ಸ್ಥಳೀಯ ಚುನಾವಣೆಗೆ ಮೂಹೂರ್ತ: ಆಕಾಂಕ್ಷಿಗಳಿಗೆ ಶಾಕ್
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 14
ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಘೋಷಿಸಿ ದಿನಾಂಕವನ್ನು ನಿಗದಿ ಮಾಡಿರುವುದರಿಂದ ಎಂಎಲ್ಎ ಆಕಾಂಕ್ಷಿಗಳಿಗೆ ಅಕ್ಷರಶಃ ಗರ ಬಡಿದಂತಾಗಿದೆ. ವಿಧಾನಸಭೆ ಚುನಾವಣೆ ಬಳಿಕ ಇವು ನಡೆದಿದ್ದರೆ ಅಷ್ಟೊಂದು ಭಾರವಾಗುತ್ತಿರಲಿಲ್ಲ. ಸ್ಥಳೀಯ ಮತ್ತು ಸಾರ್ವತ್ರಿಕ ಚುನಾವಣೆಗೂ ನಾವೇ ಶ್ರಮಿಸಬೇಕಾಗಿದೆ ಎಂದು ಮುಖಂಡರು ನಿಟ್ಟುಸಿರು ಬಿಡುತ್ತಿದ್ದಾರೆ.
ಹಾಗಂತ ಯಾರೂ ಬಾಯಿ ಬಿಟ್ಟು ಹೇಳುತ್ತಿಲ್ಲ. ಆದರೂ ಮನಸ್ಸಿನೊಳಗೆ ಮಂಡಿಗೆ ಮುರಿಯುತ್ತಿದ್ದಾರೆ. ಹ್ಯಾಗಪ್ಪ ಎಂದು ದಿಗ್ಭ್ರಾಂತರಾಗಿದ್ದಾರೆ. ನಮಗೇ ಯಾವ ಪಕ್ಷದಿಂದ ಟಿಕೇಟ್ ಎನ್ನುವುದು ಗೊತ್ತಾಗಿಲ್ಲ. ಯಾವ ಪಕ್ಷದಿಂದ ನಿಂತರೆ ಜನರು ಮತ ನೀಡುತ್ತಾರೆ ಎನ್ನುವ ಚಿಂತೆಯಲ್ಲಿರುವಾಗ ಏಕಾಏಕಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಎನ್ನುವುದು ಆಕಾಂಕ್ಷಿಗಳ ಅಭಿಮತ.
ಸ್ಥಳೀಯ ಸಂಸ್ಥೆಯ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗುವುದರಿಂದ ಈಗಿನಿಂದಲೇ ನಾವು ಹರಸಾಹಸ ಪಡಬೇಕು. ಆದರೆ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ.
ಚುನಾವಣೆಗೆ ಸಿದ್ಧ: ಇನ್ನು ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರು ಮಾತ್ರ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಚುನಾವಣೆಗೆ ಸಿದ್ಧರಾಗಿದ್ದೇವೆ. ಚುನಾವಣೆ ಯಾವಾಗ ಬಂದರೂ ಎದುರಿಸಲೇಬೇಕು. ಸ್ವಲ್ಪ ಕಷ್ಟವಾಗುತ್ತದೆ. ಆದರೂ ಎದುರಿಸುತ್ತೇವೆ ಎಂದು ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಜಿಲ್ಲಾಧ್ಯಕ್ಷರು ಅಭಿಪ್ರಾಯ ಪಡುತ್ತಾರೆ.
ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸಿದ್ದೇವೆ. ಗುರುತಿಸಿರುವ ಕೆಲವರಲ್ಲಿ ಯಾರಿಗೆ ಅಂತಿಮವಾಗಿ ಟಿಕೆಟ್ ನೀಡಬೇಕು ಎಂದು ನಿರ್ಧರಿಸಬೇಕು. ಇನ್ನು ಮೀಸಲಾತಿಯೂ ಬಂದಿರುವುದರಿಂದ ಅಂಥ ಸಮಸ್ಯೆ ಆಗದು ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಸಿದ್ಧವಿಲ್ಲ ಎಂದರೆ ಹಿನ್ನಡೆಯಾಗುತ್ತದೆ ಎಂದು ನಾವು ಸಿದ್ಧ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಅವರಿಗೂ ಅಳುಕು ಇರುವುದು ಅವರ ಮಾತಿನಲ್ಲಿಯೇ ಗೊತ್ತಾಗುತ್ತದೆ.
ಇನ್ನು ಸ್ಥಳೀಯ ಸಂಸ್ಥೆ ಆಕಾಂಕ್ಷಿಯಾಗಿರುವವರು ಮಾತ್ರ ಫುಲ್ ಖುಷಿಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆ ಬಳಿಕವಾಗಿದ್ದರೆ ನಾವೇ ಗೋಳಾಡಬೇಕಾಗುತ್ತಿತ್ತು. ಈಗ ಹಾಗಲ್ಲ. ಶಾಸಕರಾಗುವವರು ಶ್ರಮವಹಿಸಿಸುತ್ತಾರೆ. ಹೀಗಾಗಿ, ಟಿಕೆಟ್ ಗಿಟ್ಟಿಸಿಕೊಂಡರೆ ಸಾಕೆಂದು ವಿಶ್ಲೇಷಿಸುತ್ತಾರೆ.
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

