ಕೋಲಾರ

ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಹಾಕಿ

Published On :

ಕ.ಪ್ರ. ವಾರ್ತೆ ,  ಕೋಲಾರ ,  ಮಾ.12
ಜಿಲ್ಲೆಯಲ್ಲಿ ವಾಹನ ಖರೀದಿಗೆ ಸಾಲದ ನೆರವು ನೀಡುತ್ತಿರುವ ವಿವಿಧ ಫೈನಾನ್ಸ್ ಕಂಪನಿಗಳು ಸಾಲ ಮರು ವಸೂಲಾತಿ ನೆಪದಲ್ಲಿ ಗ್ರಾಹಕರಿಗೆ ಸಾಕಷ್ಟು ಕಿರುಕುಳ ನೀಡುತ್ತಿರುವುದರಿಂದ, ಇವುಗಳ ಮೇಲೆ ನಿಯಂತ್ರಣ ಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿ ಯಂಗ್ ಇಂಡಿಯಾ ಇಂಟಿಗ್ರೇಟೆಡ್ ವೆಲ್‌ಫೇರ್ ಫೌಂಡೇಷನ್‌ನಿಂದ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಕೆ. ನರೇಂದ್ರಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ರೆವಿನ್ಯೂ ಹೆಡ್‌ಮುನ್ಷಿ ಕೃಷ್ಣೇಗೌಡರಿಗೆ ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ವಿವಿಧ ವಾಹನಗಳ ಶೋರೂಮ್‌ಗಳಿವೆ. ಇಲ್ಲಿ ವಾಹನ ಖರೀದಿಸುತ್ತಿರುವವರಿಗೆ ಸಾಲದ ನೆರವನ್ನೂ ನೀಡುವುದಾಗಿ ಅತ್ಯಾಕರ್ಷಕ ಜಾಹೀರಾತುಗಳನ್ನು ಕಂಪನಿಗಳು ನೀಡುತ್ತಿವೆ. ಈ ಜಾಹೀರಾತುಗಳಿಗೆ ಮಾರು ಹೋದ ಮುಗ್ಧ ಸಾರ್ವಜನಿಕರು ಇಲ್ಲಿನ ಸಾಲದ ನೆರವನ್ನು ಪಡೆದು ವಾಹನವನ್ನು ಖರೀದಿಸುತ್ತಾರೆ. ಆದರೆ ವಾಹನ ಖರೀದಿಸಿದ ನಂತರ ಇದೇ ಸಾಲದ ನೆರವನ್ನು ನೀಡಿದ ಕಂಪನಿಗಳು ಇನ್ನಿಲ್ಲದ ತೊಂದರೆಗಳನ್ನು ಈ ಮುಗ್ಧ ಖರೀದಿದಾರನಿಗೆ ನೀಡುತ್ತಿವೆ ಎಂದು ಅವರು ದೂರಿದರು.
ಸಾಲದ ನೆರವು ಪಡೆದು ವಾಹನ ಖರೀದಿಸುತ್ತಿರುವ ಅಷ್ಟೂ ಜನ ಬಡವರೇ ಆಗಿರುತ್ತಾರೆ. ಇವರು ಒಂದು ತಿಂಗಳ ಕಂತು ಪಾವತಿಸದಿದ್ದರೂ ವಾಹನವನ್ನು ಸಾಲ ರಿಕವರಿ ಎಕೆಕ್ಯೂಟಿವ್ಸ್ ಎತ್ತಿಕೊಂಡು ಹೋಗಿ ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಖರೀದಿದಾರನ ಮನೆಗೆ ಹೋಗಿ ಬೆದರಿಸುವ, ಸಾರ್ವಜನಿಕವಾಗಿ ಇವರಿಗೆ ಅವಮಾನ ಮಾಡುವ, ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕದಿದ್ದರೆ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಚ್ಚು ಸಾಲ ವಸೂಲಿ ಮಾಡಿದ್ದಲ್ಲಿ ಹೆಚ್ಚು ಕಮಿಷನ್ ನೀಡುವ ಆಮಿಷವನ್ನು ಫೈನಾನ್ಸ್ ಕಂಪನಿಗಳು ತಮ್ಮ ರೆಕವರಿ ಎಕ್ಸೆಕ್ಯೂಟಿವ್ಸ್‌ಗೆ ತೋರಿಸುವುದರಿಂದ ಇವರು ತಮ್ಮ ಅಧಿಕಾರ ಮೀರಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾನೂನು ಬದ್ಧವಾಗಿ ಯಾವುದೇ ಫೈನಾನ್ಸ್ ಕಂಪನಿಗಳಿಗೆ ಅಧಿಕಾರ ಇಲ್ಲದಿದ್ದರೂ ಸ್ಥಳೀಯ ಪೊಲೀಸ್, ಗೂಂಡಾಗಳ ನೆರವಿನಿಂದ ಇದೊಂದು ರೀತಿಯ ಮಾಫಿಯಾ ರೀತಿ ಮಾರ್ಪಟ್ಟಿದೆ. ಗೂಂಡಾವಣತ್ತಿಗೆ ಅವಕಾಶವಾಗುತ್ತಿದೆ. ಈ ರೀತಿ ಸಾಲದ ನೆರವನ್ನು ನೀಡುತ್ತಿರುವ ಕಂಪನಿಗಳು ನೀಡಿದ ಮೊತ್ತಕ್ಕಿಂತಲೂ ಅತಿ ಹೆಚ್ಚು ಹಣವನ್ನು ಖರೀಧಿದಾರನಿಂದ ವಸೂಲಿ ಮಾಡಿರುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನಂಜೇಗೌಡ, ಬಿ.ವಿ. ಗಿರಿ, ಲಕ್ಷ್ಮಿ, ಜಾಫರ್, ಅತೀಕ್‌ಪಾಷ, ಯಲ್ಲಪ್ಪ, ಎನ್. ನವೀನ್‌ಕುಮಾರ್, ಎಂ. ಹರಿಕೃಷ್ಣ, ಹನುಮಪ್ಪ, ಶ್ರೀನಿವಾಸ್, ವೇಣುಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.