ಮೈಸೂರು

ವಿಮಾನ ನಿಲ್ದಾಣದ ವಿಸ್ತರಣೆ ಕೈಬಿಡುವ ಆದೇಶಕ್ಕೆ ತಡೆ ನೀಡಿ

Published On :

ಕ.ಪ್ರ.ವಾರ್ತೆ    ಮೈಸೂರು    ಆ. 10
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ 2ನೇ ಹಂತದ ವಿಸ್ತರಣೆ ಕಾರ್ಯ ಕೈಬಿಡಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ತೆಗೆದುಕೊಂಡ ನಿರ್ಣಯಕ್ಕೆ ಕೂಡಲೇ ರಾಜ್ಯ ಸರ್ಕಾರ ತಡೆಯಾಜ್ಞೆ ನೀಡಬೇಕು ಎಂದು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರಕ್ಕೆ ಸರಿಸಮಾನವಾಗಿ ಬೆಳೆಯಲು ಅವಕಾಶವಿದ್ದರೂ ಮೈಸೂರು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಈ ಹಿಂದಿನ ರಾಜ್ಯ ಸರ್ಕಾರ ವಿಫಲವಾಗಿದೆ. ವಿಮಾನ ನಿಲ್ದಾಣದ 2ನೇ ಹಂತದ ವಿಸ್ತರಣಾ ಕಾರ್ಯವನ್ನೇ ಕೈಬಿಡುವ ಮೂಲಕ ನಗರದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿದ್ದಾರೆ. ವಿಸ್ತರಣಾ ಪ್ರಕ್ರಿಯೆ ಕೈಬಿಟ್ಟಿರುವುದನ್ನು ಈ ಹಿಂದಿನ ಜಿಲ್ಲಾಧಿಕಾರಿ ಡಾ.ರಾಮೇಗೌಡರು ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಸಭೆಯಲ್ಲಿಯೂ ತಿಳಿಸಿಲ್ಲ. 2010 ರಲ್ಲಿ ಕೇಂದ್ರ ಸರ್ಕಾರ ಮೈಸೂರು ವಿಮಾನ ನಿಲ್ದಾಣ ವಿಸ್ತರಿಸಲು 140 ಕೋಟಿ ಬಿಡುಗಡೆ ಮಾಡಿತ್ತು. ಆದರೆ ಈ ಹಣವನ್ನು ಬಳಸದೆ, ಕೇಂದ್ರ ಸರ್ಕಾರಕ್ಕೂ ಹಣ ಬೇಡ ಎಂದು ಕಳುಹಿಸಿರುವ ಪ್ರಸ್ತಾವನೆ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರ ಹಿಂದೆ ರಿಯಲ್ ಎಸ್ಟೇಟ್ನ ಲಾಬಿ ಇರುವ ಸಾಧ್ಯತೆ ಇದೆ. ಅಧಿಸೂಚನೆ ಹೊರಡಿಸಿದ್ದ ಜಮೀನು ಕೋಟ್ಯಂತರ ರು. ಬೆಲೆ ಬಾಳುವ ಭೂಮಿಯಾಗಿದೆ. ಆದ್ದರಿಂದ ವಿಮಾನ ನಿಲ್ದಾಣದ ವಿಸ್ತರಣೆಯನ್ನೇ ತಪ್ಪಿಸಲು ಯತ್ನಿಸಿ, ಈ ಪ್ರಕ್ರಿಯೆಯಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪರ್ಯಾಯ ರಸ್ತೆ ನಿರ್ಮಾಣಕ್ಕೆ ಮನವಿ: ವಿಮಾನ ನಿಲ್ದಾಣದ 2ನೇ ಹಂತದ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಗ್ರಾಮಸ್ಥರು ವ್ಯವಸಾಯದ ಜಮೀನಿಗೆ ತೆರಳಲು ಪರ್ಯಾಯ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಆದರೆ 2ನೇ ಹಂತದ ಅಭಿವೃದ್ಧಿಯನ್ನು ಕೈಬಿಟ್ಟಿರುವುದರಿಂದ ರೈತರಿಗೆ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ಮೂಲಸೌಲಭ್ಯ ಇಲಾಖೆಯದಲ್ಲ. ಅಗತ್ಯವಿದ್ದರೆ ಜಿಲ್ಲಾಡಳಿತವೇ ಪರ್ಯಾಯ ಮಾರ್ಗ ನಿರ್ಮಿಸಿಕೊಡಲಿ ಎಂದು ಇಲಾಖೆ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ ಮತ್ತು ಕೆಐಎಡಿಬಿ ಸಿಇಒಗೆ ಪತ್ರ ಬರೆದಿದ್ದಾರೆ. ಮೈಸೂರು ನಗರ ಇತರೆ ನಗರಗಳಂತೆ ಮಾದರಿಯಾಗಿ, ಸರ್ವತೋಮುಖವಾಗಿ ಬೆಳವಣಿಗೆ ಆಗಬೇಕಿತ್ತು. ಪ್ರವಾಸೋದ್ಯಮ, ಶಿಕ್ಷಣ, ಕಂಪ್ಯೂಟರ್ ಎಂಜಿನಿಯರಿಂಗ್ ವಲಯಗಳಲ್ಲಿ ನಗರ ಬೆಳೆಯಬೇಕಿದ್ದರೆ ಕೂಡಲೇ ರಾಜ್ಯ ಸರ್ಕಾರವು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಮಂಡಕಳ್ಳಿಯ 2ನೇ ಹಂತದ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯ ಕೈಬಿಡಲು ತೆಗೆದುಕೊಂಡ ನಿರ್ಣಯಕ್ಕೆ ತಡೆಯಾಜ್ಞೆ ನೀಡಬೇಕು. ಕೆಐಎಡಿಬಿ ಕಳೆದ 2011ರ ಜೂನ್ 18ರಲ್ಲಿ 191 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಲು ತೆಗೆದುಕೊಂಡ ನಿರ್ಣಯವನ್ನೂ ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕೇಂದ್ರದ ಹಣ ಬೇಡ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಬರೆದಿರುವ ಪತ್ರವನ್ನು ಹಿಂದಕ್ಕೆ ಪಡೆಯಬೇಕು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ 2ನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಂಸದ ಎಚ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಮಂಡಳಿ ರಚಿಸಬೇಕು. ಇದಕ್ಕೆ ಎಎಐ, ವಿಮಾನ ನಿರ್ವಾಹಕರು, ಕೆಐಎಡಿಬಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ನಗರಾಭಿವೃದ್ಧಿ ಮುಂತಾದ ಸಂಸ್ಥೆಗಳ ಮುಖ್ಯಸ್ಥರು ಸದಸ್ಯರಾಗಿರಬೇಕು ಎಂದು ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.