ಕೋಲಾರ

ಪ್ರತ್ಯೇಕ ಕೈಗಾರಿಕಾ ನೀತಿಗೆ ಒತ್ತಾಯ

Published On :

ಕೋಲಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕೈಗಾರಿಕೋದ್ಯಮಿಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸುವ ಮೂಲಕ ಶಾಶ್ವತ ಆಸ್ತಿ ಕ್ರೋಢಿಕರಣ ಮತ್ತು ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಬೇಕೆಂದು ರಾಜ್ಯ ಎಸ್ಸಿ-ಎಸ್ಟಿ ವರ್ಗದ ಉದ್ಯಮ ಶೀಲರು ಹಾಗೂ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಸಿ.ಜಿ. ಶ್ರೀನಿವಾಸನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 6 ವರ್ಷಗಳಲ್ಲಿ ಸರ್ಕಾರದಿಂದ ಸಹಾಯ ಧನ ಮಂಜೂರಾದ ಒಟ್ಟು ಘಟಕಗಳನ್ನು ಪರಿಗಣಿಸಿದರೆ ಎಸ್ಸಿಗೆ ಶೇ.2.90ರಷ್ಟು, ಎಸ್ಟಿಗೆ ಶೇ.0.7ರಷ್ಟು ಮಾತ್ರ ಉದ್ಯಮಗಳು ಪ್ರಾರಂಭಿಸುವುದು ಕಂಡು ಬಂದಿರುವುದರಿಂದ ಸರ್ಕಾರ ಪ್ರತ್ಯೇಕ ಕೈಗಾರಿಕೆ ನೀತಿ ಜಾರಿಯ ಮೂಲಕ ದಲಿತ ಸಮುದಾಯಕ್ಕೆ ಸಹಾಯ ಮಾಡಬೇಕೆಂದರು.
ಬಂಡವಾಳ ಹೂಡಿಕೆಗೆ ಉತ್ತೇಜನ, ಎಲ್ಲಾ ವಲಯಕ್ಕೆ ಶೇ.100 ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ಶೇ.100 ರಿಯಾಯಿತಿ ನೀಡಬೇಕು, ನೆರೆ ರಾಜ್ಯಗಳಲ್ಲಿನ ರೀತಿಯಲ್ಲಿ ಪ್ರವೇಶ ಶುಲ್ಕ ರಿಯಾಯಿತಿ ನೀಡಿ ಎಸ್ಸಿ,ಎಸ್ಟಿ ಗಳು ಉದ್ದಿಮೆಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕೆಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ದಿಮೆದಾರರು ಕೆಐಎಡಿಬಿ ಮತ್ತು ಕೆಸ್‌ಎಸ್‌ಐಡಿಸಿ ನಿಗಮ ನಿಗದಿಪಡಿಸುವ ನಿವೇಶನದ ದುಬಾರಿ ಬೆಲೆಯನ್ನು ಭರಿಸಲು ಶಕ್ತರಲ್ಲದ ಕಾರಣ ಶೇ.50ರ ರಿಯಾಯಿತಿ ದರದಲ್ಲಿ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡಬೇಕು, ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಭಿವೃದ್ಧಿ ಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ಉದ್ದಿಮೆದಾರರಿಗೆ ಶೇ.22ಯ65ರಷ್ಟು ಮಳಿಗೆ, ನಿವೇಶನಗಳನ್ನು ಕಡ್‌ಡಾಯವಾಗಿ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ಸಾಲಕ್ಕೆ ಮನವಿ: ಉದ್ದಿಮೆ, ಕೈಗಾರಿಕೆ ಇತ್ಯಾದಿ ಚಟುವಟಿಕೆಗಳಿಗೆ ಶೇ.4 ಬಡ್ಡಿ ದರದಲ್ಲಿ 2 ಕೋಟಿ ರು.ವರೆಗೆ ಕೆಎಸ್‌ಎಫ್ಸಿಯಲ್ಲಿ ಸಾಲ ಪಡೆಯಬಹುದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದಲೂ ಈ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕೈಗಾರಿಕೋದ್ಯಮಿಗಳಿಗೆ, ಖಾಲಿ ಉಳಿದಿರುವ ನಿವೇಶನ, ಮಳಿಗೆಗಳನ್ನು ಬ್ಯಾಕ್‌ಲಾಗ್ ಹಂಚಿಕೆಯನ್ನಾಗಿ ವಿತರಣೆ ಮಾಡಬೇಕು, ಮುಂದಿನ ಮೂರು ವರ್ಷಗಳವರೆಗಾದರೂ ಹಳೆಯ ಕೈಗಾರಿಕಾ ಪ್ರದೇಶ, ವಸಹಾತುಗಳಲ್ಲಿ ಉಳಿದಿರುವ ಖಾಲಿ ಇರುವ ನಿವೇಶನ, ಮಳಿಗೆಗಳನ್ನು ಎಸ್ಸಿ,ಎಸ್ಟಿಗೆ ಮೀಸಲಿರಿಸುವ ಮೂಲಕ ಎಸ್ಸಿ-ಎಸ್ಟಿ ಸಮುದಾಯ ಕೈಗಾರಿಕೆಗಳ ಸ್ಥಾಪನೆಗೆ ಮಂದಾಗುವಂತೆ ಕೈಗಾರಿಕಾ ನೀತಿಯಲ್ಲಿ ಅವಕಾಶ ಕಲ್ಪಿಸಬೇಕೆಂದರು.
ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳು ಮತ್ತು ಬಾರ್ ಅಂಡೆ ರೆಸ್ಟೊರೆಂಟ್ ಸನ್ನದುಗಳನ್ನು ನೀಡುವಾಗ ಎಸ್ಸಿ,ಎಸ್ಟಿಗಳಿಗೆ ಮೀಸಲು ನೀಡಬೇಕು ಎಂದು ಒತ್ತಾಯಿಸಿದರಲ್ಲದೆ, ಕೆಎಸ್‌ಎಸ್‌ಐಡಿಸಿ,ಕೆಐಎಡಿಸಿ ಮತ್ತು ಕೆಎಸ್‌ಎಫ್ಸಿ ಮಂಡಳಿಗಳಲ್ಲಿ ಎಸ್ಸಿ-ಎಸ್ಟಿ ಉದ್ದಿಮೆದಾರರ ಸಂಘದ ಪದಾಧಿಕಾರಿಗಳನ್ನು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಆಯುಕ್ತರನ್ನು ನೇಮಿಸುವಂತೆ ಕೋರಿದರು.
ವೆಂಚರ್‌ಕ್ಯಾಪಿಟಲ್ ಯೋಜನೆ ಅಡಿಯಲ್ಲಿ ಧನ ಸಹಾಯ 200 ಕೋಟಿ ಮಂಜೂರು ಮಾಡಬೇಕು, ವಿಜ್ಹನ್ ಗ್ರೂಪ್ ಸಂಘದ ಸದಸ್ಯರೊಬ್ಬರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಬಾಲಸುಬ್ರಮಣ್ಯಂ, ಕಾರ್ಯಕಾರಿ ಸಮಿತಿಯ ನಿರ್ದೇಶಕ ಶ್ರೀನಿವಾಸಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.