19 ರಂದು ನಗರಸಭೆ ಅಧ್ಯಕ್ಷರ ಆಯ್ಕೆ
ಚಿಕ್ಕಬಳ್ಳಾಪುರ: ಸುಮಾರು ಒಂದು ವರ್ಷದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದಕ್ಕೇ ಚಾತಕ ಪಕ್ಷಗಳಂತೆ ಕಾಯುತ್ತಿದ್ದ ನಗರಸಭಾ ಸದಸ್ಯರು ಅಧಿಕಾರ ಪಡೆಯಲು ಉತ್ಸುಕರಾಗಿದ್ದಾರೆ.
ಮಾ.19 ರಂದು ಮಧ್ಯಾಹ್ನ 1 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಅಂದು 1 ಗಂಟೆಗೆ ನಾಮಪತ್ರಗಳ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ನಂತರ ಆಸಕ್ತ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಪಡೆಯಬಹುದಾಗಿದ್ದು ಒಂದು ವೇಳೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 31 ನಗರಸಭಾ ಸದಸ್ಯರನ್ನು ಹೊಂದಿರುವ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬ) ಮತ್ತು ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗ) ಅ (ಮಹಿಳಾ) ಮೀಸಲಾತಿಗೆ ನಿಗದಿಯಾಗಿದೆ.
ಕಳೆದ 2013 ರ ಮಾ.7 ರಂದು ರಾಜ್ಯದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದು ಮಾ.11 ರಂದು ಫಲಿತಾಂಶ ಹೊರ ಬಿದ್ದು ತೀವ್ರ ಪೈಪೋಟಿಯಲ್ಲಿ ಅನೇಕರು ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸುವ ಕನಸನ್ನು ಹೊಂದಿದ್ದರು. ಈ ನಡುವೆ ರಾಜ್ಯ ಸರ್ಕಾರ ಈ ಸ್ಥಾನಗಳ ಆಯ್ಕೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿದಾಗ ವಿವಾದ ಉಂಟಾಗಿತ್ತು. ಮುನ್ಸಿಪಲ್ ಕಾಯ್ದೆಗೆ ವಿರೋಧವಾಗಿ ಸರ್ಕಾರ ಮೀಸಲಾತಿ ಪ್ರಕಟಿಸಿದೆ ಎಂದು ಆರೋಪಿಸಿ ಹೈಕೋರ್ಟು ಮೆಟ್ಟಿಲೇರಿದ್ದರಿಂದ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದರಿಂದ ಚುನಾವಣೆ ಸುಮಾರು ಒಂದು ವರ್ಷ ಮುಂದಕ್ಕೆ ಹೋಗಿದ್ದು ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಷರತ್ತು ಬದ್ಧವಾಗಿ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
ತೀವ್ರ ಕುತೂಹಲ: ಚಿಕ್ಕಬಳ್ಳಾಪುರ ನಗರಸಭೆಯ 31 ಸದಸ್ಯರಲ್ಲಿ ಜೆಡಿಎಸ್ 10, ಕಾಂಗ್ರೆಸ್ 9, ಬಿಎಸ್ ಆರ್ 1 ಮತ್ತು ಪಕ್ಷೇತರ 11 ಮಂದಿ ಸದಸ್ಯರಿದ್ದಾರೆ. ಇಲ್ಲಿ ಕೇವಲ ಪಕ್ಷಗಳು ನಾಮಕಾವಸ್ತೆಗೆ ಮಾತ್ರ ಸೀಮಿತವಾಗಿದೆ. ಆದರೂ ಯಾವ ಪಕ್ಷಗಳು ಅಧಿಕಾರ ಪಡೆದು ಹಿಡಿತ ಸಾಧಿಸಲು ಯಶಸ್ವಿಯಾಗುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ಅತಂತ್ರ ಸ್ಥಿತಿ ಇದೆ. ಇಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿನಿಷ್ಠೆಯೇ ಮುಖ್ಯ. ಅಧಿಕಾರ ಪಡೆದುಕೊಳ್ಳುವ ಸಲುವಾಗಿ ವಿರೋಧಿಗಳು ಮಿತ್ರರು ಎನ್ನುವ ತತ್ವಕ್ಕೆ ಶರಣಾಗಿ ಸದಸ್ಯರು ವರ್ತಿಸುವುದು ಮಾಮೂಲು.
ಪುಟಿದೆದ್ದಿರುವ ಸದಸ್ಯರು: ನಗರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯದೇ ಯಾವುದೇ ಜನರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸದಸ್ಯರು ಚುನಾವಣೆಯ ಹಿನ್ನೆಲೆಯಲ್ಲಿ ಪುಟಿದೆದಿದ್ದಾರೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದು ಇನ್ನೂ ವಿಳಂಬವಾಗುತ್ತದೆ ಎಂಬ ಭಾವನೆ ಉಲ್ಪಾ ಪಲ್ಟಾ ಆಗಿದೆ. ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ರೆಸಾರ್ಟ್ ಸಂಸ್ಕೃತಿ, ನಂಬಿಕೆಯಿಲ್ಲದೇ ತಮ್ಮ ಬೆಂಬಲಿತ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಈಗಲೂ ಮುಂದುವರೆಯುತ್ತದೆಯಾ ಎನ್ನುವುದು ಸಹಜ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

