ಕೋಲಾರ

ವೈದ್ಯರು, ಸಿಬ್ಬಂದಿ ವಿರುದ್ಧ ಸಂಘಟನೆಗಳ ಆಕ್ರೋಶ

Published On :

ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ಮೇ 21
ಹೆಚ್‌ಐವಿ ಸೋಂಕಿಗೆ ಗುರಿಯಾದ ಮಹಿಳೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರೂಷಕಿಯರು ಸರಿಯಾಗಿ ಆರೈಕೆ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂಭಾಗ ಹೆಚ್‌ಐವಿ ಸೋಂಕಿಗೆ ಗುರಿಯಾದ ಮಹಿಳೆ ಮೃತದೇಹವನ್ನಿಟ್ಟು ಧಿಕ್ಕಾರಗಳನ್ನು ಕೂಗಿ ವೈದ್ಯರು ಮತ್ತು ಶುಶ್ರೂಷಕಿಯರ ವಿರುದ್ಧ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವು.
ಕಳೆದ ಮೇ 16 ರಂದು ಸಾವಿತ್ರಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಅಸ್ವಸ್ಥಳಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ವೈದ್ಯರು ಹೆಚ್‌ಐವಿ ಸೋಂಕಿಗೆ ಗುರಿಯಾದ ಮಹಿಳೆ ಎಂಬ ಭಾವನೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡಲಿಲ್ಲ. ಆಸ್ಪತ್ರೆಯಲ್ಲಿ ಆಕೆಯ ಪಾಡಿಗೆ ಆಕೆಯನ್ನು ಬಿಟ್ಟಿದ್ದು ಸಾವಿತ್ರಿ ಕೊನೆಗೆ ಮೇ 20 ರಂದು ಮೃತಪಟ್ಟಿದ್ದಾಳೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡುವುದು, 10 ಹಾಸಿಗೆಗಳುಳ್ಳ ಪ್ರತ್ಯೆಕ ಕೊಠಡಿಗಳನ್ನು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು. ಜಿಲ್ಲೆಯಲ್ಲಿ ಸಮುದಾಯ ಆರೈಕೆ ಕೇಂದ್ರವನ್ನು ಸ್ಥಾಪಿಸುವುದು ಎಂದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಯಿತು. ದಿಢೀರ್ ಪ್ರತಿಭಟನೆಯಿಂದ ಘಟನೆ ಸ್ಥಳಕ್ಕೆ ಆರಕ್ಷಕ ನಿರೀಕ್ಷಕ ಶಿವಸ್ವಾಮಿ ಮತ್ತು ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕಿ  ಡಾ. ಮಂಜುಳಾ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದರು. ಆ ನಂತರ ಪೋಲಿಸ್ ಇಲಾಖೆ ಸಹಕಾರದೊಂದಿಗೆ ಮೃತಳ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಪ್ರತಿಭಟನೆಯಲ್ಲಿ ಚಂದನ ನೆಟ್‌ವರ್ಕ್‌ನ ಮಂಜುಳ, ರವಿಶಂಕರ್  ರೆಡ್ಡಿ, ಶಿವರೆಡ್ಡಿ, ಶ್ರೀನಾಥ್, ಹನುಮಂತರೆಡ್ಡಿ, ಮೈರಾಡ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟರೆಡ್ಡಿ ಎಸ್  ಗಿರಣಿ, ನಿಸರ್ಗ ಸಂಸ್ಥೆಯ ಆಧ್ಯಕ್ಷ ರಾಜು. ವಿ.ಸಿ, ಯೋಜನಾ ವ್ಯವಸ್ಥಾಪಕರಾದ ಗಂಗಾಧರ್ , ವೆಂಕಟರೆಡ್ಡಿ, ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆಯ ಮುಖ್ಯಸ್ಥ ಉಷಾ ಕಿರಣ್, ಸೌಖ್ಯ ಸಂಜೀವಿನಿ ಸಂಸ್ಥೆಯ ಕಾರ್ಯದರ್ಶಿ ಸುಮ, ಅಂಜಲಿ, ಪದ್ಮ ಮುಂತಾದವರು ಭಾಗವಹಿಸಿದ್ದರು.
ತೀವ್ರ ಆಕ್ರೋಶ
ಜಿಲ್ಲಾ ಮಟ್ಟದ ತಾಲೂಕು ಆಸ್ಪತ್ರೆಗಳಲ್ಲಿನ ಒಳ ರೋಗಿ ವಿಭಾಗದಲ್ಲಿ ಹೆಚ್‌ಐವಿ ಸೋಂಕಿತರಿಗೆ 5 ಹಾಸಿಗೆ ಸೌಲಭ್ಯವನ್ನು ಒದಗಿಸಬೇಕೆಂದು ಈ ಹಿಂದಿನ ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ನೀಡಿದ್ದರು.
  ಆದರೆ, ಇದನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ. ಸೋಂಕಿತರನ್ನು ನಿರ್ಲಕ್ಷ್ಯದಿಂದ ಕಂಡು ಹಾಗೆಯೇ ವಾಪಸ್ ಕಳುಹಿಸುವುದು ಇಲ್ಲವೇ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಸಿ ಸುಮ್ಮನೆ ಬಿಟ್ಟು ಬಿಡುವಂತಹುದಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.