ವೇತನ ಬಿಡುಗಡೆಗೆ ಆಗ್ರಹ: ಆಯುಕ್ತರ ಕಚೇರಿ ಬಳಿ ಧರಣಿ ನಡೆಸಲು ನಿರ್ಧಾರ
ಕೋಲಾರ: ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಫೆಬ್ರವರಿ ತಿಂಗಳ ವೇತನ ಮಾ.20ರೊಳಗೆ ಪಾವತಿಯಾಗದಿದ್ದರೆ ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ರಾಜ್ಯ ಆಯುಕ್ತರ ಕಚೇರಿ ಎದಿರು ಧರಣಿ ನಡೆಸಲು ಶಿಕ್ಷಕರು ಹಾಗೂ ನೌಕರರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ನೌಕರರ ಭವನದಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ. ನಾಗರಾಜ್, ಶಿಕ್ಷಕರಿಗೆ ತಿಂಗಳ ವೇತನವನ್ನು ಸಮರ್ಪಕವಾಗಿ ವಿತರಿಸುವಲ್ಲಿ ಇಲಾಖೆ ಸ್ಪಂದಿಸುತ್ತಿಲ್ಲ, ಅನುದಾನದ ಕೊರತೆಯ ನೆಪವೊಡ್ಡುತ್ತಿದ್ದು, ಇದೀಗ ಸಂಬಳವಿಲ್ಲದೇ ಶಿಕ್ಷಕರು ಪರದಾಡುವಂತಾಗಿದೆ ಎಂದು ವಿಷಾದಿಸಿದರು.
ವೇತನ ಬಟವಾಡೆಯಲ್ಲಿನ ಸಮಸ್ಯೆಗಳ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಸಮಸ್ಯೆ ಇನ್ನೂ ಪೂರ್ಣಪ್ರಮಾಣದಲ್ಲಿ ನಿವಾರಣೆಯಾಗದ ಕಾರಣ ಆಯುಕ್ತರ ಕಚೇರಿ ಎದುರು ಧರಣಿ ನಡೆಸೋಣ ಎಂದರು. ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ, ತಾಲೂಕಿನ ಈ ಶೈಕ್ಷಣಿಕ ಸಾಲಿನ ಅಂತಿಮ ದಿಗಳಲ್ಲಿ ಇಲಾಖೆ ನಡೆಸಲು ಮುಂದಾಗಿದ್ದ ಮೌಲ್ಯಮಾಪನ ಕಾರ್ಯ ಪರೀಕ್ಷೆಗಳ ಕಾರಣ ರದ್ದಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿ ಕಾರಣ ಇದೀಗ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ನಡೆಯಬೇಕಾಗಿದ್ದ ಬಡ್ತಿ ಕೌನ್ಸಿಲಿಂಗ್ ರದ್ದಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉರ್ದು ಶಿಕ್ಷಕರು ಸೇರಿದಂತೆ ಬಡ್ತಿ ಕೌನ್ಸಿಲಿಂಗ್ಅನ್ನು ನಡೆಸುವುದಾಗಿ ಡಿಡಿಪಿಐ ಭರವಸೆ ನೀಡಿದ್ದಾರೆಂದರು. ತಾಲೂಕು ಅಧ್ಯಕ್ಷ ಕೆ.ಟಿ. ನಾಗರಾಜ್, ಎಲ್ಲಾ ಶಿಕ್ಷಕರು ಹೆಚ್ಆರ್ಎಂಎಸ್ನಲ್ಲಿ ಶಿಕ್ಷಕರ ಶಾಲೆಗಳ ಹೆಸರು ಬಿಟ್ಟು ಹೋಗಿದ್ದು ಸರಿಪಡಿಸುವಂತೆ ಬಿಇಒ ಅವರಲ್ಲಿ ಕೋರಿದರು. ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡುತ್ತಿರುವ 3 ಸಾವಿರ ಸಂಭಾವನೆಯನ್ನು ಕನಿಷ್ಠ 10ಸಾವಿರಕ್ಕೆ ಏರಿಸಬೇಕು. ಪ್ರತಿ ವರ್ಷ 2 ಸಾವಿರ ಸಿಜಿ ನೀಡಬೇಕು, ಮತಗಟ್ಟೆ ಅಧಿಕಾರಿಗಳಿಗೆ ಮತದಾನದಂದು ಮತಗಟ್ಟೆಯಲ್ಲಿ ವಿಶೇಷ ಆಸನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸಮೂರ್ತಿ, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಮುರಳಿಮೋಹನ್, ಉಪಾಧ್ಯಕ್ಷ ಖಾದರ್ ಇಲಾಹಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವಿ.ನಾರಾಯಣಸ್ವಾಮಿ, ವಿ.ಸೋಮಶೇಖರ್, ಕೆ.ಪಿ.ಶ್ರೀನಿವಾಸ್, ಸೈಯದ್ ಖಾದರ್ ಅಹಮದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

