ವಿರೂಪಾಪುರಗಡ್ಡೆ: 25 ರೆಸಾರ್ಟ್ ತೆರವು
ಗಂಗಾವತಿ: ಮಿನಿ ಗೋವಾ ಎಂದೇ ಕರೆಯಲಾಗುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿನ 25 ಅಕ್ರಮ ರೆಸಾರ್ಟ್ಗಳನ್ನು ಮಂಗಳವಾರ ತೆರವು ಮಾಡಲಾಯಿತು. ಈ ವೇಳೆ ರೆಸಾರ್ಟ್ ಮಾಲೀಕನೊಬ್ಬ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಂಪಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದ ರೆಸಾರ್ಟ್ಗಳನ್ನು ಯಂತ್ರಗಳ ಸಹಾಯದಿಂದ ತೆರವು ಮಾಡಲಾಯಿತು. ಈ ಸಂದರ್ಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಪೊಲೀಸ್ ಬಿಗಿಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು.
ಸೋಮವಾರ ಸಂಜೆ ವಿರೂಪಾಪುರಗಡ್ಡೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮಂಗಳವಾರ ಬೆಳಗ್ಗೆ 6ರ ಒಳಗೆ ಸ್ವಯಂಪ್ರೇರಿತರಾಗಿ ರೆಸಾರ್ಟ್ ತೆರವು ಮಾಡಲು ಮಾಲೀಕರಿಗೆ ಸೂಚನೆ ನೀಡಿದ್ದರು. ಸೂಚನೆ ಪಾಲಿಸದ ಕಾರಣ ಬೆಳಗ್ಗೆಯಿಂದಲೇ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪ್ರವಾಸಿಗರ ಪರದಾಟ: ತೆರವು ಕಾರ್ಯಾಚರಣೆಯಿಂದಾಗಿ ಪ್ರವಾಸಿಗರು ಪರದಾಡುವಂತಾಯಿತು. 15 ವರ್ಷಗಳ ಹಿಂದೆ ತಲೆ ಎತ್ತಿರುವ ಈ ರೆಸಾರ್ಟ್ಗಳಿಗೆ ಜಪಾನ್, ಇಸ್ರೇಲ್, ಸ್ವಿಡ್ಜರ್ಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ವಿದೇಶಿಗರು ಆಗಮಿಸುತ್ತಿದ್ದರು. ಯಂತ್ರಗಳ ಸದ್ದು ಕೇಳುತ್ತಿದ್ದಂತೆ ವಿದೇಶಿಗರು ಹಂಪಿ, ಹೊಸಪೇಟೆ, ಗೋವಾ, ಗೋಕರ್ಣಗಳಿಗೆ ಪ್ರಯಾಣ ಬೆಳೆಸಿದರು.
ಭದ್ರತೆಗೆ ಡಿವೈಎಸ್ಪಿ ಡಿ.ಎಲ್. ಹಣಗಿ ಮತ್ತು ಸಿಪಿಐ ಉಜ್ಜೇನಕೊಪ್ಪ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು.
ಆತ್ಮಹತ್ಯೆಗೆ ಯತ್ನ
ರೆಸಾರ್ಟ್ವೊಂದನ್ನು ತೆರವುಗೊಳಿಸಲು ಮುಂದಾದಾಗ ಹುಲಗಪ್ಪ ಎನ್ನುವಾತ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದ. ಪೊಲೀಸರು ಆತನನ್ನು ತಡೆದರು. ಸೀಮೆ ಎಣ್ಣೆ ಕುಡಿದಿದ್ದರಿಂದ ಆತ ತೀವ್ರ ಅಸ್ವಸ್ಥನಾಗಿದ್ದ. ಇದೇ ವೇಳೆ, ರೆಸಾರ್ಟ್ ಮಾಲೀಕನೊಬ್ಬ ಕುಸಿದು ಬಿದ್ದ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹುಲಗಪ್ಪ, ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಕಾಲಾವಕಾಶ ನೀಡಲಿಲ್ಲ. ದೊಡ್ಡ ಹೊಟೇಲ್ಗಳನ್ನು ತೆರವುಗೊಳಿಸುವುದನ್ನು ಬಿಟ್ಟು ನಮ್ಮಂಥ ಬಡಪಾಯಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

