆ ಮಾದರಿ ಆಗಬೇಕೆಂದು ಕೋಚಿಮುಲ್ ಅಧ್ಯಕ್ಷ ಗುಡಿಯಪ್ಪನವರನ್ನು ಕೋರಿದರು. ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು ಈ ಕೂಡಲೇ ಡಿಸಿಸಿ ಬ್ಯಾಂಕ್ಗೆ ಬರುವಂತಾಗಬೇಕು, ಖಾತೆಗಳನ್ನು ಆರಂಭಿಸಬೇಕು, ಇದರಿಂದ ಬ್ಯಾಂಕಿಗೆ ಶಕ್ತಿ ಬರುತ್ತದೆ, ರೈತರಿಗೆ ಸಾಲ ಸಿಗುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 2 ರು. ಪ್ರೋತ್ಸಾಹ ಧನ ನೀಡುವ ಮೂಲಕ ಬಿ.ಎಸ್. ಯಡಿಯೂರಪ್ಪ ರೈತರ ನೆರವಿಗೆ ಬಂದರೆ, ಸಿದ್ದರಾಮಯ್ಯನವರು ಹಾಲಿನ ಪ್ರೋತ್ಸಾಹ ಧನವನ್ನು 4 ರುಗಳಿಗೆ ಏರಿಕೆ ಮಾಡಿ ರೈತರನ್ನು ಉಳಿಸಿದ್ದಾರೆ, ಈ ಇಬ್ಬರು ಮುಖಂಡರಿಗೂ ಕೃತಜ್ಞತೆ ಅರ್ಪಿಸುವುದು ಸಹಕಾರಿಗಳ ಕರ್ತವ್ಯವಾಗಿದೆ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ಕಡಿಮೆ ಬಡ್ಡಿಗೆ ಸಾಲ ನೀಡಲು ಬದ್ಧವಾಗಿದೆ. ಆದರೆ, ಡಿಸಿಸಿ ಬ್ಯಾಂಕಿನಲ್ಲಿ ಆಗಿರುವ ಅದ್ವಾನಗಳಿಂದಾಗಿ ಸಾಲ ನೀಡುವುದಕ್ಕೆ ಕೊಂಚ ಕಷ್ಟವಾಗುತ್ತಿದ್ದು. ತಾವು ಹೇಗಾದರೂ ಮಾಡಿ ಸರ್ಕಾರದ ಸಹಾಯದೊಂದಿಗೆ ರೈತರಿಗೆ ಸಾಲ ಸೌಲಭ್ಯ ಸಿಗುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನನ್ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸಲ್ಲದು, ಜಿಲ್ಲಾ ಹಾಲು ಒಕ್ಕೂಟದ ಜಾಗ ವಿಸ್ತರಣೆ ಮಾಡಿ ಹಾಲು ಉತ್ಪಾದಕರಿಗೆ ಹೆಚ್ಚಿನ ಸಹಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ಖಾತೆ ಆರಂಭಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗಾಗಲೇ ಬೇರೆ ಬ್ಯಾಂಕುಗಳಲ್ಲಿ ಇಟ್ಟಿರುವ ಹಣವನ್ನು ಹಿಂದಕ್ಕೆ ಪಡೆಯುವುದು ಕಷ್ಟವಾಗಿರುವುದರಿಂದ ಡಿಸಿಸಿ ಬ್ಯಾಂಕಿನ ಮೂಲಕ ಆರ್ಥಿಕ ಸೌಲಭ್ಯ ಸಿಕ್ಕಲ್ಲಿ ಬೇರೆ ಕಡೆ ಇರುವ ಹಣವನ್ನು ಡಿಸಿಸಿ ಬ್ಯಾಂಕಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಎಂ.ಎಸ್.ಆನಂದ್ ಮಾತನಾಡಿ, ಡಿಸಿಸಿ ಬ್ಯಾಂಕಿನಲ್ಲಿ ಆನ್ ಲೈನ್ ಪದ್ಧತಿ ಜಾರಿಗೆ ತರಬೇಕೆಂದು ಸಲಹೆ ನೀಡಿದರು. ಹಿರಿಯ ಸಹಕಾರಿ ಹೊಳಲಿ ಪ್ರಕಾಶ್, ಜಿಲ್ಲಾ ಸಹಕಾರಿ ಯೂನಿಯನ್ ಮೂಲಕ ನಡೆಯುವ ಕಾರ್ಯಕ್ರಮಗಳಿಗೆ ಸಭಾಂಗಣ ಇಲ್ಲದಿರುವುದರಿಂದ ಸಹಕಾರಿಗಳು ಭವನ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದರು. ಸಹಕಾರಿ ಕಾಯಿದೆ ಬಗ್ಗೆ ಪರಿಣಾಮಕಾರಿಯಾಗಿ ತಿಳಿದು ಕಾರ್ಯರೂಪಕ್ಕೆ ತರಲು ಪ್ರತಿ ತಿಂಗಳಿಗೊಮ್ಮೆ ತರಬೇತಿ ಕಾರ್ಯಕ್ರಮದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ವಹಿಸಿದ್ದರು.ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ವೀರೇಶ್ ಸಹಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಸಹಕಾರಿ ಕಾಯಿದೆ, ಸಹಕಾರ ಶಿಕ್ಷಣ, ಸಹಕಾರಿ ಪತ್ರಿಕೆ ಕುರಿತು ಮಾಹಿತಿ ನೀಡಿದರು.
ಸಹಕಾರ ಸಂಘಗಳ ಉಪ ನಿಬಂಧಕ ಸಿ.ಪ್ರಸಾದರೆಡ್ಡಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ನಳನಿ, ಕೋಚಿಮುಲ್ ಪ್ರಧಾನ ವ್ಯವಸ್ಥಾಪಕ ಡಾ. ರವಿಶಂಕರ್ ಹೆಗ್ಗಡೆ, ವ್ಯವಸ್ಥಾಪಕ ಡಾ.ವಿ.ಎಂ. ರಾಜು, ಸಹಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಶಶಿಧರ್ ಎಲೆ, ಕೆಎಂಎಫ್ ನಿವೃತ್ತ ಅಧಿಕಾರಿ ಎಂ.ಎಸ್. ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

