ಕಾಮಗಾರಿ ನೆಪದಲ್ಲಿ ರಸ್ತೆ ಹಾಳು: ಜನರಿಗೆ ತೊಂದರೆ
ಚಿಂತಾಮಣಿ: ಕಾಮಗಾರಿ ನೆಪದಲ್ಲಿ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಸಾಧ್ಯವಾಗದೇ ಹಾಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತೆಗೆದಾರರ ವಿರುದ್ಧ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಆಜಾದ್ ಚೌಕ್ನಿಂದ ದೊಡ್ಡಪೇಟೆ ರಸ್ತೆಯ ರೇಲ್ವೆ ನಿಲ್ದಾಣ ಮಾರ್ಗದ ಸೀಮೆಂಟ್ ರಸ್ತೆ ಉತ್ತಮವಾಗಿದ್ದರೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜೆಸಿಬಿ ಮೂಲಕ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಸಾರ್ವಜನಿಕರಿಗೆ ಭಾರಿ ತೊಂದರೆಯಾಗಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮತ್ತು ವೃದ್ಧರಿಗೆ ಸುಗಮವಾಗಿ ಸಂಚರಿಸಲು ತೊಂದರೆಯಾಗಿದೆ.
ಕಾಮಗಾರಿ ವೇಳೆ ದೂರವಾಣಿ ಕೇಬಲ್ ಕತ್ತರಿಸಿರುವುದರಿಂದ ಈ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಹಲವು ನಾಗರಿಕರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಪೇದೆ ನೇಮಕಕ್ಕೆ ಪರೀಕ್ಷೆ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿ ಇರುವ 46 ಸಿಪಿಸಿ ಮತ್ತು 11 ಮಹಿಳಾ ಪೇದೆಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯನ್ನು ಸೋಮವಾರ ಬೆಳಗ್ಗೆ ಉರಿಗಾಂ ವ್ಯಾಪ್ತಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈಗಾಗಲೇ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿಕೊಂಡಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ಹಾಜರಾಗಿ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಗೆ ಮೊದಲದಿನವಾದ ಸೋಮವಾರ ಬೆಳಗ್ಗೆ ರಾಜ್ಯದ ವಿವಿಧ ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ಮತ್ತು ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೇಗದ ಓಟ, ಎತ್ತರದ ಜಿಗಗಿತ, ಲಾಂಗ್ ಜಂಪ್, ಎತ್ತರ ಮತ್ತು ಎದೆ ಅಳತೆ ಮುಂತಾದ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಜಿಎಫ್ ಪೊಲೀಸ್ ಇಲಾಖೆ ವತಿಯಿಂದ ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ವರದರಾಜಸ್ವಾಮಿ
ಬ್ರಹ್ಮರಥೋತ್ಸವ ಇಂದು
ಟೇಕಲ್: ಟೇಕಲ್ನಲ್ಲಿ ಇಂದು ಐತಿಹಾಸಿಕ ದೇವಾಲಯ ಶ್ರೀ ವರದರಾಜಸ್ವಾಮಿ ಬ್ರಹ್ಮರಥೋತ್ಸವ ಇಂದು 11.45ಕ್ಕೆ ನಡೆಯಲಿದೆ. ಮಾಲೂರು ತಾಲೂಕು ಮುಜುರಾಯಿ ಇಲಾಖೆ ಹಾಗೂ ಟೇಕಲ್ ಗ್ರಾಮಸ್ಥರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ರಾತ್ರಿ 12 ಗಂಟೆಗೆ ಕುಪ್ಪೂರು ಪಾಪಣ್ಣ ಹಾಗೂ ವಹ್ನಿಕುಲಸ್ಥರಿಂದ ಹೂವಿನ ಕರಗ ಮಹೋತ್ಸವ ಹಾಗೂ ಟೇಕಲ್ ಗ್ರಾಮದಲ್ಲಿ ವಿವಿಧ ದೇವತೆಗಳ ಪಲ್ಲಕ್ಕಿ ಉತ್ಸವಗಳನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಜಯಂತ್ಯುತ್ಸವ
ಬಂಗಾರಪೇಟೆ: ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಕದರೀಪುರ ಗ್ರಾಮದ ಕ್ಷೀರ ನದಿ ದಡದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದಲ್ಲಿ ನರಸಿಂಹಸ್ವಾಮಿ ಜಯಂತ್ಯುತ್ಸವ ನೆರವೇರಿತು.ಉತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ದೇವರಿಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಸಹಸ್ರ ಪುಷ್ಪಾರ್ಚನೆ, ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಬೆಂಗಳೂರು ಹಾಗೂ ಇತರೆ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ರಾತ್ರಿ 9ಕ್ಕೆ ಜಮುನಾ ಭಾಗವತಾರಾಣಿ ಅವರಿಂದ ಹರಿಕಥಾ ಕಾಲಕ್ಷೇಪ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ವಿಶೇಷ ಬಾಣವೇದಿಕೆ, ಲಕ್ಷ್ಮೀನರಸಿಂಹ ಸ್ವಾಮಿ ಪುಷ್ಪಪಲ್ಲಕ್ಕಿ ಉತ್ಸವ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

