ಕೋಲಾರ ಜಿಪಂನಲ್ಲಿ ಜಟಾಪಟಿ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 26
ಜಿಪಂ ಸದಸ್ಯ ಸೋಮಶೇಖರ ರೆಡ್ಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ ಎಇಇ ಚಂದ್ರಶೇಖರ್ ಅವರನ್ನು ವರ್ಗಾವಣೆ ಮಾಡಬೇಕು ಇಲ್ಲವೇ ಅಮಾನತು ಪಡಿಸಬೇಕು ಎಂದು ಜಿಪಂ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸೋಮಶೇಖರ ರೆಡ್ಡಿ, ದುರುದ್ದೇಶದಿಂದ ಎಇಇ ಚಂದ್ರಶೇಖರ್ ತಮ್ಮ ಮೇಲೆ ಎಫ್ಐಆರ್ ದಾಖಲು ಮಾಡಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ ರುವ ಎಇಇ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಸಭೆ ನಡೆಸಬೇಕೆಂದು ಪಟ್ಟು ಹಿಡಿದರು.
ಸ್ಥಳದಲ್ಲಿ ಇರಲಿಲ್ಲ: ಕಳೆದ ತಿಂಗಳು 22 ರಂದು ಯಾವುದೋ ಬಿಲ್ ವಿಚಾರವಾಗಿ ಎಇಇ ಚಂದ್ರಶೇಖರ್ ಮತ್ತು ಗ್ರಾಮಸ್ಥರ ನಡುವೆ ಜಗಳವಾಗಿದ್ದು, ನಾನು ಸ್ಥಳದಲ್ಲಿ ಇರಲೇ ಇಲ್ಲ. ಆದರೂ ಎಇಇ ದೂರು ನೀಡಿದ್ದಾರೆಂದು ಕಿಡಿಕಾರಿದರು.
ಸೋಮಶೇಖರ ರೆಡ್ಡಿ ಬೆಂಬಲಕ್ಕೆ ನಿಂತ ಎಲ್ಲಾ ಸದಸ್ಯರು, ದೂರು ದಾಖಲಿಸಿರುವ ಎಇಇ ಚಂದ್ರಶೇಖರ್ ಅವರನ್ನು ಅಧ್ಯಕ್ಷರ ಪೀಠದ ಬಳಿ ಕರೆಸಿಕೊಂಡು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದರು. ಏ.22ರಂದು ತಾವು ಕೆಲಸ ನಿಮಿತ್ತ ಜೀಪಿನಲ್ಲಿ ಹೋಗುತ್ತಿದ್ದಾಗ ನರೇಗಾ ಸಂಬಂಧಿಸಿದ ಬಿಲ್ ಪಾವತಿಗೆ ಒತ್ತಾಯಿಸಿ ನಾಲ್ವರು ಅಪರಿಚಿತರು ನನ್ನ ಮತ್ತು ಸೆಕ್ಷನ್ ಆಫೀರ್ ಬೈರಾರೆಡ್ಡಿ ಜೊತೆ ಜಗಳವಾಡಿದರು. ಆಗ ಜಿಪಂ ಸದಸ್ಯ ಸೋಮಶೇಖರ್ ರೆಡ್ಡಿ ಅವರ ಹೆಸರನ್ನು ಈ ಯುವಕರು ಪ್ರಸ್ತಾಪಿಸಿ ಹಣ ನೀಡದಿದ್ದರೆ ಜೀವ ಸಹಿತ ಉಳಿಸಲ್ಲವೆಂದು ಮಚ್ಚು ತೋರಿಸಿದರು. ಇದರಿಂದ ನನ್ನ ಆತ್ಮರಕ್ಷಣೆಗಾಗಿ ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ತಿಳಿಸಿದರು.
ಸದಸ್ಯರಾದ ಎಂ.ಎಸ್. ಆನಂದ್, ಎಸ್.ಬಿ. ಮುನಿವೆಂಕಟಪ್ಪ, ಕಿಟ್ಟಪ್ಪ, ಹರೀಶ್, ಯಲ್ಲಮ್ಮ, ಮಂಗಮ್ಮ, ಚೌಡೇಶ್ವರಿ, ಲಕ್ಷ್ಮೀನಾರಾಯಣ ಇನ್ನಿತರರು ಎಇಇ ಮಾತು ಸತ್ಯಕ್ಕೆ ದೂರವೆಂಬುದು ಗೊತ್ತಾಗುತ್ತಿದೆ. ಕೂಡಲೇ ಅಮಾನತು ಅಥವಾ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷರ ಸಮಾಧಾನ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಘಟನೆ ಬಗ್ಗೆ ನನಗೆ ಗೊತ್ತಿರಲಿಲ್ಲ, ಸೋಮಶೇಖರರೆಡ್ಡಿ ಹೇಳಿದ ಮೇಲೆ ತಿಳಿದದ್ದು ಎಂದರೆ, ಘಟನೆ ಬಗ್ಗೆ ಎಇಇ ತಮಗೆ ಗಮನಕ್ಕೆ ತಂದಿರುವುದು ನಿಜ ಎಂದು ಅಧ್ಯಕ್ಷರು ಮತ್ತು ಸಿಇಒ ಹೇಳಿದಾಗ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು, ಕ್ರಮ ಕೈಗೊಳ್ಳುವುದಕ್ಕೆ ನಿರ್ಣಯವಾಗಬೇಕು. ಎಇಇಯನ್ನು ರಜೆ ಮೇಲೆ ಕಳುಹಿಸಬೇಕೆಂದು ಆಗ್ರಹಿಸಿ ಸಭೆಯಿಂದ ಹೊರ ನಡೆದರು.
ಸಭೆಯಿಂದ ನಿರ್ಗಮನ: ಅಧ್ಯಕ್ಷರು ಪಂಚಾಯಿತ್ ರಾಜ್ ಕಾಯಿದೆಗೆ ಸಂಬಂಧಿಸಿದ ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡಿದ ಬಳಿಕ ಸಭೆಯಲ್ಲಿ ಯಾರ್ಯಾರು ಇರಬೇಕೆಂದು ನಿರ್ಧರಿಸುವ ಅಧಿಕಾರ ನನಗಿದೆ. ಸದಸ್ಯರ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಿ ಎಂದು ಜಿಪಂ ಇಇ ಹರೀಶ್ಬಾಬು ಅವರಿಗೆ ಸೂಚಿಸಿದರು.
ಸಿಇಒ, ಎಇಇ ಚಂದ್ರಶೇಖರ್ ಅವರನ್ನು ತಮ್ಮ ಬಳಿ ಕರೆಸಿಕೊಂಡು ಸಭೆಯಿಂದ ಹೊರ ಹೋಗುವಂತೆ ಸೂಚಿಸಿದ ಬಳಿಕ ಚಂದ್ರಶೇಖರ್ ಸಭೆಯಿಂದ ನಿರ್ಗಮಿಸಿ ಸದಸ್ಯರ ಅವೇಶ ತಣ್ಣಗಾಗಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

