ಕೋಲಾರ

ಪವನ್ ಪ್ರಚಾರ ವ್ಯರ್ಥ

Published On :

ಕೋಲಾರ: ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬ ಖ್ಯಾತ ಚಿತ್ರನಟ ಪವನ್ ಕಲ್ಯಾಣ್ ಆಸೆ ಈಡೇರಿದೆಯಾದರೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರ ನಡೆಸಿದ ಭರ್ಜರಿ ಪ್ರಚಾರ ಮತಗಳಾಗಿ ಪರಿವರ್ತನೆಗೊಳ್ಳದೆ ವ್ಯರ್ಥವಾಗಿದೆ.
ಮೆಗಾ ಸ್ಟಾರ್ ಚಿರಂಜೀವಿಯವರ ಸಹೋದರ ಪವನ್ ಕಲ್ಯಾಣ್ ಏ.15ರಂದು ಕೋಲಾರದಲ್ಲಿ ಬಿಜೆಪಿಯ ಎಂ.ನಾರಾಯಣಸ್ವಾಮಿ ಪರ ಪ್ರಚಾರ ಮಾಡಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಇದೇ ರೀತಿ ರಾಯಚೂರಿನಲ್ಲಿ ಬಿಜೆಪಿಯ ಶಿವನಗೌಡ ಕೆ.ನಾಯಕ ಪರವಾಗಿಯೂ ಪವನ್ ಕಲ್ಯಾಣ್ ಪ್ರಚಾರ ಮಾಡಿದ್ದರಾದರೂ ಅಲ್ಲೂ ಮತಗಳ ಪರಿವರ್ತನೆ ವ್ಯರ್ಥವಾಗಿದೆ. ಕರ್ನಾಟಕದ ಎರಡೂ ಕಡೆ ಮಾತ್ರವಲ್ಲದೆ ಸೀಮಾಂಧ್ರದಲ್ಲೂ ಪವನ್ ಕಲ್ಯಾಣ್ ನರೇಂದ್ರ ಮೋದಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಜೊತೆ ಎನ್‌ಡಿಎ ಪರ ಪ್ರಚಾರ ಮಾಡಿದ್ದರು, ಟಿಡಿಪಿಗೆ ಇದರಿಂದ ಅನುಕೂಲವಾಗಿದ್ದರೆ, ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಾಗಿಲ್ಲ.


ತೊಡೆ ತಟ್ಟಿ ಕೆಟ್ಟ ಮಾಜಿ ಶಾಸಕ ಸುಧಾಕರ್


ಕೋಲಾರ: ಹೇಗಾದರೂ ಮಾಡಿ ಕೆ.ಎಚ್. ಮುನಿಯಪರನ್ನು ಸೋಲಿಸಲೇಬೇಕೆಂದು ಪಣತೊಟ್ಟು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದ ಚಿಂತಾಮಣಿಯ ಮಾಜಿ ಶಾಸಕ ಡಾ. ಸುಧಾಕರರೆಡ್ಡಿ ಹೋರಾಟ ಫಲಿಸಿಲ್ಲ.
ಚಿಂತಾಮಣಿಯಲ್ಲಿ ಜೆಡಿಎಸ್‌ಗೆ ಕನಿಷ್ಠ 60ರಿಂದ 70 ಸಾವಿರ ಲೀಡ್ ಸಿಗುವಂತೆ ಮಾಡಿದಲ್ಲಿ ಮುನಿಯಪ್ಪ ಹೀನಾಯವಾಗಿ ಸೋಲುತ್ತಾರೆಂಬುದು  ಸುಧಾಕರರೆಡ್ಡಿ ಲೆಕ್ಕಾಚಾರ ಹಾಕಿದ್ದರು. ಶಿಡ್ಲಘಟ್ಟದಲ್ಲೂ ಜೆಡಿಎಸ್‌ಗೆ ಹೆಚ್ಚಿನ ಮತಗಳು ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಮಾಲೂರಲ್ಲಿ ಶಾಸಕ ಕೋಡಿಹಳ್ಳಿ ಮಂಜುನಾಥಗೌಡರ ಪ್ರಚಾರ ಕಾರ್ಯ ನೋಡಿ ಮುನಿಯಪ್ಪಗೆ ಹಿನ್ನಡೆ ಖಚಿತವೆಂದು ಭಾವಿಸಿದ್ದರು. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುನಿಯಪ್ಪ ವಿರುದ್ಧ ತೊಡೆ ತಟ್ಟಿ ಸೋಲಿಸುವುದಾಗಿ ಸವಾಲು ಹಾಕಿದ್ದರು. ಮುನಿಯಪ್ಪನವರ ಚದುರಂಗದ ಆಟದಲ್ಲಿ ಸುಧಾಕರರೆಡ್ಡಿ ಹೋರಾಟಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.