ಚುನಾವಣೆ ಕಾವು ಬೀಕೋ ಎನ್ನುತ್ತಿರುವ ತಾಪಂ ಕಚೇರಿ!
ಬಂಗಾರಪೇಟೆ: ಚುನಾವಣೆ ಕಾವು ಪಡೆದುಕೊಳ್ಳುತ್ತಿದ್ದಂತೆ ತಾಲೂಕು ಪಂಚಾಯ್ತಿ ಕಚೇರಿ ಬೀಕೋ ಎನ್ನುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದೊಂದು ಯಾವೊಬ್ಬ ಸದಸ್ಯರೂ ಇತ್ತ ತಲೆಹಾಕುತ್ತಿಲ್ಲ. ಅವರೆಲ್ಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಇನ್ನೂ ತಾಪಂ ಮುಖ್ಯಾಧಿಕಾರಿ ಕೆ.ಎಸ್.ಭಟ್ ಅವರನ್ನೂ ಚುನಾವಣೆ ಕೆಲಸಕ್ಕೆ ನಿಯೋಜಿಸಲಾಗಿದೆ. ವಿವಿಧ ಗ್ರಾಮಗಳಿಂದ ರೈತರು ತಮ್ಮ ಕೆಲಸಕ್ಕಾಗಿ ಇಲ್ಲಿಗೆ ಬಂದರೆ ಯಾರೋಬ್ಬರೂ ಸಿಗುವುದಿಲ್ಲ ಎಂಬ ಗೊತ್ತಿರುವುದರಿಂದ, ಜನರೂ ಯಾರೂ ಬರುತ್ತಿಲ್ಲ. ಕಚೇರಿಯಲ್ಲಿ ಬರೀ ಸಿಬ್ಬಂದಿ ಮಾತ್ರ ಬಂದು ಹೋಗುವಂತಾಗಿದೆ.
ಹಲವು ಸಮಸ್ಯೆಗಳು: ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಹತ್ತಾರು ಸಮಸ್ಯೆಗಳಿವೆಯಾದರೂ ಚುನಾವಣೆ ಮುಗಿಯುವವರೆಗೂ ಯಾವ ಕೆಲಸ ಕಾರ್ಯಗಳೂ ನೆಟ್ಟಿಗೆ ನಡೆಯುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ, ಪಂಚಾಯ್ತಿಗಳಲ್ಲಿಯೂ ಕೆಲ ಅಧಿಕಾರಿಗಳನ್ನು ಚುನಾವಣೆಗೆ ಬಳಸಿಕೊಂಡಿರುವುದರಿಂದ ಅಲ್ಲಿಯೂ ರೈತರ ಕೆಲಸ ಕಾರ್ಯಗಲು ಅಷ್ಟಕ್ಕಷ್ಟೆ. ಜನಪ್ರತಿನಿಧಿಗಳನ್ನು ಕೇಳಿದರೆ ನೀತಿ ಸಂಹಿತೆ ಇರುವುದರಿಂದ ನಾವು ಯಾವುದೇ ಹೊಸ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.
ಬೇಸಿಗೆ ಪ್ರತಾಪ: ಜನರ ಹಿಡಿ ಶಾಪ!
ಶಿಡ್ಲಘಟ್ಟ: ಬೇಸಿಗೆಯ ಪ್ರತಾಪ ಅವಳಿ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರಗಳಲ್ಲಿ ಶುರುವಾಗಿದೆ.
ಈಗಾಗಲೇ ಈ ಎರಡೂ ಜಿಲ್ಲೆಗಳನ್ನು ಸರ್ಕಾರ ಬರಪೀಡಿತ ಜಿಲ್ಲೆಗಳೆಂದು ಘೋಷಿಸಿದೆ. 20 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಅಜಗಜ ವ್ಯತ್ಯಾಸವಿದೆ. ಜಿಲ್ಲೆಗಳಲ್ಲಿ ಯಾವೊಂದು ಕೆರೆ, ಕುಂಟೆಗಳಲ್ಲಿ ನೀರಿಲ್ಲ. ಮನುಷ್ಯರು ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲ.
ಬಯಲುಸೀಮೆ ಭಾಗಗಳಲ್ಲಿನ ಕೃಷಿ ಚಟುವಟಿಕೆಗೂ ನೀರಿಲ್ಲ. 1300 ಅಡಿಗಳವರೆಗೂ ಕೊರೆದರೂ ಬೋರ್ವೆಲ್ಗಳಿಗೆ ನೀರು ಬರುತ್ತಿಲ್ಲ. ನೀರಿನ ಮೂಲಗಳು ಗೊತ್ತಾಗದೇ ರೈತರು ಪರಿತಪಿಸುತ್ತಿದ್ದಾರೆ.
ದಿನಬೆಳಗಾದರೆ ಕಿ.ಮೀ.ಗಟ್ಟಲೆ ಹೋಗಿ ಕುಡಿಯುವ ನೀರನ್ನು ಹೊತ್ತು ತರಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಲ್ಲ ನಾಳೆ ನೀರಾವರಿ ಯೋಜನೆಗಳು ಜಾರಿಯಾದರೆ, ಪಾಳುಬಿದ್ದಿರುವ ಬಾವಿಗಳಲ್ಲಿ ಪುನ- ನೀರು ಬರಬಹುದೆಂಬ ನಿರೀಕ್ಷೆಯಲ್ಲಿ ರೈತರು ಆಶಾಭಾವವನ್ನು ಹೊಂದಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಈ ಭಾಗದ ರೈತರು, ನೀರಾವರಿ ಹೋರಾಟಗಾರರು ಮಾಡುತ್ತಿರುವ ಹೋರಾಟಗಳಿಗೆ ನಮ್ಮನ್ನಾಳು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಈ ಜಿಲ್ಲೆಗಳ ರೈತರ ಕನಸಾಗಿರುವ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರದಿದ್ದರೆ, ಈ ಭಾಗಗಳು ಮರುಭೂಮಿಗಳಾಗಿ ಮಾರ್ಪಾಡಾಗಲು ಯಾವುದೇ ಸಂಶಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

