ಕೋಲಾರ

ಸಫಾಯಿ ಕರ್ಮಚಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯ

Published On :

ಕೆಜಿಎಫ್: ನಗರಸಭೆಗೆ 60 ಸಫಾಯಿ ಕರ್ಮಚಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ನೇತೃತ್ವವನ್ನು ಕಾವಲು ಸಮಿತಿಯ ಕೋಲಾರ ಜಿಲ್ಲಾ ಸಂಚಾಲಕಿ ಪದ್ಮ ವಹಿಸಿಕೊಂಡಿದ್ದರು.  2012ರಲ್ಲಿ ನೇಮಕ ಮಾಡಿಕೊಂಡಿದ್ದ 60 ಕಾರ್ಮಿಕರನ್ನು ಯಾವುದೇ ಕಾರಣ ನೀಡದೆ, ಮಾ.14ರಂದು ಕೆಲಸದಿಂದ ತೆಗೆದು ಹಾಕಿ, ಇನ್ನು ಮುಂದೆ ತಾವು ಗುತ್ತಿಗೆದಾರರ ಬಳಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಇದು ಕಾರ್ಮಿಕರ ಆಘಾತವನ್ನುಂಟು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲಾ ಸಂಚಾಲಕಿ ಪದ್ಮಾ ಮಾತನಾಡಿ, 'ದಿನಗೂಲಿ ನೌಕರರನ್ನು ಕಾಯಂಗೊಳಿಸುವಂತೆ ಇತ್ತೀಚೆಗೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಕೆಜಿಎಫ್ ನಗರಸಭೆ ಅಧಿಕಾರಿಗಳು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೆ, ಅವರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಹಾಲಿ ಕಾರ್ಮಿಕರನ್ನು ಬಿಟ್ಟು ಬೇರೆಯವರನ್ನು  ನೇಮಿಸಿಕೊಳ್ಳಲು ಮುಂದಾಗಿದ್ದಾರ ಎಂದು ಆರೋಪಿಸಿದರು. ದಲಿತ ಸಮಾಜ ಸೇನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ ಹಾಗೂ ಪಿಎಸ್ಐ ರಂಗಶಾಮಯ್ಯ, 'ನೀತಿಸಂಹಿತೆ ಜಾರಿಯಲ್ಲಿದೆ. ಈಗ ಯಾವುದೇ ಬೇಡಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ಹೀಗಿದ್ದಾಗ್ಯೂ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗುವುದು' ಎಂದರು.



ಸರ್ಕಾರಿ ವಾಹನಗಳ ಬ್ಯಾಟರಿಗಳಿಗೆ ಕನ್ನ
ಕೋಲಾರ: ಇಲ್ಲಿನ ನಗರಸಭೆ ಆವರಣದಲ್ಲಿ ನಿಲ್ಲಿಸಿದ್ದ ಆರು ವಾಹನಗಳ ಸುಮಾರು 50 ಸಾವಿರ ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿರುವ ಪ್ರಕರಣ ಇತ್ತೀಚೆಗೆ ನಡೆದಿದೆ.
ನಗರಸಭೆ ಆವರಣದ ಶೆಡ್ನಲ್ಲಿ ಮೂರು ವಾಹನಗಳು ಹಾಗೂ ಹೊರಗೆ ನಿಲ್ಲಿಸಿದ್ದ ಅಶೋಕ ಲೈಲ್ಯಾಂಡ್, ಕಸದ ಎರಡು ಟ್ರಾಕ್ಟರ್ ಹಾಗೂ ಯುಜಿಡಿ ಸ್ವಚ್ಛತಾ ವಾಹನ ಸೇರಿದಂತೆ ಆರು ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಈ ವಾಹನಗಳ ಕಾವಲಿಗೆ ಇಬ್ಬರು ವಾಚ್ಮನ್ಗಳಿದ್ದರೂ ಸಹ ಬ್ಯಾಟರಿಗಳು ಕಳವಾಗಿರುವ ಬಗ್ಗೆ ನಗರಸಭೆ ಅಧಿಕಾರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪೌರಾಯುಕ್ತರ ಸೂಚನೆ ಮೇರೆಗೆ ಕಳವು ಪ್ರಕರಣವನ್ನು ಗಲ್ಪೇಟೆ ಪೊಲೀಸ್ ಠಾಣೆಗೆ ದೂರಲಾಗಿದೆ. ವಾಚ್ಮನ್ಗಳಿಗೆ ನೊಟೀಸ್ ಜಾರಿ ಮಾಡಿ, ಈ ಬ್ಯಾಟರಿಗಳ ಮೌಲ್ಯದ ಹಣವನ್ನು ನಿಮ್ಮ ವೇತನದಲ್ಲಿ ಏಕೆ ಹಿಡಿಯಬಾರದು ಎಂದು ಸ್ಪಷ್ಟನೆ ಕೇಳಿದ್ದಾರೆ. ಇದೇ ರೀತಿ ನಗರದ ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಬಿಎಸ್ಎನ್ಎಲ್ ಟವರ್ನಲ್ಲಿನ ಬ್ಯಾಟರಿಯನ್ನು ಈವರೆಗೂ ಮೂರು ಬಾರಿ ಕಳವು ಮಾಡಲಾಗಿದೆ. ಒಟ್ಟಾರೆ ನಗರದಲ್ಲಿ ಬ್ಯಾಟರಿ ಕಳವುಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.