ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ವಿಷಾದ
ಬಾಗೇಪಲ್ಲಿ: ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ದಬ್ಬಾಳಿಕೆಗಳು ನಡೆಯುತ್ತಿರುವುದಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಂ.ಎನ್. ರಮೇಶ್ ವಿಷಾದ ವ್ಯಕ್ತಪಡಿಸಿದರು.
ವಿಶ್ವ ಮಹಿಳಾ ರಾಷ್ಟ್ರೀಯ ದಿನಾಚಣೆ ಅಂಗವಾಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನಲ್ಲಿ ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೆಡ್ಕ್ರಾಸ್ ಸಂಸ್ಥೆ, ವಕೀಲರ ಸಂಘ, ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಟಾಟಿಸಿ ಅವರು ಮಾತನಾಡಿದರು.
ಅನಾದಿಕಾಲದಿಂದಲ್ಲೂ ಪುರುಷ ಪ್ರಧಾನ ಮಾತೇ ಕೇಳಿ ಬರುತ್ತಿದೆ. ಈ ದೇಶದಲ್ಲಿ ಸ್ತ್ರೀಯರನ್ನು ಗೌರವದಿಂದ ಕಾಣುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಲ್ಲಿಸಬೇಕಾಗಿದೆ ಎಂದರು.
ಮಹಿಳೆ ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತಾಳೆ. ಆದರೆ, ಸಹನೆ ತಪ್ಪಿದರೆ ಚಾಮುಂಡಿಯಾಗುತ್ತಾಳೆ. ಇದರಿಂದ ಮಹಿಳೆಯರ ಸಹನೆಯನ್ನು ಕೆಣುಕುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಪುರುಷರಿಗೆ ಕಿವಿ ಮಾತು ಹೇಳಿದರು. ಸಮಾಜದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಲು ಚಾಮುಂಡಿ ದೇವಿಯಂತೆ ದುಷ್ಟರ ಸಂಹಾರಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಅಗತ್ಯವಾಗಿದೆ ಎಂದರು.
ಹಿರಿಯ ವಕೀಲ ಜೆ.ಎನ್. ನಂಜಪ್ಪ ಮಾತನಾಡಿ, ಪುರುಷರು ಹಾಗೂ ಸ್ತ್ರೀಯರು ಇಬ್ಬರೂ ಸಮಾನವಾಗಿ ಜೀವನ ನಡೆಸಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್ ಮಾತನಾಡಿ, ಮಹಿಳಾ ದಿನಾಚರಣೆ ಕಾಟಾಚಾರಕ್ಕೆ ಹಾಗೂ ಒಂದು ದಿನದ ಮಟ್ಟಿಗೆ ಆಚರಣೆ ಮಾಡುವ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದು ಸಲಹೆ ನೀಡಿದರು. ನಮ್ಮನ್ನಾಳುವಂತಹ ಸರ್ಕಾರಗಳು ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.
ತಹಸೀಲ್ದಾರ್ ಎಂ.ಎ. ಪದ್ಮ, ಸರ್ಕಾರಿ ಅಭಿಯೋಜಕಿ ಪಿ. ಕೃಷ್ಣವೇಣಿ, ಪುರಸಭೆ ಮುಖ್ಯಾಧಿಕಾರಿ ಆರ್. ಶ್ರೀಕಾಂತ್, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡ, ಫಯಾಜ್ ಅಹಮದ್, ಚಂದ್ರಶೇಖರ್, ಎನ್. ಮಂಜುಳ, ಗಂಗಮ್ಮ, ಅನುಸೂಬಾಯಿ ಇದ್ದರು.
ಬಿಸಿಲಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದ ಮಹಿಳಾ ಕಾರ್ಮಿಕರು
ಕೋಲಾರ: ವಿಶ್ವ ಮಹಿಳಾ ದಿನಾಚರಣೆ ದಿನದಂದು ಮಹಿಳಾ ಕೂಲಿ ಕಾರ್ಮಿಕರ ಬಗ್ಗೆ ತಾತ್ಸಾರ ತೋರಿದ ವಿಲಕ್ಷಣ ಪ್ರಸಂಗ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದೊಡ್ಡ ಸಮಾರಂಭದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರರು ನೆರಳಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಣೆಗಾಗಿ ಪೆಂಡಾಲಲ್ಹಾಕಲಾಗಿತ್ತು. ಕಾಲೇಜಿನ ಆಡಳಿತ ವರ್ಗದವರು ಕನಿಷ್ಠ ಸೌಜನ್ಯಕ್ಕೂ ಕಾಲೇಜಿನ ತರಗತಿ ಕೊಠಡಿಗಳ ಕಟ್ಟಣ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರಿಗೆ ಒಂದು ದಿನ ರಜೆ ನೀಡುವುದಿರಲಿ ಕಾರ್ಯಕ್ರಮ ನೋಡಲು ಬಿಸಿಲಿನಲ್ಲಿ ನಿಂತಿದ್ದ ಮಹಿಳಾ ಕಾರ್ಮಿಕರನ್ನು ನೆರಳಿಗೆ ಬಂದು ನಿಲ್ಲುವಂತೆ ಇಲ್ಲವೇ ಖಾಲಿ ಇರುವ ಕುರ್ಚಿಗಳಲ್ಲಿ ಕುಳಿತುಕೊಳ್ಳುವಂತೆ ಹೇಳದೆ ವಿಶ್ವ ಮಹಿಳಾ ದಿನಾಚರಣೆಯ ಮೂಲ ಉದ್ದೇಶವನ್ನು ಮರೆತು ಟೀಕೆಗೆ ಗ್ರಾಸವಾಗಿದ್ದಾರೆ.
ಮಹಿಳೆ ಸಾಕ್ಷರತೆ ಹೊಂದುವುದು ಅನಿವಾರ್ಯ
ಕೋಲಾರ: ಮಹಿಳೆ ಸಾಕ್ಷರಳಾಗಿ ಕಾನೂನು ತನಗೆ ನೀಡಿರುವ ಹಕ್ಕುಗಳ ಕುರಿತು ಅರಿವು ಪಡೆದಾಗ ಮಾತ್ರವೇ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ಜೀವನ ನಡೆಸಲು ಸಾಧ್ಯ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ವಿನೋತ್ ಪ್ರಿಯಾ ಅಭಿಪ್ರಾಯಪಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಇಲಾಖಾ ನೌಕರರ ಸಂಘದ ವತಿಯಿಂದ ನಗರದ ಎಸ್ಎನ್ಆರ್ ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ಮಹಿಳೆ ಎಲ್ಲಾ ರಂಗಗಳಲ್ಲೂ ಸಾಧನೆಯತ್ತ ಸಾಗಿದ್ದು, ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಇರುವಿಕೆಯನ್ನು ಸಾಕ್ಷೀಕರಿಸಿ ಮೆರೆದಿದ್ದಾಳೆ ಎಂದರು.
ಮಹಿಳೆಯರು ಸಾಕ್ಷಕರರಾಗಬೇಕು, ಸ್ವಾವಲಂಬಿಗಳಾಗಬೇಕು, ಸಮಾಜಕೆ ಮಾದರಿಯಾಗಿ ಮುನ್ನಡೆದು ಇತರರಿಗೂ ಬದುಕುವ ದಾರಿ ತೋರುವ ಶಕ್ತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿ ಮಹಿಳಾ ದಿನಾಚರಣೆ ಶುಭಾಷಯ ಕೋರಿದರು.
ಆರೋಗ್ಯ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಮುನಿರಾಜು, ಯಾವುದೇ ಕುಟುಂಬ ನೆಮ್ಮದಿಯ ಹಾದಿಯಲ್ಲಿ ಸಾಗಲು ಮಹಿಳೆಯೇ ಮುಖ್ಯ ಕಾರಣ ಎಂದು ತಿಳಿಸಿ, ಇಂದು ಆರೋಗ್ಯ ಇಲಾಖೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು. ಜಿಲ್ಲಾ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಸ್. ವಿಜಯಮ್ಮ, ಮಹಿಳೆಯರು ಈ ದೇಶದ ಆಸ್ತಿ, ಸಮಾನತೆಯಿಂದ ಕಾಣುವ ಮೂಲಕ ಅವರನ್ನು ಗೌರವಿಸಬೇಕೆಂದು ತಿಳಿಸಿ, ಒಂದು ಹಳ್ಳಿಯಲ್ಲಿ ಹುಟ್ಟಿ, ಬಿ.ಎಸ್ಸಿ ನರ್ಸಿಂಗ್ ಮುಗಿಸಿ, 2 ವರ್ಷ ವೇತನವಿಲ್ಲದೆ ದುಡಿದು, ನಂತರ ಎಂಎಸ್ಸಿ, ಸ್ನಾತಕೋತ್ತರ ಪದವೀಧರಳಾಗಿ ಈ ಹಂತಕ್ಕೆ ಬೆಳೆದ ತಮ್ಮ ಜೀವನದ ಹಾದಿಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಸ್. ವಿಜಯಮ್ಮ, ಲಲಿತ , ಡಿ. ಸರಸ್ವತಿ , ಜೀವ ಜ್ಯೋತಿ , ಅಮುದಾ, ಜಯಲಕ್ಷ್ಮೀ, ಷಾಹೀನ್ ತಾಜ್ ವೀರ ವನಿತೆಯರ ವೇಷ ಭೂಷಣತೊಟ್ಟು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಂಘದ ಕಾರ್ಯದರ್ಶಿ ಜಯಲಕ್ಷ್ಮೀ, ಖಜಾಂಚಿ ಆರ್. ನಾಗರಾಜ್, ಉಪಾಧ್ಯಕ್ಷ ಜಯಣ್ಣ, ವೇಣುಗೋಪಾಲ್, ರಮಣಪ್ಪ ಕಮಲಾಕರ್, ಕಾರ್ಯದರ್ಶಿ ರಘುನಾಥ, ಕೃಷ್ಣಪ್ಪ ಜಂಟಿ ಕಾರ್ಯದರ್ಶಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

