ಜೆಡಿಎಸ್ ಅಭ್ಯರ್ಥಿ ಕೇಶವ ವಿರುದ್ಧ ದೂರು ನೀಡಲು ತೀರ್ಮಾನ
ಕೆಜಿಎಫ್: ಜೆಡಿಎಸ್ ಲೋಕಸಭಾ ಅಭ್ಯರ್ಥಿ ಕೆ.ಕೇಶವ ಅವರು ಪಕ್ಷದ ಕಾರ್ಯಕರ್ತರನ್ನು ಹಾಗೂ ಮುಖಂಡರ ಸಭೆ ನಡೆಸದೆ, ಯಾವುದೇ ಮಾಹಿತಿ ನೀಡದೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸುವುದಾಗಿ ಜೆಡಿಎಸ್ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ಕೆ.ರಾಜೇಂದ್ರನ್ ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಅಭ್ಯರ್ಥಿ ಕೇಶವರನ್ನು ಸಂಪರ್ಕಿಸಿ ಮಾತನಾಡಿದಾಗ ಕೆಜಿಎಫ್ಗೆ ಮತಯಾಚನೆಗೆ ಬರುವುದಾಗಿ ತಿಳಿಸಿದ್ದರು. ಹಾಗಾಗಿ ತಮ್ಮ ನೂರಾರು ಕಾರ್ಯಕರ್ತರೊಂದಿಗೆ ನಗರದ ಫೈವ್ಲೈಟ್ಸ್ ವೃತ್ತ ಹಾಗೂ ಬೆಮೆಲ್ನಗರದಲ್ಲಿ ಕಾಯುತ್ತಿದ್ದಾಗ ಅಭ್ಯರ್ಥಿ ಕೇಶವ ನಗರಕ್ಕಾಗಮಿಸದೆ ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಇವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. ಕೆಜಿಎಫ್ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಪಕ್ಷದ ಅಭಿವೃದ್ಧಿಗೆ ಹಲವು ನಾಯಕರು ಹಾಗೂ ಕಾರ್ಯಕರ್ತರು ಶ್ರಮಿಸಿದ್ದಾರೆ. ಇಂಥ ಮುಖಂಡರನ್ನು ಸಂಪರ್ಕಿಸಿ ಎಲ್ಲರನ್ನು ಒಗ್ಗೂಡಿಸಿ ಸಭೆ ನಡೆಸುವ ಬದಲು ತಮಗೆ ಹಾಗೂ ಮುಖಂಡರಿಗೆ ಯಾವುದೇ ಮಾಹಿತಿ ನೀಡದೆ ಪ್ರಚಾರಕ್ಕಾಗಮಿಸಿದ್ದ ಕೇಶವ ಅವರ ಆಯ್ಕೆಯನ್ನು ಪಕ್ಷದ ವರಿಷ್ಠರು ಮರು ಪರಿಶೀಲನೆ ನಡೆಸಲು ಮನವಿ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಪೂಂಡಿರಾಜ್, ಕೆಜಿಎಫ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಾಸಿಸುತ್ತಿದ್ದು, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ರಾಜೇಂದ್ರನ್ ಅವರನ್ನು ಸಂಪರ್ಕಿಸದೆ ಕೇಶವ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವುದು ಪಕ್ಷದ ಶಿಸ್ತಿಗೆ ಧಕ್ಕೆ ಉಂಟಾಗುತ್ತದೆ ಎಂದರು. ಈ ವೇಳೆ ಜೆಡಿಎಸ್ ಮುಖಂಡರಾದ ಪರಂದಾಮನ್, ನೂರುಲ್ಲಾಖಾನ್, ನಾರಾಯಣ್, ರಷೀದ್ಖಾನ್, ಅಬ್ದುಲ್ವಾಜೀದ್, ಮುರುಗೇಶ್, ಸಗಾಯರಾಜ್, ನಾಗರಾಜ್. ಪುರುಷೋತ್ತಮರೆಡ್ಡಿ, ಸುಂದರರಾಮರೆಡ್ಡಿ ಮತ್ತಿತರೆ ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

