ಮಣ್ಣಿನ ಮೇಲೆ ಡಾಂಬರ್ ಸುರಿದರು!
ಯಲಬುರ್ಗಾ: ತಾಲೂಕಿನ ಕಡಬಲಕಟ್ಟಿಯಿಂದ ಚಿಕ್ಕಬನ್ನಿಗೋಳ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಬಹುತೇಕ ಕಡೆಗಳಲ್ಲಿ ಸರಿಯಾಗಿ ಕಾಮಗಾರಿ ನಿರ್ವಹಿಸದೆ, ಬೇಕಾಬಿಟ್ಟಿ ಜಲ್ಲಿಕಲ್ಲು ಹಾಕಿ ಕಾಟಾಚಾರಕ್ಕೆ ಕೆಲಸ ಮಾಡಿದ್ದಾರೆ.
ರಾಜ್ಯ ಸರ್ಕಾರದ 'ನಮ್ಮ ಊರು ನಮ್ಮ ರಸ್ತೆ' ಯೋಜನೆ ಅಡಿಯಲ್ಲಿ ಮಂಜೂರಾಗಿ ಅನುಷ್ಠಾನಗೊಳ್ಳುತ್ತಿರುವ ಈ ರಸ್ತೆ ಸುಧಾರಣೆ ಕಾಮಗಾರಿ 2011ರಲ್ಲಿ ಶುರುವಾಗಿ, ಏಪ್ರಿಲ್ 2012ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, 2012-13 ಆರ್ಥಿಕ ವರ್ಷದ ಕೊನೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ತರಾತುರಿಯಲ್ಲಿ ಒಂದಿಷ್ಟು ಕೆಲಸ ಮಾಡಿ, ಹಣ ನುಂಗಿ ಹಾಕುವ ಉದ್ದೇಶದಿಂದಲೇ ಕಾಮಗಾರಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗುಣಮಟ್ಟದಿಂದ ನಿರ್ಮಿಸಿ: ಕಳಪೆ ಕಾಮಗಾರಿಗೆ ಅಧಿಕಾರಿಗಳು ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಮೇಲಿಂದ ಮೇಲೆ ಸ್ಥಳಕ್ಕೆ ಬಂದು ಪರಿಶೀಲಿಸಿ, ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಬೇಕು. ನಿಗಾ ವಹಿಸಬೇಕು. ಒಂದೆರೆಡು ವರ್ಷಗಳಿಂದಲೂ ಈ ರಸ್ತೆಯ ಮೇಲೆ ಅಲ್ಲಲ್ಲಿ ಕಡಿ ಹಾಗೂ ಮಣ್ಣು ಹಾಕಿದ್ದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ.
ಚಿಕ್ಕಬನ್ನಿಗೋಳ ಗ್ರಾಮದಲ್ಲಿ ರಸ್ತೆ ಮೇಲೆ ಹಾಕಿದ್ದ ಕಡಿಗಳ ಮೇಲೆ ನೀರು, ಮಣ್ಣು ಹಾಕಿ ರೂಲರ್ನಿಂದ ಸಮತಟ್ಟ ಮಾಡದೆ ಅದರ ಮೇಲೆಯೇ ಮಣ್ಣು ಹಾಕಿ ಡಾಂಬರು ಹಾಕುವ ಯತ್ನದಲ್ಲಿದ್ದಾರೆ. ಇದು ಎಷ್ಟು ಬಾಳಿಕೆ ಬಂದೀತು? ಹೀಗೆ ಮಾಡುವುದಕ್ಕಿಂತ ಹಾಗೆಯೇ ಬಿಡುವುದು ಉತ್ತಮ ಎಂದು ಗ್ರಾಮಸ್ಥರಾದ ಶೇಖಪ್ಪ, ಮಲ್ಲಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಯಮಕ್ಕೆ ವಿರುದ್ಧ: ಒಟ್ಟು 6.22 ಕಿ.ಮೀ. ಉದ್ದದ ಈ ರಸ್ತೆ ಸುಧಾರಣಾ ಕಾಮಗಾರಿಯಲ್ಲಿ ಒಂದು ಸೇತುವೆ ಆಗಬೇಕಿದೆ. ಅದಕ್ಕಾಗಿ ರು. 156.11 ಲಕ್ಷ ಮಂಜೂರಾಗಿದೆ. ರಸ್ತೆ ನಿರ್ಮಾಣಗೊಂಡ ನಂತರ 5 ವರ್ಷ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಆದರೆ ನಿರ್ಮಾಣ ಕಾರ್ಯವೇ ಮಂದಗತಿಯಲ್ಲಿ ಸಾಗಿದೆ, ಕಾಟಾಚಾರಕ್ಕೆ ರಸ್ತೆ ಸಿದ್ಧಗೊಳ್ಳುತ್ತಿದೆ. ಯೋಜನೆಯಲ್ಲಿ ನಿಗದಿಪಡಿಸಿದಂತೆ ರಸ್ತೆ ನಿರ್ಮಾಣಗೊಳ್ಳುತ್ತಿಲ್ಲ. ರಸ್ತೆ ಮಧ್ಯೆ ಸ್ವಲ್ಪ ಮಣ್ಣನ್ನು ಅಗೆದು, ಜಲ್ಲಿ ಹಾಕಿ, ನೀರುಣಿಸಿ, ರೂಲರ್ ಹೊಡೆದು ಗಟ್ಟಿಯಾದ ಮೇಲಷ್ಟೇ ಡಾಂಬರ್ ಹಾಕುವುದು ಯೋಜನೆಯಲ್ಲಿದೆ. ಆದರೆ, ಗುತ್ತಿಗೆದಾರರು ಕೇವಲ ಮಣ್ಣು ಸಮತಟ್ಟು ಮಾಡಿ, ಡಾಂಬರ್ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ಕಾಳಜಿ ವಹಿಸಲಿ
ಈ ರೀತಿ ರಸ್ತೆ ನಿರ್ಮಿಸುವುದರಿಂದ 3-4 ತಿಂಗಳಲ್ಲೇ ಕಿತ್ತು ಹೋಗುತ್ತದೆ. ನಿಯಮ ಪ್ರಕಾರ 5 ವರ್ಷ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರಿಗೆ ಸೇರಿದೆ. ಆದರೆ ಬೆಂಗಳೂರು ಮೂಲದ ಗುತ್ತಿಗೆದಾರರು ಈ ಗ್ರಾಮೀಣಾ ಪ್ರದೇಶದ ರಸ್ತೆಗೆ ಬಂದು ಎಷ್ಟು ನಿರ್ವಹಣೆ ಮಾಡುತ್ತಾರೆಂಬದೇ ಯಕ್ಷಪ್ರಶ್ನೆ.
ಸದ್ರಿ ರಸ್ತೆಯ ಮಧ್ಯೆ ತಿರುವಿನಲ್ಲಿ ಕಿರು ಸೇತುವೆ ಇದ್ದು, ಅಪಾಯ ಆಹ್ವಾನಿಸುವಂತಿದೆ. ಪಕ್ಕದ ರಕ್ಷಣಾ ಕಲ್ಲುಗಳೂ ಕಿತ್ತುಹೋಗಿವೆ. ಅದನ್ನೂ ದುರಸ್ತಿಗೊಳಿಸದೆ ಡಾಂಬರ್ ಹಾಕುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಚಿಕ್ಕಬನ್ನಿಗೋಳ ಹಾಗೂ ಕಡಬಲಕಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಶಿವಮೂರ್ತಿ ಇಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

