ರಕ್ತ ಹರಿದ್ರೂ ಬಿಜಾಪುರ ಸೇರಿಸಲ್ಲ
ಯಲಬುರ್ಗಾ: ಈಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯದಲ್ಲಿ ಕಲಂ 371ನೇ (ಜೆ) ತಿದ್ದುಪಡಿ ಮೂಲಕ ಹೈ-ಕ ಪ್ರದೇಶಕ್ಕೆ ದೊರೆತಿರುವ ವಿಶೇಷ ಸ್ಥಾನಮಾನಕ್ಕೆ ಬಿಜಾಪುರ ಜಿಲ್ಲೆಯನ್ನು ಸೇರಿಸಬೇಕು ಎಂದು ಹಲವು ಬುದ್ಧಿಜೀವಿಗಳು, ಸಾಹಿತಿಗಳು ನಿರ್ಣಯ ಕೈಕೊಂಡಿರುವುದನ್ನು ಖಂಡಿಸುತ್ತೇವೆ ಎಂದು ತಾಲೂಕಿನ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಆಯೋಜಿಸಿದ್ದ ಯಲಬುರ್ಗಾ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಲ್ಕು ದಶಕಗಳ ಹೋರಾಟದ ಫಲವಾಗಿ ಹೈ-ಕ ಭಾಗದ ಹಿಂದುಳಿದ 6 ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಲು ಒಪ್ಪಿಗೆ ನೀಡಿದೆ. ಆದರೆ, ಅತ್ಯಂತ ಮುಂದುವರಿದ ಜಿಲ್ಲೆಯಾಗಿರುವ ಬಿಜಾಪುರವನ್ನು ಹೈ-ಕಕ್ಕೆ ಸೇರಿಸುವ ಹುನ್ನಾರ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಸಾಹಿತಿ ಎಂ.ಎಂ. ಕಲಬುರ್ಗಿ ಹಾಗೂ ಕಸಾಪ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿಯಂತಹ ಬುದ್ಧಿಜೀವಿಗಳು ಹೈ-ಕ ಪ್ರದೇಶದವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ. ಯಾರದೋ ಲಾಭಕ್ಕಾಗಿ ಇತರರನ್ನು ಬಲಿಕೊಟ್ಟು ಉಳ್ಳವರಿಗೆ ಮಣೆ ಹಾಕುತ್ತಿರುವುದು ಯಾವ ನ್ಯಾಯ? ಈ ಭಾಗದ ಜನರ ರಕ್ತ ಹರಿದರೂ ಚಿಂತೆಯಿಲ್ಲ, ಬಿಜಾಪುರ ಸೇರಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ನಮ್ಮ ಭಾಗದ ಅನೇಕ ಯುವಕರು ನಿರುದ್ಯೋಗಿಗಳಿರುವಾಗ ಬಿಜಾಪುರ ಜಿಲ್ಲೆಯವರು ಈ ಸೌಲಭ್ಯಗಳಿಗಾಗಿ ಸೇರ್ಪಡೆಗೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಟೀಕಿಸಿದರು.
ಕಸಾಪ ತಾಲೂಕು ಪದಾಧಿಕಾರಿಗಳು, ಹೋಬಳಿ ಘಟಕದ ಅಧ್ಯಕ್ಷರು, ಆಜೀವ ಸದಸ್ಯರಿದ್ದ ಸಭೆಯಲ್ಲಿ ಫೆ. 19ರ ಬೆಳಗ್ಗೆ 10.30ಕ್ಕೆ ಪಟ್ಟಣದ ಸರ್ಕೀಟ್ ಹೌಸ್ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಸಾಹಿತಿ ಶರಣಗೌಡ ಯರದೊಡ್ಡಿ, ಮರ್ದಾನಸಾಬ ಕೊತ್ವಾಲ್, ಕಸಾಪ ಅಧ್ಯಕ್ಷ ಶಿವಮೂರ್ತಿ ಇಟಗಿ, ಹೋಬಳಿ ಅಧ್ಯಕ್ಷ ಹನುಮಂತಪ್ಪ ಜಳಕಿ, ಬಾಲದಂಡಪ್ಪ ತಳವಾರ, ಸ.ಶರಣಪ್ಪ ಪಾಟೀಲ, ಮಲ್ಲಣ್ಣ ಹುಲಿ, ಶರಣಪ್ಪ,ಮಹಾತೇಂಶ ಚಲವಾದಿ, ಶಿವಪುತ್ರಯ್ಯ ಹಿತ್ತಲಮನಿ, ವಿ.ಎಸ್.ಶಿವಪ್ಪಯ್ಯನಮಠ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

