ಬೇತಮಂಗಲ; ಎಗ್ಗಿಲ್ಲದೆ ಸಾಗಿರುವ ಮರಳುದಂಧೆ
ಕೆಜಿಎಫ್: ಕೋಲಾರ ಜಿಲ್ಲೆಯಲ್ಲಿ ಮತ್ತೆ ಮರಳುದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಕೆಜಿಎಫ್ ಕ್ಷೇತ್ರದ ಬೇತಮಂಗಲ ಹಾಗೂ ಕ್ಯಾಸಂಬಳ್ಳ ಹೋಬಳಿಯ ಸುತ್ತಮುತ್ತಲಿನಲ್ಲಿ ಈ ದಂಧೆ ಮಿತಿ ಮೀರಿದೆ. ಆದರೂ ಬಂಗಾರಪೇಟೆ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಆರೋಪಿಸಿದ್ದಾರೆ.
ಬೇತಮಂಗಲ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬೇತಮಂಗಲ ಕೆರೆ ಮತ್ತು ಪಾಲಾರ್ ನದಿಗಳಿಂದ ಲಾರಿ ಮತ್ತು ಟ್ಯ್ರಾಕ್ಟರ್ಗಳ ಮೂಲಕ ಮರಳನ್ನು ತುಂಬಿಕೊಂಡು ರಾತ್ರಿ ಹಾಗೂ ಬೆಳಗಿನ ಜಾವ ರಾಜರೋಷವಾಗಿ ಸಾಗಿಸಲಾಗುತ್ತಿದೆ ಎಂದರು.
ಕ್ಯಾಸಂಬಳ್ಳಿ ಮುಖಾಂತರ ಕೆಜಿಎಫ್ನ ಬೆಮೆಲ್ನಗರ ಮಾರ್ಗವಾಗಿ ಬೆಂಗಳೂರು ಹಾಗೂ ರಾಜ್ಯದ ಇತರೆ ತಾಲೂಕುಗಳಿಗೆ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಬೇತಮಂಗಲ ಒಳಚರಂಡಿ ಮಂಡಳಿಯ ಭದ್ರತಾ ಸಿಬ್ಬಂದಿ ಅಕ್ರಮ ಮರಳುದಂಧೆ ನಡೆಸುವವರೊಂದಿಗೆ ಶಾಮೀಲಾಗಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಬಗ್ಗೆ ಕಾರ್ಯಪಾಲಕ ಅಭಿಯಂತರ ರಘುನಾಥಯ್ಯಶೆಟ್ಟಿ ಅವರಿಗೆ ದೂರು ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಡಾ. ರೋಹಿಣಿ ಕಟೋಚ್ ಸೆಫಟ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮರಳು ದಂಧೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿತ್ತು. ಆದರೆ ಅವರು ವರ್ಗಾವಣೆಗೊಂಡ ನಂತರ ಮತ್ತೆ ಶುರುವಾಗಿದೆ.
ಇತ್ತ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಕಾನೂನುಗಳು ಕೆಜಿಎಫ್ ಕ್ಷೇತ್ರದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆರೋಪಿಸಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಾದ ಸುಬ್ರಮಣಿ, ಮಂಜುನಾಥ್, ಗಣೇಶ್, ಮುನಿವೆಂಕಟೇಗೌಡ, ದೊಡ್ಡಕಾರಿ ವಿಶ್ವನಾಥ್ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

