ಕೊಪ್ಪಳ

ನನಸಾದ ಕಾರಟಗಿ ತಾಲೂಕು ಕನಸು

Published On :

ಕಾರಟಗಿ: ಕೊಪ್ಪಳ ಜಿಲ್ಲೆಯ ಅತ್ಯಂತ ಶ್ರೀಮಂತ ಗ್ರಾಮ ಕಾರಟಗಿ. ರಾಯಚೂರು ಜಿಲ್ಲೆಯಲ್ಲಿದ್ದಾಗಿನಿಂದಲೂ ಐತಿಹಾಸಿಕ, ಸಾಮಾಜಿಕ, ಆರ್ಥಿಕ ಶೈಕ್ಷಣಿಕ, ರಾಜಕೀಯವಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಒಂದಲ್ಲ ಒಂದು ಕಾರಣಕ್ಕೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದೆ.
ಗಂಗಾವತಿ, ಸಿಂಧನೂರು ಮಧ್ಯದಲ್ಲಿರುವ ಈ ಪಟ್ಟಣ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈಗಲೂ ಗ್ರಾಮ ಪಂಚಾಯ್ತಿಯಾಗೇ ಇದೆ. ವಿಶೇಷವೆಂದರೆ ಈ ಗ್ರಾಪಂ ಇಡೀ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿಯೇ ಅತ್ಯಂತ ದೊಡ್ಡ ಪಂಚಾಯ್ತಿ. 62 ಸದಸ್ಯರನ್ನು ಒಳಗೊಂಡು ರಾಜಕೀಯದ ಸಾಧನೆ ಮಾಡಿದೆ.
ಕೊಪ್ಪಳ ಜಿಲ್ಲೆಯಲ್ಲಿಯೇ ಬಹುದೊಡ್ಡ ವ್ಯಾಪಾರಿ ಮತ್ತು ಔದ್ಯೋಗಿಕ ಕೇಂದ್ರವಾಗಿರುವ ಕಾರಟಗಿ ಪಟ್ಟಣವನ್ನು ಪ್ರತಿದಿನ ಸುಮಾರು 50 ಹಳ್ಳಿಗಳ ಜನ ತಮ್ಮ ವ್ಯಾಪಾರ ವಹಿವಾಟು ಮತ್ತು ದಿನ ನಿತ್ಯದ ಅವಶ್ಯಕತೆಗಳಿಗಾಗಿ ಅವಲಂಬಿಸಿದ್ದಾರೆ.
ಇಲ್ಲಿಯ ಅತ್ಯುತ್ತಮ ತಳಿಯ ಸೋನಾ ಮಸೂರಿ ಅಕ್ಕಿ ಪ್ರಸಿದ್ಧ. ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಗುಲಬರ್ಗಾ, ದಾವಣಗೆರೆ, ಹುಬ್ಬಳ್ಳಿ ಅಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಅಷ್ಟೇ ಏಕೆ ಕೊಲ್ಲಿ ತಟ್ಟೆಯಲ್ಲಿನ ಅನ್ನಕ್ಕೆ ಕಾರಟಗಿ ಗಿರಣಿ ಅಕ್ಕಿ ಹೂವಾಗಿ ಅರಳುತ್ತಿದೆ. ಅಷ್ಟರ ಮಟ್ಟಿಗೆ ಈ ಪಟ್ಟಣದ ಬಿಜಿನೆಸ್ ಬೆಳೆದಿದೆ.
ರಾಜ್ಯದಲ್ಲಿ ಮೊದಲ ಸಾಲಿನಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಉಪಮಾರುಕಟ್ಟೆಗಳಲ್ಲಿ ಕಾರಟಗಿಯಲ್ಲಿದ್ದ ಉಪಮಾರುಕಟ್ಟೆ ಸಹ ಒಂದು. ಈಗ ಏಷಿಯಾದಲ್ಲಿ ಮೊದಲು ಎನ್ನಲಾದ ರೈಸ್ ಟೆಕ್ನಾಲಜಿ ಪಾರ್ಕ್ ಇಲ್ಲಿಯೇ ಸ್ಥಾಪನೆಯಾಗಿದ್ದರಿಂದ ವಿಶೇಷ ಎಪಿಎಂಸಿಯಾಗಿ ಪರಿವರ್ತನೆಯಾಗಿದೆ. ವಾರ್ಷಿಕ ರು. 4ರಿಂದ 5 ಕೋಟಿ ರಾಜ್ಯಸ್ವ ಇಲ್ಲಿ ಸಂಗ್ರಹವಾಗುತ್ತದೆ.
ಏನಿದೆ ಅರ್ಹತೆ?: 4 ರಾಷ್ಟ್ರೀಕೃತ ಬ್ಯಾಂಕ್, 5 ಸೌಹಾರ್ದ ಪತ್ತಿನ ಸಹಕಾರಿಗಳು, 1 ಗ್ರಾಮೀಣ ಬ್ಯಾಂಕ್, 1 ರೈತರ ಸೇವಾ ಸಹಕಾರಿ ಬ್ಯಾಂಕ್ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವು ನಿತ್ಯ ರು. 2-3 ಕೋಟಿ ವಹಿವಾಟು ನಡೆಸುತ್ತವೆ. 50ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಹೊರಹಾಕುವ ತೌಡು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಘಟಕ ತಲೆಎತ್ತಿದೆ.
ಪಟ್ಟಣದ ಆದಾಯ ಸರ್ಕಾರಕ್ಕೆ ಎಷ್ಟರ ಮಟ್ಟಿಗೆ ಮತ್ತು ಎಷ್ಟು ಪ್ರಮಾಣದಲ್ಲಿ ಮುಟ್ಟುತ್ತದೆ ಎನ್ನುವುದಕ್ಕೆ ಮೂರು ವರ್ಷಗಳ ಹಿಂದೆ ಇಲ್ಲಿ ಸ್ಥಾಪನೆಯಾದ ಉಪನೋಂದಣಿ ಕಚೇರಿಯೇ ಸಾಕ್ಷಿ. ಇಷ್ಟೆಲ್ಲ ಇದ್ದರೂ ಇಲ್ಲಿನ ಜನ ಸರ್ಕಾರಿ ಕೆಲಸಕ್ಕೆ ತಾಲೂಕು ಕೇಂದ್ರವನ್ನು ಅವಲಂಬಿಸುವಂಥ ಸ್ಥಿತಿ ಇದೆ. 1 ಪದವಿ ಕಾಲೇಜು, 2 ಜ್ಯೂನಿಯರ್ ಕಾಲೇಜು, 6 ಪ್ರೌಢಶಾಲೆಗಳು, 18 ಪ್ರಾಥಮಿಕ ಶಾಲೆಗಳು ಅಲ್ಲದೆ ಇನ್ನಿತರ ಖಾಸಗಿ ವಿದ್ಯಾ ಸಂಸ್ಥೆಯ ಶಾಲಾ-ಕಾಲೇಜುಗಳಿವೆ.
ಕೃಷಿ ಜಮೀನು: ಕಾರಟಗಿ ಗ್ರಾಮದ ವ್ಯಾಪ್ತಿಯಲ್ಲಿ 43958.10 ಎಕರೆ ಪ್ರದೇಶ ಸಾಗುವಳಿ ಯೋಗ್ಯ ಜಮೀನು ಇದೆ. ಅದರಲ್ಲಿ 7968.07 ಎಕರೆ ನೀರಾವರಿ, 19989.31 ಎಕರೆ ಖುಷ್ಕಿ ಕ್ಷೇತ್ರವಿದ್ದು, ಭೂ ಕಂದಾಯ ಅಂದಾಜು ರು. 3 ಕೋಟಿ.
ಹೋರಾಟದ ಹಾದಿ: ಮಾಜಿ ಸಚಿವ ನಾಗಪ್ಪ ಸಾಲೋಣಿ, ಬಿ.ಜಿ. ಅರಳಿ, ಉದ್ಯಮಿಗಳಾದ ಪ್ರಹ್ಲಾದ ಶೆಟ್ಟಿ, ಸುಂಕದ ಲಿಂಗಪ್ಪ, ವಿ.ಬಿ. ಚಿನಿವಾಲ, ಭಗವಂತಪ್ಪ ನಾಯಕ, ಕೆ. ಪರಸಪ್ಪ, ಸಿ. ಶಿವಪ್ಪ, ಜಿ. ತಿಮ್ಮನಗೌಡ, ಪ್ರಹ್ಲಾದ ಜೋಶಿ, ಕೆ. ಮಲ್ಲಿಕಾರ್ಜುನ ಇತರರು ಕಾರಟಗಿ ತಾಲೂಕನ್ನಾಗಿಸಲು ತೀರ್ಮಾನಿಸಿ ತಾಲೂಕು ಹೋರಾಟ ಸಮಿತಿ ರಚಿಸಿದರು.
22 ಡಿ. 2001, 5 ಜು. 2003 ರಂದು ಕಾರಟಗಿ ಬಂದ್ ಬಳಿಕ 2009ರ ಮೇನಲ್ಲಿ ಎಂ.ಬಿ. ಪ್ರಕಾಶ ವರದಿ ವಿರೋಧಿಸಿ 1 ತಿಂಗಳ ಶಾಂತಿಯುತ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದರು. ಈ ಹೋರಾಟದಲ್ಲಿ ಕಾರಟಗಿ ಜನತೆ ಜತೆಗೆ ಸುತ್ತಲಿನ ಗ್ರಾಮಸ್ಥರೂ ಸರದಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಮೊದಲೆರಡು ಹೋರಾಟಕ್ಕೆ ಮಣಿದ ಆಗಿನ ಸರ್ಕಾರ ಕಾರಟಗಿಗೆ ವಿಶೇಷ ತಹಸೀಲ್ ಕಚೇರಿ ಮಂಜೂರಾಗಿಸಿತ್ತು.
ಕಾರಟಗಿ ಜನಸಂಖ್ಯೆ, ಉದ್ಯಮಗಳು, ಆಯಾ ಇಲಾಖೆಗಳ ಉತ್ಪನ್ನ ಆಡಳಿತದ ಸರಳೀಕರಣ, ಈ ಭಾಗದ ಮೂಲ ಸೌಲಭ್ಯಗಳ ಅನುಕೂಲಕತೆ ಬಗ್ಗೆ ಸರ್ಕಾರವೇ ನೇಮಿಸಿದ್ದ ವಾಸುದೇವರಾವ್ ಸಮಿತಿ, ಟಿ.ಎಂ. ಹುಂಡೇಕಾರ್ ಸಮಿತಿ, ಪಿ.ಸಿ. ಗದ್ದಿಗೌಡರ ಸಮಿತಿಗಳು ಕಾರಟಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಶಿಫಾರಸು ಮಾಡಿವೆ. ಜತೆಗೆ ಕಂದಾಯ ಉಪವಿಭಾಗವನ್ನಾಗಿ ಮಾಡಲೂ ಸರ್ಕಾರಕ್ಕೆ ಸ್ವಯಂ ಪ್ರೇರಣೆಯಿಂದ ಶಿಫಾರಸು ಮಾಡಿದ್ದವು.
ಧಾರ್ಮಿಕ, ಔದ್ಯೋಗಿಕ, ಆರ್ಥಿಕ ವಿವಿಧ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಕಲ್ಯಾಣ ಕಾರಟಗಿಗೆ ಈಗ ತಾಲೂಕು ಕೇಂದ್ರವಾಗಬೇಕೆಂಬ ಕನಸು ಈಡೇರಿದೆ.
-ಎ.ಜಿ. ಕಾರಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.