ಮುನಿಯಪ್ಪ ಗೆಲವಿನ ಮೆರವಣಿಗೆ
ಪಾ.ಶ್ರೀ. ಅನಂತರಾಮ್
ಕೋಲಾರ: ಈ ಬಾರಿ ಕೆ.ಎಚ್. ಮುನಿಯಪ್ಪ ಸಂಸತ್ ಪ್ರವೇಶ ಮಾಡುವುದನ್ನು ತಪ್ಪಿಸಲು ವಿರೋಧ ಪಕ್ಷಗಳು ಮಾತ್ರವಲ್ಲ ಸ್ವಪಕ್ಷೀಯರೂ ಚಕ್ರವೂಹ್ಯ ರಚಿಸಿದ್ದರಾದರೂ ತಮ್ಮ ರಾಜಕೀಯ ಚಾಣಾಕ್ಷತದಿಂದ ಗೆದ್ದು ಹೊರ ಬರುವಲ್ಲಿ ಸಫಲರಾಗಿದ್ದಾರೆ.
1991ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಲೋಕಸಭೆಗೆ ಸ್ಪರ್ಧಿಸಿ 2,35,009 ಮತಗಳನ್ನು ಪಡೆದಿದ್ದ ಕೆ.ಎಚ್. ಮುನಿಯಪ್ಪ, 1996ರಲ್ಲಿ 3,10,349, 1998ರಲ್ಲಿ 3,03,261, 1999ರಲ್ಲಿ 3,21,964,2004ರಲ್ಲಿ 3,85,582,2009ರಲ್ಲಿ 3,44,471 ಮತಗಳನ್ನು ಪಡೆದು ಡಬಲ್ಹ್ಯಾಟ್ರಿಕ್ ಗೆಲುವಿನ ಸರದಾರನಾಗಿದ್ದರು.
2014ರ ಚುನಾವಣೆಯಲ್ಲಿ 4,18,926 ಮತಗಳನ್ನು ಪಡೆದು 47,850 ಮತಗಳ ಅಂತರದಿಂದ ಮತ್ತೆ ಸಂಸತ್ ಪ್ರವೇಶಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಮುನಿಯಪ್ಪನವರಿಗೆ ಹೀನಾಯ ಹಿನ್ನಡೆ ಉಂಟು ಮಾಡುವ ಮೂಲಕ ವಿಶ್ರಾಂತಿ ನೀಡಬೇಕೆಂದು ಮಾಜಿ ಶಾಸಕ ಡಾ. ಸುಧಾಕರರೆಡ್ಡಿ ಪ್ರತಿಜ್ಞೆ ಮಾಡಿದ್ದರು.
ರಾಜಕೀಯ ಕಾರಣಗಳಿಂದಾಗಿ ಮಾಜಿ ಸಚಿವ ವಿ. ಮುನಿಯಪ್ಪ ಸಹ ಕೆ.ಎಚ್. ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದರಿಂದ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಸಿಕ್ಕಿರಲಿಲ್ಲ.
ಜೆಡಿಎಸ್ ಮುಖಂಡರು ಈ ಬಾರಿ ಮುನಿಯಪ್ಪನವರನ್ನು ಮಣಿಸಲು ಆರ್ಥಿಕವಾಗಿ ಸದೃಢರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಕೆ. ಕೇಶವ ಅವರನ್ನು ಕ್ಷೇತ್ರಕ್ಕೆ ಕರೆತಂದಿದ್ದರು. ಮಾಲೂರು, ಚಿಂತಾಮಣಿ, ಶಿಡ್ಲಘಟ್ಟದ ಜೆಡಿಎಸ್ ಶಾಸಕರು ಕೇಶವ ಅವರ ಗೆಲುವಿಗೆ ಹೋರಾಟ ಮಾಡಿದ್ದರು. ಕೋಲಾರದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಕೈಕೊಡುವ ಸೂಚನೆ ಅರಿತ ಮುನಿಯಪ್ಪ ಡ್ಯಾಮೇಜ್ ಕಂಟ್ರೋಲ್ಗೆ ಶಾಸಕ ವರ್ತೂರ್ ಪ್ರಕಾಶ್ ಬೆಂಬಲ ಪಡೆದಿದ್ದರು. ಕೆಜಿಎಫ್ನಲ್ಲಿ ಕಾಂಗ್ರೆಸ್ ಮುಖಂಡರು ವೈಯುಕ್ತಿಕ ಕಾರಣಗಳಿಂದಾಗಿ ತಿರುಗಿ ಬಿದ್ದಿದ್ದರಿಂದ ಮುನಿಯಪ್ಪ ತಮ್ಮ ಮಗಳು ರೂಪಗೆ ಕೆಜಿಎಫ್ ಕ್ಷೇತ್ರದ ಉಸ್ತುವಾರಿ ವಹಿಸಿ ಉಳಿದ ಕಡೆ ಗಮನ ನೀಡಿದ್ದರು.
ಅಲ್ಪಸಂಖ್ಯಾತರು, ಮೋದಿ ಅಲೆಗೆ ಸಿಕ್ಕ ಯುವಕರು ಹಾಗೂ ಒಬಿಸಿಗಳು ಕೈಕೊಡಬಹುದೆಂದು ಊಹಿಸಿದ ಮುನಿಯಪ್ಪನವರು ಬಲ ಗೈ ಜನಾಂಗದ ಮತಗಳಿಕೆಗೆ ಗಾಳ ಬೀಸಿದ್ದರು. ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆಯಲ್ಲಿ ಹೆಚ್ಚಿನ ಮತ ಗಳಿಕೆ ಮಾಡುವ ಮೂಲಕ ಜೆಡಿಎಸ್ ತಂತ್ರ ಹಾಗೂ ತಮ್ಮ ಗೆಲುವಿಗೆ ಅಡ್ಡಿಯಾಗಿದ್ದ ಸ್ವಪಕ್ಷೀಯರ ಲೆಕ್ಕಾಚಾರ ತಲೆಕೆಳಕು ಮಾಡಲು ರೂಪಿಸಿದ ತಂತ್ರಗಾರಿಕೆ ಫಲಿಸಿರುವುದರಿಂದ ಕಳೆದ ಬಾರಿಗಿಂತ 22,524 ಮತಗಳು ಹೆಚ್ಚು ಗಳಿಸಿ ಕೋಲಾರ ಮುನಿಯಪ್ಪ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಚಿಂತಾಮಣಿಯಲ್ಲಿ ಜೆಡಿಎಸ್ 81,961 ಮತಗಳನ್ನು ಪಡೆದರೆ ಕಾಂಗ್ರೆಸ್ 47,366 ಮತಗಳನ್ನು ಪಡೆದು 34,595 ಮತಗಳಿಂದ ಹಿನ್ನಡೆ ಅನುಭವಿಸಿದ್ದರು. ಇದೇ ರೀತಿ ಶಿಡ್ಲಘಟ್ಟದಲ್ಲಿ ಜೆಡಿಎಸ್ 61,644 ಮತಗಳನ್ನು ಕಾಂಗ್ರೆಸ್ 57,365 ಮತಗಳು ಪಡೆದಿದ್ದು ಮುನಿಯಪ್ಪನವರಿಗೆ 4,279 ಮತಗಳು ಕಡಿಮೆಯಾಗಿದೆ. ಇನ್ನುಳಿದಂತೆ ಮುಳಬಾಗಿಲಿನಲ್ಲಿ 10,494, ಕೆಜಿಎಫ್ನಲ್ಲಿ 16,750, ಕೋಲಾರದಲ್ಲಿ 3,568, ಮಾಲೂರಿನಲ್ಲಿ 15,187 ಮತಗಳು ಜೆಡಿಎಸ್ನ ಕೇಶವ ಅವರಿಗಿಂತ ಹೆಚ್ಚು ಸಿಕ್ಕಿರುವ ಮೂಲಕ ಜಯಭೇರಿ ಸಾಧಿಸಿದ್ದಾರೆ. ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದಿದ್ದರೂ ಮುನಿಯಪ್ಪ ಮುಳಬಾಗಿಲು, ಮಾಲೂರಿನಲ್ಲಿ ಸಿಕ್ಕ ಲೀಡ್ನಿಂದಾಗಿ ಸಂಸತ್ ಪ್ರವೇಶ ಸುಲಭವಾಗಿದೆ. ಮುಳಬಾಗಿಲು ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಸೇರಿ ಪಕ್ಷಕ್ಕೆ ನ್ಯಾಯ ಒದಗಿಸಿದ್ದಾರೆ. ಇದೇ ರೀತಿ ಮಾಲೂರಿನ ಮಾಜಿ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಮುನಿಯಪ್ಪನವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಬಂಗಾರಪೇಟೆಯಲ್ಲಿ ಮತಗಳು ಕಡಿಮೆ ಆಗಿರುವುದಕ್ಕೆ ಕಾಂಗ್ರೆಸ್ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ರಚನೆ ಆಗುತ್ತಿದ್ದು ಮುನಿಯಪ್ಪ ಕೋಲಾರದಿಂದ ಗೆದ್ದರು ಕೇವಲ ಸಂಸದರಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಆಡಳಿತ ಪಕ್ಷದ ಜೊತೆ ಹೋರಾಡಬೇಕಾಗಿರುವುದರಿಂದ ಯಾವ ರೀತಿ ತಮ್ಮ ಪ್ರಭಾವ ಬೀರುತ್ತಾರೆಂಬುದು ನೋಡಬೇಕಾಗಿದೆ.
ಎಲ್ಲೆಡೆ ಕಟ್ಟೆಚ್ಚರ
ಮತ ಎಣಿಕೆ ಹಿನ್ನೆಲೆಯಲ್ಲಿ ಕೋಲಾರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಸಂಚಾರಿ ಗಸ್ತು ಹೆಚ್ಚಿಸಲಾಗಿತ್ತು. ಎಣಿಕೆ ಕೇಂದ್ರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರಲು ಉರಿ ಬಿಸಿಲು ಅಡ್ಡಿಯಾಗಿತ್ತು. ಚುನಾವಣಾ ಫಲಿತಾಂಶ ಅಧಿಕೃತ ಪ್ರಕಟಣೆಗೆ ಮುಂಚೆಯೇ ಜನರ ಖಾಲಿ ಆಗಿದ್ದರು.
ಜೆಡಿಎಸ್ ಅಭ್ಯರ್ಥಿ ಕೇಶವ ಗೈರು
ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಮತ ಎಣಿಕೆ ಕೇಂದ್ರದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್ಸಿನ ಮುನಿಯಪ್ಪ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಜೆಡಿಸ್ನಿಂದ ನಿಯೋಜನೆಗೊಂಡಿದ್ದ ಏಜೆಂಟರು ಹಾಗೂ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಿಂದ ಎದ್ದು ಹೋದರು. ಬಿಜೆಪಿಯ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ ಎಣಿಕೆ ಆರಂಭಕ್ಕೆ ಮುನ್ನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಕಡೆಯ ಏಜೆಂಟರಿಗೆ ಸೂಕ್ತವಾದ ಸಲಹೆ ಸೂಚನೆ ನೀಡಿ ಕೆಲ ಹೊತ್ತು ಕೇಂದ್ರದಲ್ಲಿ ಇದ್ದು ನಂತರ ನಿರ್ಗಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

