ಕೊಪ್ಪಳ

ಸೇತುಬಂಧ ವಸತಿ ಶಾಲೆ ಪುನಾರಂಭ

Published On :

ಕೊಪ್ಪಳ: 'ಅಪ್ಪ ಅಮ್ಮ ಇದ್ದರೂ ಇಲ್ಲದಂತಪ್ಪ, ಅನ್ನಹಾಕಿ ಪುಣ್ಯಾ ಕಟ್ಟಿಕೊಳ್ರಪ್ಪ' ಎನ್ನುವ ತಲೆಬರಹದಡಿ ಸೋಮವಾರ ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಕ್ಕಳ ಕುರಿತು ದೂರವಾಣಿ ಕರೆ ಮಾಡಿ ಅನೇಕರು ಕನಿಕರ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಅಷ್ಟೊಂದು ಮಕ್ಕಳಿಗೆ ನಾವು ಸಹಾಯ ಮಾಡುವುದು ಆಗುವುದಿಲ್ಲವಾದರೂ ನಮ್ಮ ಕೈಲಾದ ಮಟ್ಟಿಗೆ ಮಾಡುತ್ತೇವೆಂದು ಹೇಳಿದ್ದಾರೆ.
ಇನ್ನು ಸೇತುಬಂಧ ವಸತಿ ಶಾಲೆಯನ್ನು ನಡೆಸಿ, ಅವಧಿ ಮುಗಿದಿದ್ದರಿಂದ ಬಂದ ಮಾಡಿದ್ದ ಅಮರೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕಲ್ಯಾಣ ಸಂಸ್ಥೆ, ಶಾಸಕ ಸಂಗಣ್ಣ ಕರಡಿ ಅವರ ಆದೇಶದ ಮೇರೆಗೆ  ಪುನಃ ಪ್ರಾರಂಭ ಮಾಡಿದೆ. ಇದರಿಂದ ಗುಳೆ ಹೋದವರ ಮಕ್ಕಳು ಈಗ ನಿಟ್ಟುಸಿರುಬಿಟ್ಟಿದ್ದಾರೆ.
'ಕನ್ನಡಪ್ರಭ' ವರದಿಯನ್ನು ಓದಿದ ಶಾಸಕ ಸಂಗಣ್ಣ ಕರಡಿ ತಕ್ಷಣ ಸೇತುಬಂಧ ಶಾಲೆಯನ್ನು ಪ್ರಾರಂಭಿಸಬೇಕು ಮತ್ತು ಮಕ್ಕಳಿಗೆ ಊಟ ಹಾಕುವಂತೆ ಸಂಸ್ಥೆಯ ಪ್ರತಿನಿಧಿ ಗಿರೀಶ್ ಅವರಿಗೆ ಸೂಚಿಸಿದ್ದಾರೆ. ಸರ್ಕಾರದಿಂದ ಪುನಃ ಪ್ರಾರಂಭ ಮಾಡುವ ಆದೇಶವನ್ನು ಮಾಡಿಸುವುದಕ್ಕೆ ಪ್ರಯತ್ನಿಸಲಾಗುವುದು. ಈಗಂತೂ ಸಂಸ್ಥೆಯಿಂದಲೇ ಪ್ರಾರಂಭಿಸಿ ಎಂದು ಆದೇಶ ಮಾಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಂಸ್ಥೆಯ ಗಿರೀಶ್ ಅವರು ಸಂಜೆಯ ವೇಳೆಗೆ ವಸತಿ ಶಾಲೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಮೊದಲು ಅದರಲ್ಲಿದ್ದ ಎಲ್ಲ ಮಕ್ಕಳಿಗೂ ಮರಳಿ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ, ಬೀದಿಪಾಲಾಗಿದ್ದ ಆ 127 ವಿದ್ಯಾರ್ಥಿಗಳು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಅವರಿವರ ಮನೆಗೆ ಅಲೆಯುವುದು ತಪ್ಪಿದೆ.
ಸಹಾಯಹಸ್ತ: ಇನ್ನು ಇದಲ್ಲದೆ ಅನೇಕರು ಸಹಾಯ ಮಾಡುವುದರ ಕುರಿತು ಮುಂದೆ ಬಂದಿದ್ದಾರೆ. ಕೆಲವರಂತೂ ನನಗೆ ವಸತಿ ಶಾಲೆಯನ್ನು ತೆರೆಯುವ ಶಕ್ತಿ ಇಲ್ಲ. ಆದರೆ, ಯಾರಾದರೂ ಮಾಡಿದರೆ ನಾವು ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಗಿಣಿಗೇರಿಯ ಗೆಳೆಯರ ಬಳಗದ ವತಿಯಿಂದಲೂ ನೆರವು ಮಾಡುವ ಮಾತುಗಳನ್ನಾಡಿದ್ದಾರೆ.
ಮರಳಿ ವಸತಿ ಶಾಲೆ ಪ್ರಾರಂಭವಾಗಿದ್ದರಿಂದ ಅತೀವ ಆನಂದಿತರಾಗಿರುವ ವಿದ್ಯಾರ್ಥಿಗಳು ಕನ್ನಡಪ್ರಭಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಮೂಲಕ ಪರಿಹಾರವಾಗುವುದಕ್ಕೆ ಕಾರಣವಾಗಿದ್ದೀರಿ. ಇಷ್ಟು ಬೇಗ ನಮ್ಮ ಸಮಸ್ಯೆ ಬಗೆ ಹರಿಯುತ್ತದೆ ಎಂದು ಗೊತ್ತಾಗಿರಲೇ ಇಲ್ಲ. ಆದಕ್ಕಾಗಿ ನಾವು ಅಭಿನಂದನೆ ಸಲ್ಲಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.