ಗೌಡರ ಗದ್ದಲದಲ್ಲಿ ಗೆದ್ದ ಮೊಯ್ಲಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಮೇ 16
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ನ ಭದ್ರಕೋಟೆ ಎನಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವಿನ ಸನಿಹಕ್ಕೆ ಬಂದು ಸೋಲನ್ನಪ್ಪಿದರೂ ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡಿದೆ. ಆದರೆ, ಕ್ಷೇತ್ರದಲ್ಲಿ ಹೆಚ್ಚಿಗೆ ಪ್ರಚಾರ ಕೈಗೊಳ್ಳದಿದ್ದರೂ ಕ್ಷೇತ್ರದ ಜನರು ತಮ್ಮನ್ನೇ ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಲನ್ನಪ್ಪಿ ಮುಖಭಂಗ ಅನುಭವಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ ಸಮೀಪವಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಮೊದಲಿಗೆ ಅಂಚೆ ಮತ ಎಣಿಕೆಗೆ ಮುಂದಾದರೂ ಸಹ ಅಭ್ಯರ್ಥಿಗಳು ಗಳಿಸಿದ ಒಟ್ಟಾರೆ ಅಂಚೆ ಮತಗಳು ಸಂಜೆಯಾದರೂ ತಿಳಿದು ಬರಲಿಲ್ಲ.
ಇನ್ನೂ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಪ್ರತಿ ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಮೊದಲಿಗೆ ಸಾವಿರ ಮತಗಳ ಅಂತರ, ಆ ನಂತರ 5 ಸಾವಿರ ಮತಗಳಿಂದ 18 ಸಾವಿರ ಮತಗಳನ್ನು ಅಂತರದಲ್ಲಿ ಮುನ್ನಡೆಯಲ್ಲಿದ್ದರು. ಆದರೆ, 28 ಸುತ್ತಿನ ಹಂತದಲ್ಲಿ ಮತಗಳ ಅಂತರ ಒಂದು ಸಾವಿರಕ್ಕೆ ಕುಸಿದು ವಿಜಯಲಕ್ಷ್ಮೀ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕಡೆಗೆ ಅತ್ತ ಇತ್ತ ವಾಲುತ್ತಿದ್ದಂತೆ ಕುತೂಹಲ ಹೆಚ್ಚಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಕೆಲ ಸಮಯ ತಳಮಳಕ್ಕೆ ಗುರಿಯಾದರು. ಅಂತಿಮವಾಗಿ ವೀರಪ್ಪ ಮೊಯ್ಲಿ 424491 ಮತಗಳನ್ನು ಮತ್ತು ಬಿ.ಎನ್. ಬಚ್ಚೇಗೌಡ 414254 ಮತಗಳನ್ನು ಪಡೆದಿದ್ದು 10237 ಮತಗಳ ಅಂತರದಲ್ಲಿ ಮೊಯ್ಲಿ ಗೆಲುವಿನ ನಗೆ ಬೀರಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 345882 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಉಳಿದಂತೆ ಸಿಪಿಐ(ಎಂ) ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ 26052 ಮತಗಳನ್ನು ಮತ್ತು ಎಎಪಿ ಅಭ್ಯರ್ಥಿ ಆರ್ಕೇಶ್ 26052 ಮತಗಳನ್ನು ಪಡೆದುಕೊಂಡಿದ್ದು ಆಮ್ ಆದ್ಮಿ ಪಾರ್ಟಿ ಪ್ರಭಾವ ಏನೂ ಕೆಲಸ ಮಾಡಿಲ್ಲ. ಉಳಿದಂತೆ ಇತರೆ ಪಕ್ಷಗಳು 2 ಸಾವಿರ ಮತಗಡಿಯನ್ನು ದಾಟಿಲ್ಲ.
ಕೈ ಹಿಡಿದ ಮತಪ್ರಭು: ಚುನಾವಣೆಗೆ ಪೂರ್ವದಲ್ಲಿ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೆಲ ಕಚ್ಚುವುದು ಖಚಿತ ಎಂಬ ಮಾತು ಕೇಳಿ ಬಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೆಲುವನ್ನು ಸಾಧಿಸುತ್ತಾರೆ ಎಂದೇಳಲಾಗಿತ್ತು. ಈ ನಡುವೆ ನರೇಂದ್ರ ಮೋದಿ ಕ್ಷೇತ್ರಕ್ಕೆ ಬಂದು ಪ್ರಚಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಚ್ಚೇಗೌಡ ತೀವ್ರ ಪೈಪೋಟಿ ನೀಡಲಿದ್ದಾರೆ ಎಂದು ಲೆಕ್ಕಾಚಾರ ಹಾಕಿದ್ದು ಅದರಂತೆ ಬಚ್ಚೇಗೌಡ ಕಾಂಗ್ರೆಸ್ ಪಾಳೆಯಕ್ಕೆ ಕೆಲ ಸಮಯ ಸೋಲಿನ ಚಿಂತೆ ಕಾಡುವಂತೆ ಮಾಡಿದರು. ಆದರೆ, ಕೊನೆಗೆ ಮತದಾರ ಪ್ರಭುಗಳು ಮೊಯ್ಲಿ ಕೈ ಹಿಡಿದು ಎರಡನೇ ಬಾರಿ ಕ್ಷೇತ್ರದಲ್ಲಿ ಸಂಸದರನ್ನಾಗಿ ಆಯ್ಕೆ ಮಾಡಿಕೊಂಡರು. ಕಳೆದ 2009 ರ ಲೋಕಸಭಾ ಚುನಾವಣೆಯಲ್ಲಿ ಮೊಯ್ಲಿ 50 ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದು ಈ ಬಾರಿ 10 ಸಾವಿರ ಮತಗಳ ಕಡಿಮೆ ಅಂತರದಲ್ಲಿ ಗೆಲುವನ್ನು ಕಂಡಿದ್ದಾರೆ. ದೊಡ್ಡಬಳ್ಳಾಪುರ, ಹೊಸಕೋಟೆ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಬಾಗೇಪಲ್ಲಿ, ಗೌರಿಬಿದನೂರು, ನೆಲಮಂಗಲ, ದೇವನಹಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚಿನ ಮತವನ್ನು ಗಳಿಸಿವೆ.
ನೋಟಾ ಹೆಚ್ಚಳ
ಇದೇ ಮೊದಲ ಬಾರಿಗೆ ಕಣದಲ್ಲಿರುವ ಅಭ್ಯರ್ಥಿ ಆಯ್ಕೆಗೆ ಇಷ್ಟವಿದಿದ್ದಲ್ಲಿ ನೋಟಾ(ನನ್ ಆಫ್ ಅದಿ ಎಬೋವ್) ಬಟನ್ ಒತ್ತುವ ಅವಕಾಶವನ್ನು ನೀಡಿದ್ದು ಕ್ಷೇತ್ರದಲ್ಲಿ 7676 ಮತದಾರರು ಯಾವುದೇ ಅಭ್ಯರ್ಥಿಯ ಆಯ್ಕೆಗೆ ಒಲವನ್ನೇ ವ್ಯಕ್ತಪಡಿಸಿಲ್ಲ. ಒಟ್ಟು 16,58,829 ಮತದಾರರಲ್ಲಿ 12,55,592 ಮತದಾರರು ಮತವನ್ನು (ಶೇ.77.02 ರಷ್ಟು) ಚಲಾಯಿಸಿದ್ದು 637 ಮತಗಳು ತಿರಸ್ಕೃತಗೊಂಡಿವೆ. ಅದರಲ್ಲೂ ಅಂಚೆ ಮತಗಳಲ್ಲಿ ಹೆಚ್ಚು ಮತಗಳು ತಿರಸ್ಕೃತಗೊಂಡಿರುವುದು ದುರದೃಷ್ಟರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

