ಮೈಸೂರು

ಕೆಲ್ಸ ಕೊಡ್ಸಿ, ವರ್ಗಾ ಮಾಡಿ, ಮದ್ವೆಗೆ, ನಮ್ಮೂರಿಗೆ ಬನ್ನಿ...

Published On :

ಕ.ಪ್ರ.ವಾರ್ತೆ    ಮೈಸೂರು    ಆ.11
ಕೆಲಸ ಕೊಡಿಸಿ, ವರ್ಗಾವಣೆ ಮಾಡಿಸಿ, ಮದುವೆಗೆ ಬನ್ನಿ, ಊರಿಗೆ ಬನ್ನಿ, ಶಾಲಾ, ಕಾಲೇಜುಗಳಿಗೆ ಮಾನ್ಯತೆ ಕೊಡಿಸಿ, ಕಾರ್ಯಕ್ರಮಕ್ಕೆ ಬನ್ನಿ, ನಿಮ್ಮ 66ನೇ ಹುಟ್ಟಹಬ್ಬಕ್ಕೆ ಶುಭಾಶಯ...
-ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕರು ಹೇಳುತ್ತಿದ್ದ ಮಾತುಗಳು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸ್ವಗೃಹದಲ್ಲಿ ಸಿದ್ದರಾಮಯ್ಯ ಅವರು ಭಾನುವಾರ ಬೆಳಗ್ಗೆ ಜನತಾ ದರ್ಶನ ನಡೆಸಿದ ವೇಳೆ ಈ ದೃಶ್ಯ ಸಾಮಾನ್ಯವಾಗಿತ್ತು.
ಮುಂಜಾನೆಯಿಂದಲೇ ಜಮಾಯಿಸಿದ್ದರು: ಮುಂಜಾನೆಯಿಂದ ಸಾರ್ವಜನಿಕರು ಮುಖ್ಯಮಂತ್ರಿ ನಿವಾಸದ ಎದುರು ಜಮಾಯಿಸಿದ್ದರು. ಬೆಳಗ್ಗೆ 9.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಯ ಗೇಟ್ ಬಳಿ ಬರುತ್ತಿದ್ದಂತೆ ಮನವಿ ಸಲ್ಲಿಸಲು ಸಾರ್ವಜನಿಕರು ಮುಗಿಬಿದ್ದರು. ಸಿದ್ದರಾಮಯ್ಯ ಎಲ್ಲರ ಮನವಿ ಸ್ವೀಕರಿಸಿದರು.
ಅಂಗನವಾಡಿಗೆ ಜಾಗ ಇಲ್ಲ: ಗ್ರಾಮದಲ್ಲಿರುವ ಶಾಲೆ ಹಾಗೂ ಅಂಗನವಾಡಿಗೆ ಜಾಗ ಇಲ್ಲ. ಐದು ವರ್ಷದಿಂದ ಮನವಿ ಸಲ್ಲಿಸಿದ್ದರೂ ಜಾಗ ನೀಡಿಲ್ಲ. ಕೂಡಲೇ ಶಾಲೆ ಹಾಗೂ ಅಂಗನವಾಡಿಗೆ ಜಾಗ ಕೊಡಿಸುವಂತೆ ಚಾಮರಾಜನಗರ ಜಿಲ್ಲೆಯ ತಾವರೆಕಟ್ಟೆಯ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶಾಲೆಗೆ ಅನುದಾನ ನೀಡಿ: ಹರವೆ ಗ್ರಾಮದ ಗುರುಮಲ್ಲೇಶ್ವರ ಪ್ರಾಥಮಿಕ ಶಾಲೆಯನ್ನು 25 ವರ್ಷಗಳಿಂದ ನಡೆಸುತ್ತಿದ್ದು, 4 ಶಿಕ್ಷಕರಿದ್ದಾರೆ. ಶಾಲೆಗೆ ಅನುದಾನ ನೀಡುವಂತೆ ಶಾಲಾ ಮಂಡಳಿ ಸದಸ್ಯರು ಮನವಿ ಮಾಡಿದರು. ಖಾಸಗಿ ಶಾಲೆಯನ್ನು ಸರ್ಕಾರಿ ಅನುದಾನಿತ ಶಾಲೆಯನ್ನಾಗಿ ಮಾಡುವಂತೆ ಮನವಿ ವ್ಯಕ್ತಿಯೊಬ್ಬರು ಸಲ್ಲಿಸಿದರು.
ಗಣೇಶ್ ಎಂಬವರು ಬೆಂಗಳೂರಿನ ಆಲ್ ಇಂಡಿಯಾ ಕರಾಟೆ ಫೆಡರೇಷನ್ಗೆ ಮಾನ್ಯತೆ ಸಿಕ್ಕಿಲ್ಲ. ಕೇಂದ್ರ ಕ್ರೀಡಾ ಸಚಿವಾಲಯದಿಂದ ಮಾನ್ಯತೆ ದೊರಕಿಸಿಕೊಡುವಂತೆ ಮನವಿ ಮಾಡಿದರು. ಗಂಗಾ ಕಲ್ಯಾಣ ಯೋಜನೆಯಡಿ ಬಾವಿ ತೋಡಿಸಿಕೊಡಿ, ತಮ್ಮ ಮಗಳು ಎಂಎ ಮಾಡಿದ್ದಾಳೆ ಅವಳಿಗೆ ಕೆಲಸ ಕೊಡಿಸಿ ಎಂದು ಇಬ್ಬರು ಮಹಿಳೆಯರು ಮನವಿ ನೀಡಿದರು. ಸಾತಗಳ್ಳಿಯ ಬಡಾವಣೆ ನಿರ್ಮಾಣದಿಂದಾಗಿ ಭೂಮಿ ಕಳೆದುಕೊಂಡವರಿಗೆ ಎಂಡಿಎ ವತಿಯಿಂದ ಪರಿಹಾರ ಕೊಡಿಸುವಂತೆ ಕೋರಿದರು.
ಕಾನೂನು ತಿದ್ದಲೇ...: ನೀವು ಸಿಎಂ ಅಲ್ವೇ, ಹೇಗಾದರೂ ಮಾಡಿ ವರ್ಗಾವಣೆ ಮಾಡಿಸಿಕೊಡುವಂತೆ ಸರ್ಕಾರಿ ಉದ್ಯೋಗಿಯೊಬ್ಬರು ಕೋರಿದರು.
ನಾನು ಸಿಎಂ ಅಂತ ಕಾನೂನನ್ನು ತಿದ್ದಲೇ ಹಾಗೆಲ್ಲಾ ಕಾನೂನನ್ನು ತಿದ್ದಲು ಆಗೋದಿಲ್ಲ, ವರ್ಗಾವಣೆ ಮಾಡೋದಕ್ಕೂ ಆಗೋದಿಲ್ಲ. ನನ್ನ ಜೀವ ತಿನ್ನಬೇಡಿ ಅರ್ಥ ಮಾಡಿಕೊಳ್ಳಿ ಎಂದು ಆ ವ್ಯಕ್ತಿಯನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎ.ಎನ್. ರಾಜಣ್ಣ, ಎಸ್ಪಿ ಅಭಿನವ್ ಖರೆ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.