ದೇಶದ ಸಂಪತ್ತು ಸಮಾನ ಹಂಚಿಕೆಯಾಗಲಿ
ಕ.ಪ್ರ.ವಾರ್ತೆ ಮೈಸೂರು ಆ.11
ಸರ್ವರಿಗೂ ದೇಶದ ಸಂಪತ್ತು ಸಮಾನ ಹಂಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಟಿ ಮೀಡಿಯಾ ಸಂಸ್ಥೆಯು ಆಂದೋಲನ ದಿನಪತ್ರಿಕೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಟಿ ಟುಡೆ ಆಂಗ್ಲ ಸಂಜೆ ದಿನಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಂದಕ ನಿವಾರಣೆಯಾಗಲಿ: ಸಮಾಜದಲ್ಲಿ ಅನೇಕ ಏರುಪೇರುಗಳಿದ್ದು, ಆರ್ಥಿಕವಾಗಿ ಸಾಮಾಜಿಕವಾಗಿ ಅನೇಕ ಕಂದಕಗಳಿವೆ. ಬಡವರು ಹಾಗೂ ಶ್ರೀಮಂತರಿದ್ದಾರೆ. ಅವಕಾಶ ವಂಚಿತರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಜಾತ್ಯತೀತ ಹಾಗೂ ಸಮಾಜವಾದಿ ತತ್ವದ ಆಧಾರದ ಮೇಲೆ ಸಮಾಜ ಕಟ್ಟಬೇಕು ಎಂದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿ: ಅವಕಾಶ ವಂಚಿತರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಜವಾಬ್ದಾರಿ ಪತ್ರಿಕೆಗಳು ನಿರ್ವಹಿಸಬೇಕು. ಪ್ರಜಾಪ್ರಭುತ್ವ ಮುಖೇನ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಂತರ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗವು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಪೂರ್ವಗ್ರಹ ಪೀಡಿತವಾಗಿರಬಾರದು: ಯಾವುದೇ ಪತ್ರಿಕೆಗಳು ಪೂರ್ವಗ್ರಹ ಪೀಡಿತವಾಗಿರಬಾರದು. ವಸ್ತುನಿಷ್ಠ ವರದಿ, ತನಿಖಾ ವರದಿ ಹಾಗೂ ಜನಪರ ಕಾಳಜಿಗೆ ಆದ್ಯತೆ ನೀಡಬೇಕು. ಊಹೆ ಅಥವಾ ಆಧಾರ ರಹಿತ ಸುದ್ದಿಗಳಿಂದ ಜನರನ್ನು ನಂಬಿಸಲಾಗದು. ಆದ್ದರಿಂದ ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
ಮೈಸೂರಿನಲ್ಲೇ ಮೊದಲ ಪತ್ರಿಕೆ: ಮೈಸೂರಿನಲ್ಲಿ 1849ರಲ್ಲಿ ಭಾಷ್ಯಂ ಎಂಬುವರು ಬ್ರಿಟಿಷರ ಕಾಲದಲ್ಲಿಯೇ ಪತ್ರಿಕೆ ಆರಂಭಿಸಿದ್ದು, ಇಲ್ಲಿನ ಪತ್ರಿಕಾರಂಗಕ್ಕೆ ಇತಿಹಾಸವಿದೆ. ಅಗರಂ ರಂಗಯ್ಯ ಸೇರಿದಂತೆ ಅನೇಕ ಮಹಾನೀಯರು ಕೊಡುಗೆ ನೀಡಿದ್ದಾರೆ. ಅಂದಿನಿಂದ ಅನೇಕ ಪತ್ರಿಕೆಗಳು ಹುಟ್ಟಿದ್ದು, ಇದರಲ್ಲಿ ಯಶಸ್ಸು ಹಾಗೂ ಸೋಲು ಕಂಡವರು ಇದ್ದಾರೆ. ಸಿಟಿ ಟುಡೆ ಯಶಸ್ಸಿನ ಸಾಲಿಗೆ ಸೇರ್ಪಡೆಯಾಗಲಿ ಎಂದು ಅವರು ಆಶಿಸಿದರು.
ಇದೇ ವೇಳೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಪತ್ರಿಕಾಕ್ಷೇತ್ರದ ಕೃಷ್ಣವಟ್ಟಂ, ಉದ್ಯಮ ಕ್ಷೇತ್ರದ ಆರ್.ಗುರು, ಶಿಕ್ಷಣ ಕ್ಷೇತ್ರದ ಆರ್. ವಾಸುದೇವಮೂರ್ತಿ, ಸಮಾಜ ಸೇವಾ ಕ್ಷೇತ್ರದ ಎಂ.ರಾಜೇಂದ್ರ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಗೋ. ಮಧುಸೂದನ್, ಎಸ್. ಚಿಕ್ಕಮಾದು, ಎಂ.ಕೆ. ಸೋಮಶೇಖರ್, ಮಾಜಿ ಶಾಸಕರಾದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ, ಡಿ. ಮಾದೇಗೌಡ, ಎಚ್.ಎಸ್. ಶಂಕರಲಿಂಗೇಗೌಡ, ಎಂ.ಸತ್ಯನಾರಾಯಣ, ತೋಂಟದಾರ್ಯ, ಸಿ. ರಮೇಶ್, ಎ.ಆರ್. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸಿಟಿ ಮೀಡಿಯಾ ಸಂಸ್ಥಾಪಕ ಹಾಗೂ ಪ್ರಕಾಶಕ ಕೆ. ರಾಕೇಶ್ ರಾಜೇ ಅರಸ್ ಸ್ವಾಗತಿಸಿದರು. ಪತ್ರಿಕೋದ್ಯಮಿ ರಾಜಶೇಖರ ಕೋಟಿ ಆಶಯ ನುಡಿಗಳಾಡಿದರು. ಪ್ರಧಾನ ಸಂಪಾದಕ ಸತೀಶ್ ಚಪ್ಪರಿಕೆ, ಸಂಪಾದಕ ಅರವಿಂದ ನಾವಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

