ಕೋಲಾರ

ಮ್ಯಾಜಿಕ್‌ನಿಂದ ತಿಮ್ಮನ ಕಗ್ಗ ಪರಿಚಯ

Published On :

ಕೋಲಾರ: ಡಿವಿಜಿಯವರ ಮಂಕುತಿಮ್ಮನ ಕಗ್ಗ ವಿಚಾರಧಾರೆಗಳನ್ನು ಮ್ಯಾಜಿಕ್ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಚಿತ್ರನಟ ಎಂ.ಡಿ.ಕೌಶಿಕ್ ಪ್ರಶಂಸೆಗೆ ಪಾತ್ರರಾದರು.
ನಗರದ ಮಹಿಳಾ ಕಾಲೇಜಿನಲ್ಲಿ ಕಲಾ ಮತ್ತು ಭಾಷಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಂಕುತಿಮ್ಮನ ಕಗ್ಗ ಆಧಾರಿಸಿ ಕಗ್ಗ ಮ್ಯಾಜಿಕ್ ಪ್ರದರ್ಶಿಸಿದ ಅವರು ಡಿವಿಜಿಯವರ ಸಾಹಿತ್ಯದ ತಿರುಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಆತ್ಮವಿಶ್ವಾಸದ ಕೊರತೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಗುರಿ ಮತ್ತು ಸಾಧನೆ ಮಾಡಿದರೆ ಎಲ್ಲ ಸಂಕಷ್ಟಗಳನ್ನು ಮೆಟ್ಟಿ ನಿಲ್ಲಬಹುದು ಎಂದರು.
ದೇಶದಲ್ಲಿ ಅಧಿಕಾರ ಮತ್ತು ಅವಕಾಶ ಸಿಕ್ಕಿದಾಗ ಜನಪರ ಕೆಲಸಗಳನ್ನು ಮಾಡಬೇಕೆ ಹೊರತು ತಮಿಳುನಾಡಿನ ರಾಜ, ಹಾಗೂ ಕನ್ನಿಮೌಳಿಯ ರೀತಿಯಲ್ಲಿ ಭ್ರಷ್ಟರಾಗಬಾರದೆಂದು ವಿದ್ಯಾರ್ಥಿನಿಯರಿಗೆ ಸೂಚ್ಯವಾಗಿ ಹೇಳಿದರು.
ಅಧ್ಯಕ್ಷತೆಯನ್ನು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಆಂಜಿನಪ್ಪ ವಹಿಸಿದ್ದರು. ಉಪನ್ಯಾಸಕರಾದ ಗೋವಿಂದಪ್ಪ, ರೆಡ್ಡೆಪ್ಪ, ರಿಯಾಜ್ ಅಹಮದ್ ಇದ್ದರು.
ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಮೇರಿಕಾ ಕಂಪನಿಯೊಂದರ ಸಾಫ್ಟ್‌ವೇರ್ ಉದ್ಯೋಗಿ ಚೈತ್ರಾ ತಮ್ಮ ತಂದೆ ಎಂ.ಎಸ್. ಚಂದ್ರಶೇಖರ್ ಅವರ ಸ್ಮರಣಾರ್ಥ 300 ಊಟದ ತಟ್ಟೆಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಚೈತ್ರ ಇತ್ತೀಚೆಗೆ ದೂರದರ್ಶನ, ಮೊಬೈಲ್, ಇಂಟರ್‌ನೆಟ್ ಮೊದಲಾದವುಗಳಿಂದ ಸಮಯವನ್ನು ಅವುಗಳೊಂದಿಗೆ ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಉತ್ತಮ ಪ್ರಜೆಗಳಾಗಿ ಜೀವನವನ್ನು ರೂಪಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಗಣೇಶ್ ಗ್ರಾಮೀಣ ಭಾಗಗಳಿಂದ ವಿದ್ಯಾಭ್ಯಾಸ ಪಡೆದ ಅನೇಕರು ಸ್ವದೇಶ ಹಾಗೂ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದು ಇಂದಿಗೂ ಸಹ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಇಂತಹ ಗುಂಪಿಗೆ ಚೈತ್ರಾ ಕೂಡ ಸೇರುತ್ತಾರೆ. ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ವಿತರಿಸಿ ಉದಾರತೆಯನ್ನು ಮೆರೆದಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಹಿರಿಯ ವಿಜ್ಞಾನ ಶಿಕ್ಷಕ ಬಿ. ವೀರಭದ್ರಯ್ಯ, ಚೈತ್ರಾರವರ ತಾಯಿ ರಾಜೇಶ್ವರಿ, ಶಾಲೆಯ ಶಿಕ್ಷಕರಾದ ಮಂಜುಳಾ, ಸಂತೋಷ್‌ಕುಮಾರ್, ನೇತ್ರಾವತಿ, ರಮೇಶ್ ಪುಜಾರಿ, ನಾಗರಾಜ್, ಜ್ಞಾನೇಶ್ವರಿ, ಆದಿನಾರಾಯಣಪ್ಪ, ಉಷಾ, ಶೈಲಜಾ, ವೀಣಾ ಸೇರಿದಂತೆ ಹಲವರು ಇದ್ದರು.
ಕರ್ತವ್ಯ ಲೋಪ-ಹಾಸ್ಟೆಲ್ ವಾರ್ಡನ್ ಅಮಾನತು
ಕೋಲಾರ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ಅಣ್ಣಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವೃತ್ತಿ ಶಿಕ್ಷಕ ಹಾಗೂ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿದ್ದ ಎಂ. ನಾರಾಯಣಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಹಾಸ್ಟೆಲ್‌ನ ಹೆಚ್ಚುವರಿ ಜವಾಬ್ದಾರಿಯಂತೆ ವಾರ್ಡನ್ ಆಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸುಮಾರು 1 ಕಿ.ಮೀ. ದೂರದಿಂದ ಬಲವಂತವಾಗಿ ನೀರನ್ನು ತರಿಸಿಕೊಳ್ಳುತ್ತಿದ್ದರಲ್ಲದೆ, ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ಗ್ರಾಮದ ದಲಿತ ಯುವವೇದಿಕೆ ದೂರನ್ನು ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ನಡೆದ ವಿಚಾರಣೆಯಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ವರದಿಯಂತೆ ಎಂ.ನಾರಾಯಣಸ್ವಾಮಿ ಅವರು ಸರ್ಕಾರಿ ನೌಕರರಾಗಿ ಜವಾಬ್ದಾರಿಯುತ ಶಿಕ್ಷಕರಾಗಿ ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಶ್ರಮಿಸದೆ ಶಾಲಾ ಮಕ್ಕಳಿಗೆ ತೊಂದರೆ ಕೊಟ್ಟಿರುವುದು ಸರ್ಕಾರಿ ನೌಕರರಿಗೆ ಸಲ್ಲದ ನಡವಳಿಕೆ ಎಂದು ಪರಿಗಣಸಿ ಅಮಾನತು ಮಾಡಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ. ಪದ್ಮನಾಭ್ ಈ ಆದೇಶ ಹೊರಡಿಸಿದ್ದಾರೆ.
ಅಣ್ಣಿಹಳ್ಳಿಯ ಹಾಸ್ಟೆಲ್ ಅವ್ಯವಸ್ಥೆಯ ಆಗರ ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಫೆ.19ರಂದು ವಿಶೇಷ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.
ಜಮೀನು ಜಗಳ: ವ್ಯಕ್ತಿಗೆ ಜಾತಿ ನಿಂದನೆ, ಹಲ್ಲೆ
ಚಿಂತಾಮಣಿ: ಜಮೀನು ವಿಷಯವಾಗಿ ಗುಂಪೊಂದು ವ್ಯಕ್ತಿಯೊಬ್ಬನಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲು ಯತ್ನಿಸಿರುವಘನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವೈ.ದೇವಪ್ಪಲ್ಲಿ ಗ್ರಾಮದಲ್ಲಿ ನಡೆದಿದ.
ತಾಲೂಕಿನ ವೈ.ದೇವಪ್ಪಲ್ಲಿ ಗ್ರಾಮದ ವ್ಯಾಪ್ತಿಯ ಕೆಂಚನಾಯಕನಹಳ್ಳಿ ಹತ್ತಿರವಿರುವ ಬಿ.ಪಿ. ಸುಬ್ಬರಾಯಪ್ಪ ಎಂಬ ದಲಿತನಿಗೆ ಸೇರಿದ ಜಮೀನಿನಲ್ಲಿ ಸರ್ವೇ ಮಾಡಿಸಿ ಕಲ್ಲುಗಳನ್ನು ಹಾಕಲಾಗಿತ್ತು.
ಆದರೆ ಇದೇ ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಡಿ.ವಿ. ಕೃಷ್ಣಪ್ಪ, ರಮದಾಸು, ಚಿಕ್ಕಶಂಕರಪ್ಪ, ಶ್ರೀನಿವಾಸ, ಪೆದ್ದಶಂಕರಪ್ಪ, ಅಂಬರೀಷ್ ಸೇರಿದಂತೆ 15 ಜನ ಗುಂಪು ಕಟ್ಟಿಕೊಂಡು ಸುಬ್ಬರಾಯಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಯತ್ನಿಸಿರುವುದಾಗಿ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಪೋಲೀಸ್ ಠಾಣೆಯ ಸಬ್‌ಇನ್ಸೆಪೆಕ್ಟರ್ ಪ್ರವೀಣ್‌ಕುಮಾರ್ ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡು 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆಂದು ತಿಳಿಸಿದ್ದಾರೆ.
ಮಹಿಳೆಯರು ಸ್ವಾವಲಂಬಿಯಾಗಿ
ಕೆಜಿಎಫ್: ಮಹಿಳೆಯ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಆಶಾದೀಪ ಸ್ವಯಂಸೇವಾ ಸಂಘದ ಮುಖ್ಯಸ್ಥೆ ರೂಪಕಲಾ ಶಶಿಧರ್ ಹೇಳಿದರು.  ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕ ಎಸ್.ರಾಜೇಂದ್ರನ್ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು ಇದಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದೇ ಕಾರಣ. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಹೆಚ್ಚಿನ ಶಿಕ್ಷೆ ವಿಧಿಸಬೇಕು ಎಂದರು.  ಕೆಜಿಎಫ್ ನ್ಯಾಯಾಧೀಶರಾದ ಆರ್.ಪಿ.ನಂದೀಶ್ ಹಾಗೂ ಎಸ್.ಜೆ.ಕೃಷ್ಣನ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಮತ್ತು ನ್ಯಾಯಾಲಯದಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಪಾಲ್ಗೊಂಡು ಕಾನೂನಿನ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕು ಎಂದರು. ವಕೀಲರಾದ ಆನಂದರಾಮಯ್ಯ, ಕಲೈಸೆಲ್ವಿ, ಕುಸುಮಾ ಕೃಷ್ಣಮೂರ್ತಿ, ಅಲಮೇಲು, ಮಣಿವಣ್ಣನ್, ಶಾಂತಮ್ಮ ಇದ್ದರು.
ಪೊಲೀಸ್ ಪೇದೆ ರಕ್ಷಿಸಿದ ಪತ್ರಕರ್ತ
ಚಿಂತಾಮಣಿ: ರಸ್ತೆ ಅಪಘಾತದಲ್ಲಿ ಕಾರ್ಯನಿರತ ಪೊಲೀಸ್ ಪೇದೆಯೊಬ್ಬ ರಕ್ತ ಗಾಯಗಳಾಗಿ ಸಾವು-ನೋವಿನ ಜೊತೆ ಹೋರಾಟ ನಡೆಸುತ್ತಿದ್ದ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಕಂಡು ಪತ್ರಕರ್ತ ತಕ್ಷಣ 108 ಗೆ ಫೋನ್ ಮಾಡಿ ಆಪದ್ಭಾಂದವನಾಗಿ ಪ್ರಾಣವನ್ನು ಉಳಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡಿಕೆರೆ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಘಟನೆ ವಿವರ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಪುರುಷೋತ್ತಮ್ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಂತಾಮಣಿ-ಮದನಪಲ್ಲಿ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದ ಮೇರೆಗೆ ಹೋಗುತ್ತಿರುವಾಗ ತಮಿಳುನಾಡಿಗೆ ಸೇರಿದ ಎಂಜಿಎಂ ಕಂಪನಿಯ ಭಾರಿ ಲಾರಿಯ ಚಾಲಕ ಅತಿವೇಗ ಮತ್ತು ಅಜಾಗ್ರತೆಯಿಂದ ಚಾಲನೆ ಮಾಡಿಕೊಂಡು ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನವು ಲಾರಿ ಚಕ್ರಕ್ಕೆ ಸಿಲುಕಿ ಸಂಪೂರ್ಣ ಜಖಂಗೊಂಡಿತು. ಪೇದೆ ಪುರುಷೋತ್ತಮ್ ಕಾಲು ಮುರಿದು ಸಾವು-ನೋವಿನ ಜೊತೆ ಹೋರಾಟ ನಡೆಸುತ್ತಿದ್ದ ತುರ್ತು ಪರಿಸ್ಥಿತಿಯಲ್ಲಿ ಕಾಚಹಳ್ಳಿ ಗ್ರಾಮದ ಪತ್ರಕರ್ತ ರಾಘವೇಂದ್ರ ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡಿ ಕೂಡಲೇ 108 ಆಂಬುಲೆನ್ಸ್‌ನಲ್ಲಿ ಪೊಲೀಸ್ ಪೇದೆಯನ್ನು ನೆರೆಹೊರೆಯರ ಸಹಾಯದೊಂದಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು.
ಪಿಯು ಪರೀಕ್ಷೆ ಯಾವುದೇ ಡಿಬಾರ್ ಇಲ್ಲ
ಕೋಲಾರ: ಜಿಲ್ಲಾದ್ಯಂತ ಬುಧವಾರ ಆರಂಭಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಸುಗಮವಾಗಿ ನಡೆದಿದ್ದು, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಬುಧವಾರ ರಾಜ್ಯಶಾಸ್ತ್ರದ ಪರೀಕ್ಷೆ ಜಿಲ್ಲೆಯ 23 ಕೇಂದ್ರಗಳಲ್ಲಿ ನಡೆದಿದ್ದು, ಎಲ್ಲಿಯೂ ಪರೀಕ್ಷೆ ನಕಲು, ಅವ್ಯವಹಾರ ನಡೆದಿಲ್ಲ ಎಂದು ವಿವರ ನೀಡಿದರು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ವಿಧಿಸಲಾಗಿದ್ದು, ಆ ವ್ಯಾಪ್ತಿಯ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು ಎಂದರು. ಯಾವುದೇ ಲೋಪಗಳು ಕಂಡು ಬರದಂತೆ ಎಚ್ಚರ ವಹಿಸಲಾಗಿದ್ದು, ಜಾಗೃತದಳದ ತಂಡಗಳು ಜಿಲ್ಲಾದ್ಯಂತ ಸಂಚರಿಸಿ ತಪಾಸಣೆ ನಡೆಸಿದವು ಎಂದು ತಿಳಿಸಿದ್ದಾರೆ.
ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಿ: ಮಹಿಳೆಯರಿಗೆ ಕಿವಿಮಾತು
ಕೋಲಾರ: ಹೆಣ್ಣು ಆತ್ಮಸ್ಥ್ಯೆರ್ಯವನ್ನು ಮೈಗೂಡಿಸಿಕೊಂಡು ತನ್ನ ಕುಟುಂಬವನ್ನು ಜವಾಬ್ದಾರಿಯಿಂದ ನಿರ್ವಹಿಸುವುದರ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ, ಅಭಿವೃದ್ಧಿ ಹೊಂದಬೇಕೆಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು ಅಭಿಪ್ರಾಯಪಟ್ಟರು. ಉದ್ಯೋಗ ತರಬೇತಿ ಕೇಂದ್ರ ಹೊನ್ನೇನಹಳ್ಳಿ, ಸರ್ವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲೆ ಸಿಸ್ಟರ್ ಮೆಟ್ಟಿ ಮಹಿಳೆಯರ ಹಕ್ಕುಗಳು ಮತ್ತು ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿದರು, ಸಿಸ್ಟರ್ ಜೋಸ್ನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಜೇತರಾದವರಿಗೆ ಚೌಡೇಶ್ವರಿ ರಾಮು ಬಹುಮಾನ ವಿತರಿಸಿದರು, ಕಲ್ಪನ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಸುಬ್ರಮಣಿ, ಸಿಸ್ಟರ್ ನಿರ್ಮಲ ಶಾರದ ಇದ್ದರು. ಸಿಸ್ಟರ್ ಸುಶೀಲ ಸಂಸ್ಥೆಯ ವರದಿ ಮಂಡಿಸಿದರು. ಸುಜಾತ ಸ್ವಾಗತಿಸಿ, ನಾರಾಯಣಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.