ಬೀರಪ್ಪ, ಮಾರೆಪ್ಪಗೆ ಪ್ರಶಸ್ತಿ
ಕೊಪ್ಪಳ: ಕರ್ನಾಟಕ ಜಾನಪದ ಪರಿಷತ್ತು ಕೊಡ ಮಾಡುವ 2013ನೇ ಸಾಲಿನ ಪ್ರತಿಷ್ಟಿತ ಜಾನಪದ ಲೋಕೋತ್ಸವ ಪ್ರಶಸ್ತಿ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಬೀರಪ್ಪ ಗೂಳಪ್ಪ ಯಡಿಯಾಪುರ ಮತ್ತು ಮಾರೆಪ್ಪ ಮಾರೆಪ್ಪ ದಾಸರ ಅವರಿಗೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಾಜಾರಾಂ ಅವರಿಗೆ ಜಾನಪದ ವಿಶೇಷ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಬೀರಪ್ಪ ಯಡಿಯಾಪುರ ಅವರು ಗೀಗೀ, ಲಾವಣಿ, ಡೊಳ್ಳಿನ ಹಾಡು, ಹಂತಿಯ ಹಾಡು, ಹೋಳಿಪದ, ಭಜನೆ ಪದ, ಲಂಬಾಣಿ ಪದ, ಬುಡಬುಡಿಕೆ ಹಾಡು, ರಾಮ ಕೊಂಡಾಡಿ ಹಾಡು ಸೇರಿದಂತೆ ಜನಪದ ಹಾಡು ಹೇಳುವುದರಲ್ಲಿ ಸಿದ್ಧಹಸ್ತರು. ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಇದೀಗ ಬೀರಪ್ಪಗೆ ಜಾನಪದ ಲೋಕ ಪ್ರಶಸ್ತಿ ಸಂದಿದೆ.
ತುಮ್ಮರಗುದ್ದಿ ಗ್ರಾಮದ ಮಾರೆಪ್ಪ ದಾಸರ ಏಕತಾರಿ ತತ್ವಪದ ಹಾಡಿನ ಮೂಲಕ ರಾಜ್ಯದೆಲ್ಲೆಡೆ ಹೆಸರು ಮಾಡಿದ್ದಾರೆ. ಮಾರೆಪ್ಪನವರ ಹಾಡಿಗೆ ಮನಸೋಲದವರೇ ಇಲ್ಲ. ಕರುನಾಡ ಕೋಗಿಲೆ ಎಂದು ಬಿರುದು ಪಡೆದಿರುವ ಇವರು ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೀಗ ಜಾನಪದ ಲೋಕ ಪ್ರಶಸ್ತಿ ಲಭಿಸಿದೆ.
ಎಸ್. ರಾಜಾರಾಂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಉತ್ತಮ ಜಾನಪದ ಹಾಡುಗಾರರೂ ಮತ್ತು ಏಕತಾರಿ ತತ್ವ ಪದಕಾರರೂ ಆಗಿದ್ದಾರೆ.
ಇವರ ಕಲೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ಅವರಿಗೆ ವಿಶೇಷ ಜಾನಪದ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

