ಜನಮನ ಸೂರೆಗೊಂಡ ಹೂವಿನ ಕರಗ
ಚಿಕ್ಕಬಳ್ಳಾಪುರ: ನಗರದ ಭಗತ್ ಸಿಂಗ್ ಬಡಾವಣೆಯ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವದ ಪ್ರಯುಕ್ತ ನಡೆದ ವಾದ್ಯಗೋಷ್ಠಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವಿಧ ಪೂಜಾ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು.
ನಗರದಲ್ಲಿ ಜಾಲಾರಿ ಗಂಗಮ್ಮನ ಗುಡಿ ದೇವಾಲಯದ ವತಿಯಿಂದ ನಡೆಯುವ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಜನರನ್ನು ಸೆಳೆಯಿತು.
ಶನಿವಾರ ರಾತ್ರಿ 10.30ಕ್ಕೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕಳಶ ಸ್ಥಾಪನೆ, ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಆ ಮೂಲಕ ಹೂವಿನ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ.ಬಾಲಾಜಿ ಹೂವಿನ ಕರಗವನ್ನು ಹೊತ್ತಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸ್ವೀಕರಿಸಿದ ನಂತರ ನಗರದ ವಿವಿಧೆಡೆ ಸಂಚರಿಸಿದರು.
ಹಲವೆಡೆ ನಡೆಯುತ್ತಿದ್ದ ವಾದ್ಯಗೋಷ್ಠಿಗಳ ವೇದಿಕೆಯ ಮೇಲೆ ಆಕರ್ಷಕ ನಾನಾ ಭಂಗಿಗಳ ನೃತ್ಯದಿಂದ ಎಲ್ಲರೂ ಮೈ ಮರೆತು ಚಪ್ಪಾಳೆ ತಟ್ಟುವಂತೆ ಮಾಡಿದರು. ಮೊಣಕಾಲಿನಲ್ಲಿ ನೃತ್ಯ, ಅರ್ಧ ದೇಹವನ್ನು ಬಾಗಿಸುತ್ತ ವೇದಿಕೆಯ ಮೇಲೆ ಶಿರವನ್ನು ಮೇಲಕ್ಕೆ ತೋರಿಸುತ್ತ ಮಲಗಿಕೊಂಡು ಮಾಡಿದ ನೃತ್ಯ ಆಕರ್ಷಕವಾಗಿತ್ತು. ಕರಗ ಮಹೋತ್ಸವಕ್ಕೆ ಕೀಲು ಕುದುರೆ, ವೀರಭದ್ರನ ಕುಣಿತ, ಬೊಂಬೆಗಳ ನೃತ್ಯ ಸಾಥ್ ನೀಡಿದವು. ಅಲ್ಲಲ್ಲಿ ಭಕ್ತಾದಿಗಳಿಗಾಗಿ ಅನ್ನಸಂತರ್ಪಣೆಯನ್ನು ಕೈಗೊಳ್ಳಲಾಗಿತ್ತು.
ಆಕರ್ಷಕ ಗೋಷ್ಠಿ: ನಗರದ ಹಳೆಯ ಬಸ್ ನಿಲ್ದಾಣ, ವೇಣುಗೋಪಾಲಸ್ವಾಮಿ ರಸ್ತೆ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ವಾದ್ಯಗೋಷ್ಠಿಗಳನ್ನು ಹಲವು ಸಂಘಟನೆಗಳು ಆಯೋಜಿಸಿದ್ದವು. ಅಭಿಮಾನಿಗಳು ತಮಗೆ ಇಷ್ಟವಾದ ಚಲನಚಿತ್ರದ ಹಾಡುಗಳನ್ನು ಹಾಡಲು ವಾದ್ಯಗೋಷ್ಠಿ ತಂಡದವರಿಗೆ ಮನವಿ ಮಾಡಿ, ಆ ಹಾಡು ಕೇಳಿ ಆನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

