ವೇತನಕ್ಕೆ ಆಗ್ರಹಿಸಿ ತಮಟೆ ಚಳವಳಿ ಪಪಂ ಕಚೇರಿ ಎದುರು ಪ್ರತಿಭಟನೆ
ಗುಡಿಬಂಡೆ: ಸ್ಥಳೀಯ ಪಟ್ಟಣ ಪಂಚಾಯತಿಯ ಕುಡಿಯುವ ನೀರಿನ ಶುದ್ಧಿಕರಣ ಘಟಕದಲ್ಲಿ ಕೆಲಸ ಮಾಡುತ್ತಿರುವ ನಾಲ್ವರಿಗೆ ಕಳೆದ 24 ತಿಂಗಳಿಂದ ವೇತನ ನೀಡಿಲ್ಲ. ಅವರಿಗೆ ವೇತನ ನೀಡುವಂತೆ ಆಗ್ರಹಿಸಿ ಪಪಂ ಕಚೇರಿ ಎದುರು ದಲಿತ ಸಂರಕ್ಷಣಾ ವೇದಿಕೆ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ತಮಟೆ ಚಳವಳಿ ನಡೆಯುತ್ತಿದೆ.
ನೀರು ಶುದ್ಧಿಕರಣ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ರಾಜೇಶ್, ಲಕ್ಷ್ಮಪ್ಪ, ಭಾಸ್ಕರ ಹಾಗೂ ಗಿರೀಶ್ ಕೆಲಸ ಮಾಡುತ್ತಿದ್ದರು. ಗುತ್ತಿಗೆ ಮುಗಿದ ನಂತರ ಇವರಿಗೆ ನೀಡುತ್ತಿದ್ದ ವೇತನ ನಿಲ್ಲಿಸಲಾಗಿದೆ. ನಂತರ ಹಿಂದೆ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ನೀಡಿದ ಭರವಸೆ ಮೇರೆಗೆ ಇದೇ ನೌಕರರು ಮತ್ತೆ ಅಲ್ಲೇ ಕೆಲಸ ಮಾಡುತ್ತಿದ್ದರು. 24 ತಿಂಗಳಿಂದ ವೇತನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನೌಕರರು ದಲಿತ ಸಂರಕ್ಷಣಾ ವೇದಿಕೆ ಬೆಂಬಲದೊಂದಿಗೆ ಚಳವಳಿ ಮಾಡುತ್ತಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಶಂಕರ್ ತಿಳಿಸಿದ್ದಾರೆ.
ನೌಕರ ರಾಜೇಶ್ ಮಾತನಾಡಿ, ಪಪಂ ನೀರು ಸರಬರಾಜು ವಿಭಾಗದಲ್ಲಿ ಕೆಲಸ ನಿರ್ವಹಿಸುವ ಮುನಿಶ್ಯಾಮಿ ಎಂಬಾತ ನಮ್ಮ ಉದ್ಯೋಗ ಕಾಯಂ ಮಾಡಿಸಿಕೊಡುತ್ತೇನೆ ಎಂದು ಹೇಳಿ ರಾಜೇಶ್, ಲಕ್ಷ್ಮಪ್ಪ, ಭಾಸ್ಕರ ಅವರಿಂದ ತಲಾ 35 ಸಾವಿರ ಪಡೆದಿದ್ದಾರೆ ಎಂದು ದೂರಿದರು.
ಈ ವೇಳೆ ದಲಿತ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಮೋಹನ, ಅನೀಲ, ಅಶ್ವತ್ಥಪ್ಪ, ಲಕ್ಷ್ಮಪ್ಪ, ಭಾಸ್ಕರ್, ಗಿರೀಶ್ ಸೇರಿದಂತೆ ಹಲವರು ಇದ್ದರು.
ಮುಖ್ಯಾಧಿಕಾರಿ ಹೇಳಿಕೆ: ಪಟ್ಟಣ ಪಂಚಾಯತಿ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ 4 ಜನ ನೌಕರರನ್ನು 2007ರಲ್ಲಿ ಶುದ್ದೀಕರಣ ಘಟಕದ ನಿರ್ವಹಣೆಯ ಟೆಂಡರ್‌ನ್ನು ವಹಿಸಿಕೊಂಡಿದ್ದವರು ನೇಮಿಸಿಕೊಂಡಿದ್ದಾರೆ. ಇವರನ್ನು ಪಪಂ ನೇಮಕ ಮಾಡಿಕೊಂಡಿರುವುದಿಲ್ಲ. ಇವರ ಗುತ್ತಿಗೆ ಅವಧಿ ಮುಗಿದಿದ್ದು, ಇವರಿಗೆ ಯಾವುದೇ ರೀತಿಯಲ್ಲಿ ಪ.ಪಂ. ವತಿಯಿಂದ ವೇತನ ನೀಡಲು ಸಾಧ್ಯವಿಲ್ಲ ಪಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

