ಕೊಪ್ಪಳ

ಕಾರ್ಖಾನೆ ತ್ಯಾಜ್ಯ: ತಜ್ಞರ ಸಮಿತಿ ಪರಿಶೀಲನೆ

Published On :

ಕೊಪ್ಪಳ: ಕೊಪ್ಪಳ ಸೇರಿದಂತೆ ತಾಲೂಕಿನಾದ್ಯಂತ ಇರುವ ಕೈಗಾರಿಕೆಗಳಿಂದ ತ್ಯಾಜ್ಯ ವಿಪರೀತವಾಗಿ ಜಾನುವಾರುಗಳು ಬಂಜೆಯಾಗಿರುವುದು ಸೇರಿದಂತೆ ಜನರು ಬಂಜೆತನ ಎದುರಿಸುವ ಹಂತ ತಲುಪಿವೆ. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಎಷ್ಟೇ ದೂರು ನೀಡಿದರೂ ಕ್ಯಾರೆ ಎನ್ನದಿರುವಾಗ ಎಚ್ಚೆತ್ತ ರೈತರು ನೇರ ಸರ್ಕಾರಕ್ಕೆ ದೂರು ನೀಡಿದ್ದರು. ಪರಿಣಾಮ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿದೆ. ಗುರುವಾರ ಜಿಲ್ಲಾದ್ಯಂತ ಸಂಚರಿಸಿದ ಸಮಿತಿ ಸದಸ್ಯರು, ಪರಿಸರದ ಮೇಲಾದ ದುಷ್ಪರಿಣಾಮ ಕುರಿತು ಅಧ್ಯಯನ ನಡೆಸಿದರು.
ಪರಿಶೀಲನೆ: ವೈದ್ಯರು, ಮಣ್ಣು ಮತ್ತು ನೀರು ಪರೀಕ್ಷೆ ತಜ್ಞರು ಹಾಗೂ ವಿಶೇಷವಾಗಿ ಪರಿಸರ ತಜ್ಞರನ್ನೊಳಗೊಂಡ ಸಮಿತಿ  ಕುಣಿಕೇರಿ, ಹಿರೇಬಗನಾಳ, ಬಗನಾಳ, ಹಿಟ್ನಾಳ, ಬೇವಿನಾಳ ಸೇರಿದಂತೆ ಸುಮಾರು ಹತ್ತಾರು ಗ್ರಾಮಗಳ ಪ್ರದೇಶ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿತು. ಅಲ್ಲದೆ ಕಾರ್ಖಾನೆಯಿಂದ ಹೊರಸೂಸುವ ತ್ಯಾಜ್ಯವನ್ನು ಪರಿಶೀಲನೆಗೆ ಒಳಪಡಿಸಿತು.
ಅಸಮಾಧಾನ: ಕಿರ್ಲೋಸ್ಕರ್, ಕಲ್ಯಾಣಿ, ಝಿಂಡಿಯಾ, ಧ್ರುವದೇಶಂ, ಬಾಬಾ ಇಂಡಸ್ಟ್ರೀಜ್ ಸೇರಿದಂತೆ ಬಹುತೇಕ ಕೈಗಾರಿಕೆಗಳ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ, ಪಕ್ಕದಲ್ಲಿಯೇ ಇರುವ ಹೊಲಗಳಲ್ಲಿ ಸುತ್ತಾಡಿ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭ ರೈತರಿಂದಲೂ ಅಹವಾಲು ಸ್ವೀಕಾರ ಮಾಡಿದರು. ರೈತರಿಂದ ಬಂದ ದೂರುಗಳಿಂದ ತಬ್ಬಿಬ್ಬಾದ ಅಧ್ಯಯನ ತಂಡ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
ಕಳವಳ: ಭೇಟಿ ನೀಡಿದ ತಜ್ಞರ ಸಮಿತಿ ಕೊಪ್ಪಳ ತಾಲೂಕಾದ್ಯಂತ ಆಗಿರುವ ಪರಿಸರ ಹಾನಿ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದೆ.  ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮ ಬಳಿ ಇರುವ ಛತ್ರಪತಿ ತೋಟ ಸಂಪೂರ್ಣ ಹಾನಿಯಾಗಿರುವ ಸ್ಥಳಕ್ಕೆ  ಭೇಟಿ ನೀಡಿದ್ದರು. ಚಿಕ್ಕು ತೋಟವಿಡೀ ನಾಶವಾಗಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದರು. ಚಿಕ್ಕು ಹಣ್ಣಾಗಿದ್ದರೂ ತಿನ್ನಲು ಸಾಧ್ಯವಿಲ್ಲದಂತೆ ಆಗಿರುವುದನ್ನು ನೋಡಿ ಬೆರಗಾದರು. ಇಂಥ ಸ್ಥಿತಿ ಕುರಿತು ಸಮಗ್ರ ವರದಿಯನ್ನು ಕಳುಹಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.