ಮಂಡ್ಯ: ಭಾಷೆಯನ್ನು ಅರ್ಥಪೂರ್ಣವಾಗಿ ಬಳಸದಿದ್ದರೆ ಅದು ಭಾಷಾ ಪ್ರಯೋಗಕ್ಕೆ ಮಾಡುವ ಅಪಮಾನ ಎಂದು ಮೈಸೂರು ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ನಗರದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಜ್ಞಾನಸಾಗರ ಕ್ಯಾಂಪಸ್ನಲ್ಲಿ ನಡೆದ ಕನ್ನಡ ಭಾಷೆ ಬೆಳವಣಿಗೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಭಾಷೆ ಸಂಕೇತಗಳ ವ್ಯವಸ್ಥೆ, ಜಾಗತಿಕ ಅಯಾಮ, ಭಾಷೆ ಎಂಬುದು ಸಮೂಹ ಮಾಧ್ಯಮ. ಯಾವುದೇ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸದಿದ್ದರೆ ಅದು ಭಾಷಾ ಪ್ರಯೋಗಕ್ಕೆ ಮಾಡಿದ ಅಪಮಾನವಾಗುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಿದಿದ್ದರೆ ಕನ್ನಡ ಬೆಳವಣಿಗೆ ಅಸಾಧ್ಯ. ಒಳ್ಳೆಯ ಮಾತು, ಭಾಷೆ, ಮನುಷ್ಯನನ್ನು ಅಂತರ್ಮುಖಿಯಾಗಿ ಮಾಡುತ್ತದೆ. ಭಾಷೆ, ಸನ್ನಡತೆ ವ್ಯಕ್ತಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದ್ದರು. ಕನ್ನಡ ವಿಷಯದಲ್ಲಿ ಕೌಶಲ್ಯ ಬೆಳೆಸಿಕೊಂಡರೆ ವ್ಯಕ್ತಿತ್ವ ಹಿಮ್ಮಡಿಗೊಳ್ಳುತ್ತದೆ. ಭಾಷೆಯ ಸತ್ವ ಅರ್ಥವಾಗುತ್ತದೆ. ದೇಶೀಯ ಸಂಸ್ಕೃತಿ ನೆಲದ ಮೂಲ ಭಾಷೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಉತ್ತಮ ಕನ್ನಡ ಮಾತನಾಡಬೇಕು ಎಂದರು. ಜ್ಞಾನಸಾಗರ ಕ್ಯಾಂಪಸ್ ಆಡಳಿತಾಧಿಕಾರಿ ಕಬ್ಬನಹಳ್ಳಿ ಕೆ.ಶಂಭುಗೌಡ, ಉಪಪ್ರಾಂಶುಪಾಲ ಯದುಶೈಲ, ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಕೆ.ಮಹೇಶ್, ಶಕುಂತಲಾ, ಎಸ್.ಆರ್.ಶಿವರಾಮು ಮತ್ತೀತರರು ಉಪಸ್ಥಿತರಿದ್ದರು.
ಸಮುದಾಯದತ್ತ ಶಾಲೆ
ನಾಗಮಂಗಲ: ತಾಲೂಕಿನ ಎಲ್ಲಾ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಏ.6ರಂದು ಮತ್ತು ಪ್ರೌಢಶಾಲೆಗಳಲ್ಲಿ ಏ.14ರಂದು ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅನಂತರಾಜು ತಿಳಿಸಿದರು. ಈ ಸಂಬಂಧ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ನಡೆಸುವುದರ ಜೊತೆಗೆ ಪೋಷಕರಿಂದ ಪ್ರಗತಿ ಪರಿಶೀಲನೆ ನಡೆಸಬೇಕು. ಅದೇ ದಿನ ಶಾಲೆಯ ಫಲಿತಾಂಶ ಪ್ರಕಟಿಸಿ, ಪ್ರಗತಿ ಪತ್ರ ವಿತರಿಸಬೇಕು. ಏ. 14ರಂದು ಡಾ. ಬಿ.ಆರ್. ಅಂಬೇಡ್ಕರ್ ದಿನಾಚರಣೆಯಿರುವುದರಿಂದ ಕಡ್ಡಾಯವಾಗಿ ಎಲ್ಲ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಜಯಂತಿ ಆಚರಣೆ ಮಾಡಬೇಕು ಎಂದು ತಿಳಿಸಿದ್ದಾರೆ.