ಮೈಸೂರು

ಅತ್ತೆ ಮಗಳೊಂದಿಗೆ ಮದುವೆ ನಿರಾಕರಣೆ: ಯುವಕ ಆತ್ಮಹತ್ಯೆ

Published On :

ಮೈಸೂರು: ಅತ್ತೆ ಮಗಳನ್ನು ತನಗೆ ವಿವಾಹ ಮಾಡಿಕೊಡಲು ನಿರಾಕರಿಸಿದ್ದರಿಂದ ಮನನೊಂದ ಯುವಕನೊಬ್ಬ ಕಾವೇರಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕು ಸಾಗರಕಟ್ಟೆ- ರಾಮನೆಹಳ್ಳಿ ನಿವಾಸಿ ಪುಟ್ಟನಾಯಕ ಎಂಬವರ ಪುತ್ರ ಸ್ವಾಮಿನಾಯಕ (25) ಆತ್ಮಹತ್ಯೆ ಮಾಡಿಕೊಂಡವರು. ಇವರು ಇಲವಾಲ ಬಳಿಯ ರುಚಿ ದಿ ಪ್ರಿನ್ಸ್ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅತ್ತೆ ಮಗಳೊಂದಿಗೆ ಮದುವೆ ಮಾಡಿಕೊಡಲು ನಿರಾಕರಿಸಿದ್ದರಿಂದ ಮನನೊಂದ ಸ್ವಾಮಿನಾಯಕ ಸಾಗರಕಟ್ಟೆ ರೇಲ್ವೆ ಬ್ರಿಡ್ಜ್ನಿಂದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಶವ ಪತ್ತೆಯಾಗಿದೆ.
ವಂಚನೆ: ಆರೋಪಿ ಬಂಧನ
ಕೆಲಸ ಕೊಡಿಸುವುದಾಗಿ ನಿರುದ್ಯೋಗಿ ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕೆ.ಆರ್. ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆಆರ್ಎಸ್ ನಿವಾಸಿ ಶ್ಯಾಮರಾವ್ ಎಂಬವರ ಪುತ್ರ ಅಮರ್ನಾಥ್ (40) ಬಂಧಿತ ಆರೋಪಿ. ಈತನು ವಿದ್ಯಾರಣ್ಯಪುರಂ ನಿವಾಸಿ ವಾಲ್ಮೀಕಿ ಸಂಜೀವ್ ಎಂಬವರಿಗೆ ಆರ್ಎಂಪಿಯಲ್ಲಿ ಕೆಲಸ ಕೊಡಿಸುವಾಗಿ ನಂಬಿಸಿ, ಜು.31 ರಂದು 28,000 ರು. ಪಡೆದು ಪರಾರಿಯಾಗಿದ್ದು, ಈ ಸಂಬಂಧ ವಾಲ್ಮೀಕಿ ಸಂಜೀವ್ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತನ ವಿರುದ್ಧ ಮೇಟಗಳ್ಳಿ ಠಾಣೆ, ಬೆಂಗಳೂರಿನ ವಿಧಾನಸೌಧ ಠಾಣೆ ತಲಾ 2 ವಂಚನೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈತನು ಇನ್ನಷ್ಟು ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆ.ಆರ್. ಉಪ ವಿಭಾಗದ ಎಸಿಪಿ ಎ.ಎನ್. ಪ್ರಕಾಶ್ಗೌಡ ಮಾರ್ಗದರ್ಶನದಲ್ಲಿ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಸಿ.ಡಿ. ಜಗದೀಶ್, ಎಸ್ಐ ಪ್ರಶಾಂತ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.
ಪತಿ, ಅತ್ತೆ ಬಂಧನ
ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಪತಿ ಮತ್ತು ಅತ್ತೆಯನ್ನು ಜಯಪುರ ಠಾಣೆಯ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರು ತಾಲೂಕು ದೂರ ಗ್ರಾಮದ ನಿವಾಸಿ ನಿಂಗಣ್ಣ ಮತ್ತು ಮಲ್ಲಮ್ಮ ಬಂಧಿತ ಆರೋಪಿಗಳು. ನಿಂಗಣ್ಣ ಪತ್ನಿ ಜಗದಾಂಬ (27) ಮಂಗಳವಾರ ಮನೆಯಲ್ಲಿ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ನಿಂಗಣ್ಣ ಮತ್ತು ಅತ್ತೆ ಮಲ್ಲಮ್ಮ ಹೊಡೆದು ಕೊಲೆ ಮಾಡಿ ನೇಣು ಬಿಗಿದಿದ್ದಾರೆ ಎಂದು ಜಗದಾಂಬ ಪೋಷಕರು ಆರೋಪಿಸಿದ್ದರು.
ನಾಲ್ವರ ಬಂಧನ
ಅಮಾನತುಗೊಂಡಿರುವ ಪೇದೆ ರಾಜುವನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್. ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಡುವಾರಹಳ್ಳಿ ನಿವಾಸಿಗಳಾದ ನಿಶ್ಚಿತ ಅ. ಸಪ್ಪೆ, ಶ್ರೀನಿವಾಸನಾಯಕ ಅ. ಗುಂಡಸೀನ, ಮಂಜೇಶ್ ಮತ್ತು ಸಂಜು ಬಂಧಿತ ಆರೋಪಿಗಳು. ಇವರು ಕೆ.ಆರ್. ಮೊಹಲ್ಲಾ ಲಕ್ಷ್ಮಿ ಚಿತ್ರಮಂದಿರ ಹಿಂಭಾಗ ನಿವಾಸಿ ಹಾಗೂ ಅಮಾನತುಗೊಂಡಿರುವ ಪೇದೆ ರಾಜು ಎಂಬವರಿಗೆ ಇರಿದಿದ್ದು, ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಕಾರುಗಳನ್ನು ಬಾಡಿಗೆಗೆ ನೀಡುವುದಾಗಿ ಮಾಲೀಕರಿಂದ ಪಡೆದು ಬೇರೆಯವರಿಗೆ ಅಡವಿಟ್ಟು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜುನನ್ನು ಪೊಲೀಸರು ಬಂಧಿಸಿದ್ದರು. ವಾಹನ ಬಾಡಿಗೆಗೆ ಪಡೆಯಲು ಶ್ರೀನಿವಾಸನಾಯಕ ಮತ್ತು ಇತರರು ರಾಜುಗೆ ಮಧ್ಯವರ್ತಿಯಾಗಿದ್ದರು. ಹಣದ ವಿಚಾರದಲ್ಲಿ ಇವರ ಮಧ್ಯೆ ಘರ್ಷಣೆ ಉಂಟಾಗಿತ್ತು. ರಾಜುವಿನ ಅಮಾನತು ಮಾತ್ರ ಇನ್ನೂ ತೆರೆವಾಗಿಲ್ಲ,
ಕೂರ್ಗಳ್ಳಿ ಮನೆಯಲ್ಲಿ ಕಳವು
ಮನೆ ಬಾಗಿಲು ಮುರಿದು 1 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಗರದ ಹೊರವಯದಲ್ಲಿರುವ ಕೂರ್ಗಳ್ಳಿಯಲ್ಲಿ ಬುಧವಾರ ನಡೆದಿದೆ. ದೇವರಾಜ್ ಮತ್ತು ಕುಟುಂಬದವರು ಮನೆಯಲ್ಲಿ ಯಾರು ಇಲ್ಲದಿದ್ದಾಗ ಬಾಗಿಲು ಮುರಿದು 50 ಸಾವಿರ ಹಾಗೂ 50 ಗ್ರಾಂ. ಚಿನ್ನಾಭರಣವನ್ನು ಯಾರೋ ಕಳವು ಮಾಡಿದ್ದಾರೆ. ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.
ಗಾಯಗೊಂಡಿದ್ದ ವ್ಯಕ್ತಿ ಸಾವು
ಪಾದಾಚಾರಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರವಾಹನ ಸವಾರನೊಬ್ಬ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಟಿ. ನರಸೀಪುರ ತಾಲೂಕು ಕಾರ್ಗಳ್ಳಿ ನಿವಾಸಿ ದಿ. ಮಾದಯ್ಯ ಎಂಬವರ ಪುತ್ರ ಧನ್ಯಕುಮಾರ್ (42) ಮೃತಪಟ್ಟವರು. ಇವರು ಸೋಮವಾರ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಟಿ. ನರಸೀಪುರ ರಸ್ತೆ ಎಂ.ಸಿ. ಹುಂಡಿ ಬಳಿ ಪಾದಚಾರಿ ಸುರೇಶ್ ಎಂಬವರಿಗೆ ಡಿಕ್ಕಿಯಾಗಿದ್ದಾರೆ. ಈ ಅಪಘಾತದಲ್ಲಿ ಸುರೇಶ್ ಕಾಲು ಮುರಿದಿದ್ದು, ಧನ್ಯಕುಮಾರ್ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೀಠೋಪಕರಣ ಜಪ್ತಿ
ಭೂಸ್ವಾಧೀನಪಡಿಸಿಕೊಂಡ ಮೇಲೆ ನ್ಯಾಯಾಲಯದ ಸೂಚನೆಯಂತೆ ಹೆಚ್ಚುವರಿ ಪರಿಹಾರವನ್ನು ಸಂಪೂರ್ಣವಾಗಿ ಪಾವತಿಸದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಎಂಡಿಎ) ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಪಿಠೋಪಕರಣಗಳನ್ನು ಬುಧವಾರ ಜಪ್ತಿ ಮಾಡಲಾಗಿದೆ. ಮೈಸೂರು ತಾಲೂಕು ಲಲಿತಾದ್ರಿಪುರ ನಿವಾಸಿ ಮಲ್ಲೇಶ್ ಎಂಬವರಿಗೆ ಸೇರಿದ ಸರ್ಕಾರಿ ಉತ್ತನಹಳ್ಳಿಯಲ್ಲಿದ್ದ 2.12 ಎಕರೆ ಜಮೀನನ್ನು ಎಂಡಿಎ ಸ್ವಾಧೀನಪಡಿಸಿಕೊಂಡಿತ್ತು. ಪರಿಹಾರವಾಗಿ ನೀಡಿದ ಹಣ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಇದ್ದಿದ್ದರಿಂದ ಸೂಕ್ತ ಪರಿಹಾರಕ್ಕಾಗಿ ಮಲ್ಲೇಶ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.