ಕುಡಿವ ನೀರಿನ ಸಮಸ್ಯೆ ನೀಗಲು ತುರ್ತು ಕ್ರಮ ಕೈಗೊಳ್ಳಿ
ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಹಾಹಾಕಾರ ತಪ್ಪಿಸುವ ಸಲುವಾಗಿ ಸಮರೋಪಾದಿಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಪ್ರಸ್ತುತ ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಗಳು ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆಯನ್ನು ನಡೆಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ಕೊಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಪ್ರಮುಖ ಸಮಸ್ಯೆಯಾಗಿದೆ. ಕೇವಲ ಕಡತಗಳಲ್ಲಿ ಅಂಕಿ ಅಂಶಗಳನ್ನು ತೋರಿಸಿ ಸಭೆಗಳಲ್ಲಿ ಅನುದಾನದ ಖರ್ಚಿನ ಬಗ್ಗೆ ಮಾಹಿತಿ ನೀಡುವುದಲ್ಲ. ಗ್ರಾಮಗಳಿಗೆ ತೆರಳಿ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು. ಸಮಸ್ಯೆ ಬಗೆಹರಿಯದಿದ್ದರೆ ಪ್ರತಿನಿತ್ಯ ತಮಗೆ ದೂರುಗಳು ಬರುತ್ತಿರುತ್ತವೆ. ದೂರುಗಳು ಹೆಚ್ಚಿಗೆ ಕೇಳಿ ಬರುತ್ತಿವೆ ಎಂದರೆ ಅಧಿಕಾರಿಗಳ ಕಾರ್ಯವೈಖರಿ ಸಮರ್ಪಕವಾಗಿಲ್ಲ ಎನ್ನುವುದರ ಅರ್ಥವಾಗಿರುತ್ತದೆ ಎಂದರು. ಜಿ.ಪಂ. ಸಿಇಓ ನೀಲಾ ಮಂಜುನಾಥ್ ಮಾತನಾಡಿ, ಜಿ.ಪಂ.ಗೆ 79 ಕೋಟಿ ಅನುದಾನ ಬಂದಿದ್ದು ಇದರಲ್ಲಿ 71 ಕೋಟಿ ಖರ್ಚಾಗಿ ಒಟ್ಟು ಶೇ.92 ರಷ್ಟು ಸಾಧನೆಯಾಗಿದೆ. ಇನ್ನೂ ಅನೇಕ ಇಲಾಖೆಗಳು ಶೇ.100 ರಷ್ಟು ಸಾಧನೆ ಮಾಡಿದೆ. ಸಹಕಾರ, ಪಶುಸಂಗೋಪನೆ, ಶಿಕ್ಷಣ, ಜವಳಿ, ಅರಣ್ಯ, ಕೃಷಿ ಇನ್ನು ಕೆಲವು ಇಲಾಖೆಗಳು ಶೇ.97 ರಷ್ಟು ಸಾಧನೆ ಮಾಡಿವೆ. ಬರದ ಪ್ರಭಾವದಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯು ಉತ್ತಮ ಕಾರ್ಯ ನಿರ್ವಹಣೆಗೆ ತೊಡಕಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಾನ್ವಿತೆಗೆ ಸನ್ಮಾನ
ಎಸ್ಎಸ್ಎಲ್ಸಿಯಲ್ಲಿ 7 ನೇ ರ್ಯಾಂಕ್ ಪಡೆದ ಚಿಂತಾಮಣಿ ತಾಲೂಕಿನ ಗಡಿಗವಾರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ವಿ. ಶೃತಿ ಅವರನ್ನು ಸಭೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿರುವ ಶೃತಿ ಕನ್ನಡದಲ್ಲಿ 124, ಇಂಗ್ಲೀಷ್ 94, ಹಿಂದಿ 97, ಗಣಿತ 99, ವಿಜ್ಞಾನ 97 ಮತ್ತು ಸಮಾಜ 100 ಅಂಕ ಸೇರಿದಂತೆ ಒಟ್ಟು 611 ಅಂಕಗಳನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಡೆದುಕೊಳ್ಳುವ ಮೂಲಕ 7ನೇ ರ್ಯಾಂಕ್ ಗಳಿಸಿ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

