ಕೊಪ್ಪಳ

ಡಿಡಿಪಿಐ ನೀರಿಳಿಸಿದ ಜಿಪಂ ಕೆಡಿಪಿ ಸಭೆ

Published On :

ಕೊಪ್ಪಳ: ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಬೇಕಾದ ಶಿಕ್ಷಕರೇ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ. ಯಾವಾಗ ಬೇಕಾದ್ರೂ ಗೈರು ಹಾಜರಿರುತ್ತಾರೆ. ಶಿಕ್ಷಕರನ್ನೇನು ರಾಜಕಾರಣ ಮಾಡ್ಲಿಕ್ಕೆ ಬಿಟ್ಟಿರೇನ್ರಿ?
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ತಿಂಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಪಂ, ಸ್ಥಾಯಿ ಸಮಿತಿ ಅಧ್ಯಕ್ಷರು, ಸಿಇಓ ಮುಂತಾದ ಅಧಿಕಾರಿಗಳು ಡಿಡಿಪಿಐ ಜಿ.ಎಚ್. ವೀರಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
ಜಿಲ್ಲೆಯಲ್ಲಿ ಶಿಕ್ಷಣ ಸುಧಾರಿಸುತ್ತಿದೆ ಎಂದು ಪ್ರಗತಿಯಲ್ಲಿದೆ ವಿನಃ ಫಲಿತಾಂಶ ಮಾತ್ರ ಶೂನ್ಯ. ನೀವು ಕೊಟ್ಟ ದಾಖಲೆ ಸರಿಯಾಗಿಲ್ಲ. ನಿಜವಾದ ದಾಖಲಾತಿಯನ್ನು ಸಭೆಗೆ ತರುತ್ತಿಲ್ಲ. ಪ್ರತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಕೊರತೆ ಪರಿಶೀಲಿಸಿ ಎಂದು ಕಳೆದ ಸಭೆಯಲ್ಲಿ ಸೂಚಿಸಿದಂತೆ ಯಾವ ಶಾಲೆಗೆ ಭೇಟಿ ನೀಡಿದ್ದೀರಿ? ಅದರ ವರದಿ ಕೊಡಿ. ನಾವೇ ಬಹುತೇಕ ಶಾಲೆಗಳಿಗೆ ಹೋದಾಗ ಅಲ್ಲಿ ಬಹುತೇಕ ಶಿಕ್ಷಕರು ಗೈರಾಗಿದ್ದರು. ಶಿಕ್ಷಕರನ್ನು ನೀವೇ ರಾಜಕೀಯ ಮಾಡ್ಲಿಕ್ಕೆ ಬಿಟ್ಟಿದ್ದೀರಿ. ಅಂಥ ಶಿಕ್ಷಕರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಜನಾರ್ದನ ಡಿಡಿಪಿಐ ಅವರನ್ನು ಕೇಳಿದರು. ಅದಕ್ಕೆ ಡಿಡಿಪಿಐ ಮೌನವಾಗಿ ನಿಂತರು. ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಡಿಡಿಪಿಐ ವಿರುದ್ಧ ಸರ್ಕಾರಕ್ಕೆ ವರದಿ ಮಾಡಿ ಎಂದು ಜಿಪಂ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಸಿಇಒಗೆ ಸೂಚಿಸಿದರು. ಸಿಇಒ ಎಸ್. ರಾಜಾರಾಂ ಮಾಹಿತಿ ಕೇಳಿದಾಗಲೂ ಡಿಡಿಪಿಐ ತಡಬಡಾಯಿಸಿದರು.
ಜಿಲ್ಲೆ ಕೆರೆಗಳ ಅಭಿವೃದ್ಧಿಪಡಿಸಿ. ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಸಮರ್ಪಕ ಮೋಟಾರ್ ನೀಡಿ ಎಂದು ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ಅವರು ಅಕ್ಕಿ ದಾಸ್ತಾನು ಮಳಿಗೆ ಪರಿಶೀಲಿಸಲು ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಉಗ್ರಾಣಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ್ದರಿಂದ ರೈತರು ಬತ್ತವನ್ನು ಬೇರೆ ರಾಜ್ಯಗಳಿಗೆ ಮಾರುತ್ತಿದ್ದಾರೆ. ಅದರಿಂದ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ ಎಂದು ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಹುಲಗಿ ದೂರಿದರು.
ಅಶೋಕ ಕಲಘಟಗಿ ಮಾತನಾಡಿ, ಜಿಲ್ಲೆಯ ಉಗ್ರಾಣಗಳ ಬಗ್ಗೆ ಸಮರ್ಪಕ ಮಾಹಿತಿ ಇಲಾಖೆಯಲ್ಲಿಲ್ಲ. ಅದರಿಂದ ಅಕ್ಕಿ ದಾಸ್ತಾನು ಪರಿಶೀಲಿಸಲಾಗುತ್ತಿಲ್ಲ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳನ್ನು ಗುರುತಿಸಿ. ಕ್ರಿಯಾಯೋಜನೆ ರೂಪಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದು ಅಭಿಯಂತ ಮುರಳಿಧರ್‌ಗೆ ಸಭೆ ಸೂಚಿಸಿತು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಈ ವರ್ಷ ಕಿನ್ನಾಳದಲ್ಲಿ 15 ಮಗ್ಗಗಳ ಅಳವಡಿಕೆ ಗುರಿಯಿದ್ದು, ಶೇ. 100 ಸಾಧನೆಯಾಗಿದೆ. 2013-14ನೇ ಸಾಲಿಗೆ ಭಾಗ್ಯನಗರದಲ್ಲೂ ಹೆಚ್ಚು ಮಗ್ಗಗಳ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಎಂದು ಜಿಪಂ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಮಾನವ ಅಭಿವೃದ್ಧಿ ಸೂಚ್ಯಂಕದ ಅಂಕಿ ಅಂಶಗಳನ್ನು ಈ  ಬಾರಿ ಜಿಲ್ಲಾ ಮಟ್ಟದಲ್ಲಿ ತಯಾರಿಸಲಾಗುತ್ತಿದೆ. ಎಲ್ಲ ಇಲಾಖೆ ಅಧಿಕಾರಿಗಳು ಇಲಾಖೆವಾರು ಅಂಕಿ ಅಂಶಗಳನ್ನು ಜಿಪಂಗೆ ನೀಡಬೇಕೆಂದು ಜಿಪಂ ಯೋಜನಾ ನಿರ್ದೇಶಕ ಟಿ.ಪಿ. ದಂಡಿಗದಾಸರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಉಪಾಧ್ಯಕ್ಷೆ ಅನ್ನಪೂರ್ಣಾ ಕಂದಕೂರ, ಶಿಕ್ಷಣ- ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಕೃಷಿ-ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.