7 ಶಾಸಕರಿದ್ದೂ ಸಿಕ್ಕಿದ್ದು 7 ಕೋಟಿ!
ಮಂಡ್ಯ: ಅಧಿವೇಶನ ಅಂತಿಮ ದಿನ ಜಿಲ್ಲೆಯ ಅಭಿವೃದ್ಧಿ ಹಾಗೂ ಕುಡಿಯುವ ನೀರಿಗಾಗಿ ಬಜೆಟ್ನಲ್ಲಿ 7 ಕೋಟಿ ಅನುದಾನ ನೀಡಿರುವುದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ.
ಇದು ಬಿಜೆಪಿ ಸರ್ಕಾರದಿಂದ ಕೊನೆಯ ಬಜೆಟ್ನಲ್ಲಿ ಜಿಲ್ಲೆಗೆ ಸಿಕ್ಕ ಒಂದು ಸಣ್ಣ ಬಂಪರ್. ಇದು ಜಿಲ್ಲೆಯ 7 ಶಾಸಕರು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಜತೆ ಹೋರಾಡಿ ತಂದಿರುವ ಅನುದಾನವಲ್ಲ. ಬದಲಿಗೆ ಬಿಜೆಪಿಯವರೇ ಆದ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜತೆ ಪರಿಷತ್ ಅಧಿವೇಶನದಲ್ಲಿ ಕಾದಾಡಿ ತಂದ ಅನುದಾನ.
ಕಾಳಜಿ ಏಕಿಲ್ಲ: ವಿಪರ್ಯಾಸ ನೋಡಿ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರುಗಳು ವಿಧಾನಸಭೆ ಅಧಿವೇಶನದಲ್ಲಿ ಕೂಗು ಹಾಕಿ ಬಜೆಟ್ನಲ್ಲಿ ನಮ್ಮ ಜಿಲ್ಲೆಗೆ ಪ್ರತಿ ಬಾರಿ ಏಕೆ ಅನ್ಯಾಯ ಮಾಡಿದ್ದೀರಿ ಎಂದು ಒಂದೇ ಒಂದು ಪ್ರಶ್ನೆ ಮಾಡಿದ ಉದಾಹರಣೆಗಳು ಇರಲಿಕ್ಕಿಲ್ಲ. ಆದರೆ ಬಿಜೆಪಿಯವರೇ ಆದ ಎಂಎಲ್ಸಿ ಅಶ್ವಥ್ ನಾರಾಯಣ, ಈ ಬಾರಿ ಬಜೆಟ್ನಲ್ಲಿ 7 ಕೋಟಿ ರು. ಅನುದಾನ ಪ್ರಕಟಿಸುವಂತೆ ಮಾಡಿದ್ದಾರೆ ಎಂದರೆ ಜಿಲ್ಲೆಯ ಎಲ್ಲಾ ಶಾಸಕರಿಗಿಂತ ಇವರಿಗೆ ಇರುವ ಕಾಳಜಿ ಮೆಚ್ಚಬೇಕಲ್ಲವೇ.
ಮನೆಯಲ್ಲಿ ಗೆಣಸು ಕೆರೆಯಬೇಕು: ಸರ್ಕಾರವನ್ನು ಯಾವುದೇ ಪಕ್ಷ ನಡೆಸಲಿ ಪ್ರತಿಭಟನೆಯ ಕೂಗು, ಹಕ್ಕೊತ್ತಾಯ ಮಂಡಿಸುವ ಪ್ರಯತ್ನವನ್ನು ನಮ್ಮ ಶಾಸಕರು ಕಳೆದ ಐದು ವರ್ಷಗಳಲ್ಲಿ ಮಾಡಿದ್ದಾರೆಯೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗುವ ಮುನ್ನವೇ 5 ವರ್ಷದ ತಮ್ಮ ಅವಧಿಗೆ ಶುಭ ವಿದಾಯ ಹೇಳಿ, ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಶಾಸಕರಾಗುವ ಕನಸು ಕಾಣುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಜಿಲ್ಲೆಯ ಜನ ಆಯ್ಕೆ ಮಾಡಿದವರನ್ನೇ ಮತ್ತೆ ವಿಧಾನಸಭೆಗೆ ಕಳುಹಿಸಬೇಕು ಎಂದು ಒಂದು ಸಣ್ಣ ಆಲೋಚನೆ ಮಾಡಿದರೆ ಈಗಿರುವ ಬಹುತೇಕ ಶಾಸಕರು ಮನೆಯಲ್ಲಿ ಗೆಣಸು ಕೆರೆಯಬೇಕು ಎನ್ನುವ ಜನಮನದ ಅನಿಸಿಕೆಗಳ ಬಗ್ಗೆ ಅರಿವಿದ್ದರೆ ಸಾಕು.
ಕಾಡಿ, ಬೇಡುವ ಮನಸ್ಸಿಲ್ಲ: ಸಕ್ಕರೆ ಕಾರ್ಖಾನೆಗಳಿಗೆ ಬಿಜೆಪಿ ಸರ್ಕಾರ ಒಂದಷ್ಟು ಹಣ ಕೊಟ್ಟಿರುವುದನ್ನು ಬಿಟ್ಟರೆ ಮಂಡ್ಯಕ್ಕಾಗಿ ಈ ಬಿಜೆಪಿ ಸರ್ಕಾರ ಕೊಟ್ಟಿದ್ದಾರೂ ಏನು ಎಂದು ಜಿಲ್ಲೆಯ ಶಾಸಕರುಗಳು ಗಲಾಟೆ ಮಾಡಿ ಅಥವಾ ಮುಖ್ಯಮಂತ್ರಿಗಳನ್ನು ಮನವಿ ಮಾಡಿ ಅಭಿವೃದ್ಧಿಗಾಗಿ ತಂದಿರುವ ಯೋಜನೆಗಳು ಯಾವುವು ಎಂಬುದನ್ನು ಸ್ವಲ್ಪ ಹೇಳಿ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಮೇಲುಕೋಟೆ, ನಾಗಮಂಗಲ, ಕೆ.ಆರ್. ಪೇಟೆ ಮತ್ತು ಮಳವಳ್ಳಿ ಕ್ಷೇತ್ರದ ಆಯಾ ಶಾಸಕರು ಕನಿಷ್ಠ ಪಕ್ಷ ಮುಖ್ಯಮಂತ್ರಿಗಳನ್ನು ಕಾಡಿ ಬೇಡಿ ಒಂದಷ್ಟು ಕೋಟಿ ಹಣ ತಂದು ಕುಡಿಯುವ ನೀರು, ರಸ್ತೆ, ಸರ್ಕಾರಿ ಕಟ್ಟಡಗಳು, ಭವನ, ಪ್ರವಾಸೋದ್ಯಮ ಹೀಗೆ ನಾನಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಆದರೆ ಉಳಿದ ಕ್ಷೇತ್ರದ ಶಾಸಕರಂತೂ ಸರ್ಕಾರ ನಮ್ಮ ಪಕ್ಷದ್ದಲ್ಲ ಸ್ವಾಮಿ. ನಾವು ಕೇಳಿದರೆ ಬಿಜೆಪಿ ಮುಖ್ಯಮಂತ್ರಿಗಳು ಅಷ್ಟು ಸುಲಭವಾಗಿ ಹಣ ಕೊಡುತ್ತಾರೆಯೇ ಎಂದು ಮರು ಪ್ರಶ್ನೆ ಮಾಡುತ್ತಾರೆ.
ಅಶ್ವಥ್ ನಾರಾಯಣ ಮಾಡಿದ್ದೇನು?: ಮುಖ್ಯಮಂತ್ರಿಗಳು ಬಜೆಟ್ನಲ್ಲಿ 7 ಕೋಟಿ ರು.ಗಳನ್ನು ಮಂಡ್ಯ ಜಿಲ್ಲೆಗೆ ನೀಡುವುದಾಗಿ ಪ್ರಕಟಿಸಿದ್ದಾರೆ. 5 ಕೋಟಿ ರು. ವೆಚ್ಚದಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಬಳಿ ಸಂಗಮದಲ್ಲಿ ಒಂದು ಸೇತುವೆ ಹಾಗೂ ಮಾರ್ಕೋನಹಳ್ಳಿ ಡ್ಯಾಂ ನಿಂದ ದೇವಲಾಪುರ ಕೆರೆಗೆ ನೀರು ತುಂಬಿಸುವ ಯೋಜನೆಗೆ 2 ಕೋಟಿ ರು. ಹಣವನ್ನು ವಿನಿಯೋಗಿಸುವ ನಿರ್ಧಾರ ಇದರಲ್ಲಿದೆ.
ಶ್ರೀರಂಗಪಟ್ಟಣ ತಾಲೂಕಿನ ಸಂಗಮ- ಚಂದಗಾಲು ಗ್ರಾಮದ ಸುತ್ತಮುತ್ತಲಿನ 36 ಹಳ್ಳಿಗಳು ಈಗ ಶ್ರೀರಂಗಪಟ್ಟಣಕ್ಕೆ ಬರಬೇಕಾದರೆ 12 ಕಿಮೀ ಸುತ್ತು ಹೊಡೆದು ಬರಬೇಕು. ಸಂಗಮ- ಚಂದಗಾಲು ಬಳಿ ಸೇತುವೆಯೊಂದನ್ನು ನಿರ್ಮಾಣ ಮಾಡಿದರೆ, ಕೇವಲ ಅರ್ಧ ಕಿಮೀವೊಳಗೆ 36 ಹಳ್ಳಿಗಳ ಗ್ರಾಮಸ್ಥರು ನೇರವಾಗಿ ಶ್ರೀರಂಗಪಟ್ಟಣಕ್ಕೆ ಬರಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿ 5 ಕೋಟಿ ಹಣ ಕೊಡಿ ಎಂಬ ಬೇಡಿಕೆಯನ್ನು ಅಶ್ವಥ್ ನಾರಾಯಣ ಮುಖ್ಯಮಂತ್ರಿಗಳ ಮುಂದಿಟ್ಟರು.
ಅದೇ ರೀತಿಯಲ್ಲಿ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಬರಡು ಮತ್ತು ಮಳೆ ಆಶ್ರಿತ ಪ್ರದೇಶ. ಈ ಹೋಬಳಿಯಲ್ಲಿರುವ ಅನೇಕ ಕೆರೆಗಳಿಗೆ ನೀರು ತುಂಬಿದರೆ ಮಾತ್ರ ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರು. ಇಲ್ಲದೇ ಹೋದರೆ ಎಲ್ಲದಕ್ಕೂ ಹಾಹಾಕಾರ. ಇದನ್ನು ಅರಿತಿದ್ದ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾರ್ಕೋನಹಳ್ಳಿ ಡ್ಯಾಂನಿಂದ ದೇವಲಾಪುರ ಕೆರೆಗೆ ನೀರು ಹರಿಸುವ ಯೋಜನೆ ಮಂಜೂರಾದರೆ ಅನೇಕ ಕೆರೆಗಳಿಗೆ ನೀರು ತುಂಬಿಸಿಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ದೂರದೃಷ್ಟಿಯಿಂದ ಈ ಯೋಜನೆಗೆ 2 ಕೋಟಿ ರು ಹಣ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ದುಂಬಾಲು ಬಿದ್ದು ಬಜೆಟ್ನಲ್ಲಿ ಹಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಮಂಡ್ಯ ಬೈ ಪಾಸ್ ಆಗುತ್ತಿತ್ತು: ಜಿಲ್ಲೆಯ ಪ್ರತಿಯೊಬ್ಬ ಶಾಸಕರು ಒಂದೊಂದು ಸಾರ್ವಜನಿಕ ಬೃಹತ್ ಕಾಮಗಾರಿಗಳನ್ನು ಪ್ರತಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಮಾಡಿಸಿಕೊಂಡಿದ್ದಿದ್ದರೆ ಕಳೆದ ಐದು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು. 7 ವರ್ಷಗಳಿಂದಲೂ ಮಂಡ್ಯಕ್ಕೆ ಬೈ ಪಾಸ್ ರಸ್ತೆ ಬೇಕು ಎಂಬ ಕೂಗು ಇದೆ. ಈ ಕಾಮಗಾರಿಗೆ ಅಗತ್ಯವಾಗಿರುವ ಅನುದಾನವನ್ನು ಹಂತ- ಹಂತವಾಗಿ ಕೊಡುವಂತೆ ಮುಖ್ಯಮಂತ್ರಿಗಳಿಗೆ ಸ್ಥಳೀಯ ಶಾಸಕ ಎಂ. ಶ್ರೀನಿವಾಸ್ ಒತ್ತಡ ತಂದಿದ್ದರೆ ಸರ್ಕಾರ ಪ್ರತಿ ವರ್ಷ ಬಜೆಟ್ನಲ್ಲಿ ಅಷ್ಟೋ, ಇಷ್ಟೋ ಹಣ ಕೊಟ್ಟು ಈ ವೇಳೆಗೆ ಬೈ ಪಾಸ್ ರಸ್ತೆಯ ಕಾಮಗಾರಿ ಮುಗಿಯುತ್ತಿತ್ತು. ಇಂತಹ ಆಲೋಚನೆಗಳನ್ನು ಇವರುಗಳು ಏಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಒಂದಂತೂ ನಿಜ. ಕಾಂಗ್ರೆಸ್ ಅಥವಾ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಸುವರ್ಣ ಮಂಡ್ಯ ಆಗುವುದಿಲ್ಲ. ಹಾಸನದ ಮಾದರಿ ಅಭಿವೃದ್ಧಿಯಂತೂ ಮಂಡ್ಯದಲ್ಲಿ ಕನಸಿನ ಮಾತು. ಮಂಡ್ಯದ ಅಭಿವೃದ್ಧಿಗೆ ಮಣ್ಣಿನ ಮಕ್ಕಳ ಕಾಳಜಿ ಒತ್ತಟ್ಟಿಗೆ ಇರಲಿ, ಸ್ಥಳೀಯ ನಾಯಕರಿಗಾದರೂ ಕಾಳಜಿ ಬೇಡ್ವೆ. ಆದರೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ರಸ್ತೆ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ತಂದು, ರಸ್ತೆ ಮತ್ತು ಜನರ ಕಣ್ಣಿಗೆ ಮಣ್ಣು ಎರಚಿ ಹಣ ಮಾಡುವವರ ಸಂಖ್ಯೆ ಹೆಚ್ಚಿದೆ ಎಂಬ ಜನ ಸಾಮಾನ್ಯರಿಗೆ ಗೊತ್ತಿರುವ ಸಂಗತಿಯನ್ನು ಯಾರಿಂದಲೂ ಮರೆ ಮಾಚಲು ಸಾಧ್ಯವೇ ಇಲ್ಲ.
-ಕೆ.ಎನ್.ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

