ಕೋಲಾರ

ಕೋಲಾರಮ್ಮ ಕೆರೆ ಸೇತುವೆ ರಸ್ತೆ ದುರಸ್ತಿ ಯಾವಾಗ?

Published On :

ಕೋಲಾರ: ನಗರದ ಕೋಲಾಮ್ಮ ಕೆರೆ ಕೋಡಿಯಲ್ಲಿ ಸೇತುವೆ ನಿರ್ಮಿಸಿ ಕೇವಲ ಮೂರು ವರ್ಷವಾಗಿದ್ದು ಕಳಪೆ ಕಾಮಗಾರಿಯಿಂದಾಗಿ ಸೇತುವೆಯ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.
ಹಳೆ ಮದರಾಸು -ಬೆಂಗಳೂರು ರಸ್ತೆ (ಎಂ.ಬಿ ರಸ್ತೆ)ಯಲ್ಲಿನ ಕೋಲಾರಮ್ಮ ಕೆರೆ ಕೋಡಿಯಲ್ಲಿ ನೂರಾರು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಮೇಲೆ ಲಾರಿ, ಟ್ರಕ್, ಬಸ್, ಕಾರು ಸೇರಿದಂತೆ ಹತ್ತಾರು ಬಗೆಯ ವಾಹನಗಳು ಓಡಾಡುತ್ತಿದ್ದವು. ಈ ಮಾರ್ಗ ಟಮಕಾದಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಿತ್ತು.
ಹಳೆಯದಾದ ಸೇತುವೆ ಮಧ್ಯೆ ದೊಡ್ಡ ಕಂದ ಉಂಟಾದ್ದರಿಂದ ತಜ್ಞರು ಈ ಸೇತುವೆಯಲ್ಲಿ ಬೃಹತ್ ವಾಹನಗಳು ಓಡಾಡುವುದು ಅಪಾಯಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತದೆ, ಹೊಸದಾಗಿ ಸೇತುವೆ ನಿರ್ಮಿಸುವುದು ಸೂಕ್ತವೆಂದು ಅಭಿಪ್ರಾಯ ನೀಡಿದ್ದರಿಂದ ಶಿಥಿಲಗೊಂಡಿದ್ದ ಸೇತುವೆಯ ಬದಲಿಗೆ ಹೊಸ ಸೇತುವೆ ನಿರ್ಮಾಣಕ್ಕಾಗಿ 2007ರಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಪರಿಷ್ಕೃತ ರಾಷ್ಟ್ರೀಯ ಹೆದ್ದಾರಿ-75(ಹಿಂದಿನದು ಹೆದ್ದಾರಿ-4)ಸೇರುವ 2.80 ಕಿಮೀ ರಸ್ತೆಯಲ್ಲಿ 37.95 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾರ್ಯವನ್ನು ಫೆಬ್ರವರಿಯಲ್ಲಿ ಕೈಗೆತ್ತಿಕೊಂಡಿತು.
ಗುತ್ತಿಗೆದಾರರಾಗಿದ್ದ ಮೆ. ನಾಗಾರ್ಜುನ ಕಸ್ಟ್ರಕ್ಷನ್ ಸಂಸ್ಥೆ 2007ರರ ಫೆಬ್ರವರಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಯನ್ನು 2011ರ ಏಪ್ರಿಲಲ್ತಿಂಗಳಲ್ಲಿ ಮುಗಿಸಿಕೊಟ್ಟ ನಂತರ ಸಾರ್ವಜನಿಕ ಲೋಕಾರ್ಪಣೆ ಮಾಡಲಾಯಿತು.
ಇದಾದ ನಂತರ ಹಳೆ ಸೇತುವೆಯಲ್ಲಿ ಬಸ್, ಲಾರಿ,  ಟ್ರಕ್ ಇನ್ನಿತರೆ  ಭಾರೀ ವಾಹನಗಳ ಸಂಚಾರವನ್ನು ಕೆಲ ಸಮಯ ನಿಷೇಧಿಸಲಾಗಿತ್ತು. ಆದರೆ,ಹೊಸ ಸೇತುವೆಯು ಕಳಪೆ ಕಾಮಗಾರಿಯಿಂದ ಭಾರೀ ವಾಹನಗಳ ಓಡಾಟ ನಿಲ್ಲುವಂತಾಯಿತು. ಸೇತುವೆಯನೋ ಉತ್ತಮ ರೀತಿಯಲ್ಲಿ ನಿರ್ಮಿಸಿದ್ದರೂ ರಸ್ತೆ ಕಾಮಗಾರಿ ಕಳಪೆ ಆಗಿರುವುದರಿಂದ ಅನೇಕ ಬಾರಿ ತೇಪೆ ಕೆಲಸ ನಡೆದರೂ ಸಂಚಾರಕ್ಕೆ ಉಪಯೋಗವಾಗದಂತಾಗಿದೆ.
ಕಿತ್ತು ಹೋಗಿರುವ ಕಡೆ ತೇಪೆ ಕಾರ್ಯ ಹಾಕಲು ತಿಂಗಳ ಹಿಂದೆಯೇ ರಸ್ತೆ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ರಾಶಿ ಹಾಕಲಾಗಿದೆ. ಆದರೆ ದುರಸ್ತಿ ಕಾರ್ಯ ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಇನ್ನು ಶುಭ ಮುಹೂರ್ತ ಸಿಗದಿರುವುದರಿಂದ ಹಳೇ ಸೇತುವೆ ಮೇಲೆ ಭಾರೀ ಗಾತ್ರದ ವಾಹನಗಳು ಓಡಾಡುವಂತಾಗಿರುವುದರಿಂದ ಸೇತುವೆಗೆ ಅಪಾಯ ಎದುರಾಗಿದೆ. ಕೋಲಾರಮ್ಮ ಕೆರೆ ಕೋಡಿಗೆ ನಿರ್ಮಿಸಿರುವ ಸೇತುವೆ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರು  ಈ ಮಾರ್ಗವನ್ನು ಬಳಸುತ್ತಿಲ್ಲ. ಸಣ್ಣ ಪ್ರಮಾಣದ ಕೆಲ ದ್ವಿಚಕ್ರ ವಾಹನಗಳು ಮಾತ್ರ ಓಡಾಡುತ್ತಿವೆ ಹೀಗಾಗಿ ಹೊಸದಾಗಿ ನಿರ್ಮಿಸಿರುವ ಸೇತುವೆ ರಸ್ತೆ ನಿಷ್ಪ್ರಯೋಜವಾಗಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೇತುವೆ ರಸ್ತೆಯನ್ನು ಬೇಗನೆ ದುರಸ್ತಿಗೊಳಿಸುವ ಮೂಲಕ ಮುಂದಾಗುವ ದುರಂತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.