ಮೈಸೂರು

ನಂಜನಗೂಡು ವಕೀಲರ ಸಂಘದ ಚುನಾವಣೆ

Published On :

ಕ.ಪ್ರ.ವಾರ್ತೆ    ನಂಜನಗೂಡು    ಆ. 13
ನೂರ ಮೂವತ್ತೈದು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಇಲ್ಲಿನ ವಕೀಲರ ಸಂಘಕ್ಕೆ ಆ. 18ರಂದು ಚುನಾವಣೆ ನಿಗದಿಯಾಗಿದ್ದು, ಕಣ ರಂಗೇರುತ್ತಿದೆ.
ಅಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಐದು ಮಂದಿ ಕಾರ್ಯಕಾರಿಣಿ ಸದಸ್ಯ ಸ್ಥಾನಗಳಿಗಾಗಿ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ 17 ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿ, ನಂತರ 12 ಮಂದಿ ವಾಪಸ್ ಪಡೆದು 5 ಮಂದಿ
ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಐವರು ಆಕಾಂಕ್ಷಿಗಳು ಕಣದಲ್ಲಿರುವುದು ಸ್ಥಳೀಯ ನ್ಯಾಯಾಲಯ ಇತಿಹಾಸದಲ್ಲಿ ದಾಖಲೆ ಎನ್ನುತ್ತಾರೆ ಹಿರಿಯ ವಕೀಲ ಬಿ. ಜಯದೇವಪ್ಪ.
ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎನ್. ಶ್ರೀಕಂಠಪ್ರಸಾದ್, ಮಾಜಿ ಕಾರ್ಯದರ್ಶಿಗಳಾದ ಯಡಿಯಾಲ ಎಂ. ಮಹೇಶ್, ಟಿ. ಶ್ರೀಕಂಠ ಸೇರಿದಂತೆ ಎ.ಬಿ. ಮಹೇಶ್ಬಾಬು, ತಗಡೂರು ಶ್ರೀಕಂಠ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಎಲ್. ಮಹದೇವು, ಎಸ್. ಸೋಹನ್ಕುಮಾರ್ ಮತ್ತು ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿರುವ ಎಂ. ಶ್ರೀಕಂಠ ಆಕಾಂಕ್ಷಿಗಳಾಗಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಗುಂಡರೆಡ್ಡಿ, ಕೆಂಪರಾಜು ಮತ್ತು ಎಂ. ಶ್ರೀನಿವಾಸ್ ಕಣದಲ್ಲಿದ್ದಾರೆ. ಆ. 18ರ ಮತದಾನ ದಿನದಂದೇ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾಧಿಕಾರಿ ಬಸವಟ್ಟಿಗೆ ಕುಮಾರ್ ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಎನ್. ಶ್ರೀಕಂಠಪ್ರಸಾದ್, ಯಡಿಯಾಲ ಎಂ. ಮಹೇಶ್ ಮತ್ತು ಎ.ಪಿ. ಮಹೇಶ್ಬಾಬು ನಡುವೆ ತುರುಸಿನ ತ್ರಿಕೋನ ಸ್ಪರ್ಧೆ ನಡೆಯುವುದೆಂಬ ಮಾತು ವಕೀಲರ ವಲಯದಲ್ಲಿ ಕೇಳಿ ಬರುತ್ತಿದೆ. ಸೀನಿಯರ್, ಜೂನಿಯರ್ ಎಂಬ ಗುಂಪಿನೊಂದಿಗೆ ಜಾತಿ ಲೆಕ್ಕಾಚಾರಗಳು ಕೆಲಸ ಮಾಡುತ್ತಿವೆ ಎನ್ನಲಾಗಿದೆ. ಸಂಘವನ್ನು ಕ್ರಿಯಾಶೀಲವನ್ನಾಗಿ ಕೊಂಡೊಯ್ಯುವರೆಂಬ ಮಾತು ಎನ್. ಶ್ರೀಕಂಠಪ್ರಸಾದ್ಗೆ ಶ್ರೀರಕ್ಷೆಯಾದರೆ, ಕಾರ್ಯದರ್ಶಿಯಾಗಿ ಮಾಡಿರುವ ಕೆಲಸಗಳು ಮಹೇಶ್ಗೆ ನೆರವಾಗಬಹುದು. ಹೊಸಮುಖ ಮಹೇಶ್ಬಾಬು ಅವರನ್ನು ಬೆಂಬಲಿಸಿ ಗುಂಪೊಂದು ಪ್ರಬಲವಾಗಿ ಕೆಲಸ ಮಾಡುತ್ತಿರುವುದು ಯಾವ ಪರಿಣಾಮ ಬೀರಬಹುದೆಂಬುದನ್ನು ಕಾದು ನೋಡಬೇಕಾಗಿದೆ.
ಕಾರ್ಯದರ್ಶಿ ಸ್ಥಾನಕ್ಕೆ ಎಲ್. ಮಹದೇವು ಮತ್ತು ಎಸ್. ಸೋಹನ್ಕುಮಾರ್ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚು. ನ್ಯಾಯಾಲಯ ಆವರಣದಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಾಣ, ತ್ವರಿತ ನ್ಯಾಯಾಲಯ ಮಂಜೂರು, ಇಂಡಸ್ಟ್ರೀಯಲ್
ಟ್ರೈಬ್ಯೂನಲ್ ಮತ್ತು ವರ್ಕ್ಮೆನ್ ಕಾಂಪೆನ್ಸೇಶನ್ ಟ್ರೈಬೂನಲ್ ಸ್ಥಾಪನೆಗೆ ಒತ್ತು ನೀಡುವುದಾಗಿ ಮೂರು ದಶಕಗಳಿಗೂ ಹೆಚ್ಚು ವೃತ್ತಿ ಅನುಭವ ಹೊಂದಿರುವ ಶ್ರೀಕಂಠಪ್ರಸಾದ್ ಭರವಸೆ ಹರಿಬಿಟ್ಟಿದ್ದಾರೆ.
ಕಾರ್ಯಕಾರಿಣಿಯ ಒಟ್ಟು ಐದು ಸ್ಥಾನಗಳಿಗೆ ನಾಲ್ವರು ಈಗಾಗಲೆ ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಳಿದ ಒಂದು ಸ್ಥಾನಕ್ಕೆ ಆಯ್ಕೆ ನಡೆಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.